ಯರಗಟ್ಟಿ, ಕಟಕೋಳ ಮುಖ್ಯರಸ್ತೆ ದುರಸ್ತಿ ಯಾವಾಗ?

| Published : Feb 19 2025, 12:46 AM IST

ಯರಗಟ್ಟಿ, ಕಟಕೋಳ ಮುಖ್ಯರಸ್ತೆ ದುರಸ್ತಿ ಯಾವಾಗ?
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಹತ್ತು ವರ್ಷಗಳಿಂದ ಯರಗಟ್ಟಿ, ಕಟಕೋಳ ಮುಖ್ಯ ರಸ್ತೆ ಹದಗೆಟ್ಟಿದ್ದು, ಸವದತ್ತಿ ತಾಲೂಕು ಮುಕ್ತಾಯದ ವರಗೆ ಸುಮಾರು 13 ಕಿ.ಮೀ. ಸಂಪೂರ್ಣ ರಸ್ತೆ ಉದ್ದ ಅಗಲಕ್ಕೂ ಮಾರುದ್ದ ತೆಗ್ಗು-ಗುಂಡಿಗಳದ್ದೇ ಕಾರುಬಾರು.

ಶಶಿಧರ ಎಮ್ ಪಾಟೀಲ

ಕನ್ನಡಪ್ರಭ ವಾರ್ತೆ ಯರಗಟ್ಟಿ

ಕಳೆದ ಹತ್ತು ವರ್ಷಗಳಿಂದ ಯರಗಟ್ಟಿ, ಕಟಕೋಳ ಮುಖ್ಯ ರಸ್ತೆ ಹದಗೆಟ್ಟಿದ್ದು, ಸವದತ್ತಿ ತಾಲೂಕು ಮುಕ್ತಾಯದ ವರಗೆ ಸುಮಾರು 13 ಕಿ.ಮೀ. ಸಂಪೂರ್ಣ ರಸ್ತೆ ಉದ್ದ ಅಗಲಕ್ಕೂ ಮಾರುದ್ದ ತೆಗ್ಗು-ಗುಂಡಿಗಳದ್ದೇ ಕಾರುಬಾರು. ಕಡಕೋಳ ಮತ್ತು ತೋರಗಟ್ಟಿ ಇತ್ಯಾದಿ ಗ್ರಾಮಗಳಿಗೆ ಸಂಚರಿಸಲು ಇದೇ ಮುಖ್ಯರಸ್ತೆಯಿಂದ ಸಂಚರಿಸಬೇಕಾಗುತ್ತದೆ.

ಯರಗಟ್ಟಿಯಿಂದ, ಕಟಕೋಳ, ತೋರಣಗಟ್ಟಿ, ರಾಮದುರ್ಗ ಮಾರ್ಗವಾಗಿ, ತೋರಣಗಟ್ಟಿಯವರಗೆ ಸಂಪರ್ಕಿಸುವ ಈ ಮುಖ್ಯರಸ್ತೆಯಲ್ಲಿ ಸಂಚರಿಸುವವರ ಹಣೆಬರಹ ಹೇಳತೀರದಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮದಲ್ಲಿನ ಕಾರ್ಯಕ್ರಮಗಳಿಗೆ ಇದೇ ರಸ್ತೆ ಸಂಪರ್ಕಿಸಬೇಕು. ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಂಡ್ರೂ ಕಾಣದ ಹಾಗೇ ಕಣ್ಮುಚ್ಚಿ ಕುಳಿತ ಆಡಳಿತ ವರ್ಗಕ್ಕೆ ಜನತೆ ಮಾತ್ರ ದಿನನಿತ್ಯ ಹಿಡಿಶಾಪ ಹಾಕಿ ಸಂಚರಿಸುವುದು ತಪ್ಪುತ್ತಿಲ್ಲ.

ಈ ರಸ್ತೆಯ ಬದಿಯಲ್ಲಿ ನಿರ್ಮಿಸಿದ ಗಟಾರಗಳು ಕೂಡ ಮುಚ್ಚಿ ರಸ್ತೆ ಮೇಲೆ ನೀರು ನಿಲ್ಲುತ್ತಿದೆ. ಇದ್ರಿಂದ ಬೃಹತ್‌ ತೆಗ್ಗು-ಗುಂಡಿ ನಿರ್ಮಾಣವಾಗಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಈ ರಸ್ತೆಯಲ್ಲಿ ಕಾಲುವೆ ರೀತಿ ಕೊರೆತಗಳಾಗಿ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಆಸ್ಪತ್ರೆಗೆ ದಾಖಲಾದ ಉದಾಹರಣೆಗಳು ಸಾಕಷ್ಟು ಇವೆ. ಡಾಂಬರೀಕರಣ ಮಾಡಿದ್ರೂ ಸಂಪೂರ್ಣ ಕಿತ್ತು ತೆಗ್ಗು ಗುಂಡಿಗಳು ಬಿದ್ದು ಹಾಳಾಗಿದೆ.

ದಿನಂಪ್ರತಿ 13 ಕಿ.ಮೀ ಸಂಚರಿಸಲು ಒಂದು ಗಂಟೆ ಸಮಯಬೇಕು. ಈ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಮಾಡುವ ಸರಕಾರಿ, ಖಾಸಗಿ ವಾಹನ, ಶಾಲಾವಾಹನ, ಮುಂತಾದ ವಾಹನಗಳು ದಿನ ನಿತ್ಯ ಸಂಚರಿಸುವುದು ಕಷ್ಟಕರವಾಗಿದೆ. ಇಲ್ಲಿನ ಕಟಕೋಳ ಸಿದ್ರಾಯಜ್ಜನವರ, ಗೊಡಚಿ ವೀರಭದ್ರೇಶ್ವರ ದೇವಸ್ಥಾನ ಅಂತಹ ಪ್ರಸಿದ್ಧ ದೇವಾಲಯಕ್ಕೆ ತೆರಳುವ ಭಕ್ತರು ಬೇಡಪ್ಪ ಬೇಡ ಈ ರಸ್ತೆ ಸಹವಾಸ ಅನ್ನುವಂತಾಗಿದೆ. ಈ ಮಾರ್ಗದಲ್ಲಿ ದಿನ ನಿತ್ಯ ಸಂಚರಿಸುವ ವಾಹನಗಳ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡೆ ಸಂಚರಿಸಬೇಕು. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಮಾಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಯರಗಟ್ಟಿಯಿಂದ ಕಟಕೋಳ ಮಾರ್ಗವಾಗಿ ತೋರಣಗಟ್ಟಿ ಕ್ರಾಸ್ ವರಗೆ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡ ಸಂಚಾರ ಮಾಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈಗಲಾದರೂ ಪರಿಶೀಲಿಸಿ ರಸ್ತೆ ದುರಸ್ತಿಗೆ ಕ್ರಮ ವಹಿಸದಿದ್ರೆ ಮುಂಬರುವ ದಿನಗಳಲ್ಲಿ ಹೆದ್ದಾರಿ ಬಂದ್‌ ಮಾಡಿ ಹೋರಾಟ ಮಾಡಲಾಗುವುದು.

ಇಮ್ತಿಯಾಜ ಖಾದ್ರಿ, ಬಿಜೆಪಿ ಯುವ ಮುಖಂಡರು

ರೈತರು ಟ್ರ್ಯಾಕ್ಟರ್ ಮುಖಾಂತರ ಕಬ್ಬು, ತರಕಾರಿ ಸಾಗಿಸುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಮತ್ತು ಬೈಕ್ ಸವಾರರು ಗಾಯಗೊಂಡ ಹಲವಾರು ಘಟನೆಗಳು ಸಂಭವಿಸಿವೆ. ಶಿಘ್ರದಲ್ಲಿ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಬೇಕು.

ರಾಘವೇಂದ್ರ ಕಡಕೋಳ, ಪ್ರಗತಿ ಪರ ರೈತ