ಧಾರವಾಡ:

ಸದಾ‌ಕಾಲ ಅಧ್ಯಯನಶೀಲರಾದಾಗ ಮಾತ್ರ ಜೀವನದ ಉದ್ದಕ್ಕೂ ಕ್ರಿಯಾಶೀಲವಾಗಿರಲು ಸಾಧ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.

ಕವಿವಿ, ಪಾವಟೆ ಇನ್‌ಸ್ಟಿಟ್ಯೂಟ್‌ ಆಫ್ ಮೇಥಾಮೇಟಿಕಲ್ ಸೈನ್ಸ್, ಗಣಿತ ಶಾಸ್ತ್ರ ಅಧ್ಯಯನ ವಿಭಾಗ, ಕಂಪ್ಯೂಟರ್ ವಿಜ್ಞಾನ ವಿಭಾಗ ಮತ್ತು ಸಂಖ್ಯಾಶಾಸ್ತ್ರ ಅಧ್ಯಯನ ವಿಭಾಗಗಳ ಸಹಯೋಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ವಿಶ್ರಾಂತ ಕುಲಪತಿ ಪ್ರೊ. ಎಚ್.ಬಿ. ವಾಲಿಕಾರ ಅವರ 75ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಲಿಕಾರ ಒಬ್ಬ ಶ್ರೇಷ್ಠ ಗಣಿತ ಸಂಶೋಧಕರಾಗಿ ತಮ್ಮದೇ ಆದ ಕೊಡುಗೆಯನ್ನು ಗಣಿತ ಕ್ಷೇತ್ರಕ್ಕೆ ನೀಡಿದ್ದಾರೆ. ಚರಕ, ಶ್ರೀನಿವಾಸ ರಾಮಾನುಜನ್, ಅಬ್ದುಲ್ ಕಲಾಂ, ವಿಕ್ರಮ ಸಾರಾಭಾಯಿ ವಿಶ್ವದ ಸಂಶೋಧಕರಾಗಿ ವಿಶೇಷ ಕೊಡುಗೆ ನೀಡಿದ್ದಾರೆ ಎಂದ ಅವರು, ವಿದೇಶಿ ಆಕ್ರಮಣದಿಂದ ಭಾರತೀಯ ಸಂಶೋಧನೆಗಳನ್ನು ಮರೆ ಮಾಚಲಾಗಿತ್ತು. ಇದೀಗ ಮುಂಚೂಣಿಯಲ್ಲಿದೆ. ಜಗತ್ತಿಗೆ ಶೂನ್ಯ ನೀಡಿದ್ದು ನಾವು ಎಂದು ಹೇಳಿದರು.

ರಾಜ್ಯ ಕಾನೂನು ಮತ್ತು ‌ಸಂಸದೀಯ ಸಚಿವ ಎಚ್.ಕೆ. ಪಾಟೀಲ ಮಾತನಾಡಿ. ವಾಲಿಕಾರ ಇಂದಿಗೂ ವಿದ್ಯಾರ್ಥಿಯಾಗಿ ಇಳಿ ವಯಸ್ಸಿನಲ್ಲಿ ಕೂಡ ಗಣಿತ ಬೋಧನೆಯಲ್ಲಿ ತೊಡಗಿಕೊಂಡಿರುವುದು ಅವರ ಶ್ರೇಷ್ಠತೆಗೆ ಕೈಗನ್ನಡಿಯಾಗಿದೆ ಎಂದರು.


ವಾಲಿಕಾರ ಅವರು ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ ಎಂದ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್, ಪ್ರತಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಆಗುತ್ತಿರುವುದರಿಂದ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿಯುತ್ತಿದ್ದು ಈ ಕುರಿತು ಸಮರ್ಪಕ ಚರ್ಚೆ ಆಗಬೇಕಾಗಿದೆ. ಪ್ರಸ್ತುತ ವಿಶ್ವ ದರ್ಜೆಯ ಗುಣಮಟ್ಟದ ವಿವಿಗಳು ಬೇಕು ಎಂದ ಅವರು, ರಾಜಕೀಯವನ್ನು ಶೈಕ್ಷಣಿಕವಾಗಿ ದೂರವಿಟ್ಟಾಗ ಮಾತ್ರ ಶೈಕ್ಷಣಿಕ ಸುಧಾರಣೆ ತರಲು ಸಾಧ್ಯವೆಂದು ಹೇಳಿದರು.

ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ, ಪ್ರೊ. ವಾಲಿಕಾರ ಅವರು ಶಿಕ್ಷಕ ವೃತ್ತಿಯನ್ನು ಬಹಳ ಪ್ರೀತಿಸುವ ವ್ಯಕ್ತಿ ಆಗಿದ್ದಾರೆ ಎಂಬುದಕ್ಕೆ ಅವರ ಸಂಶೋಧನೆಯೇ ಸಾಕ್ಷಿಯಾಗಿದೆ ಎಂದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಎನ್.ಎಚ್. ಕೊನರೆಡ್ಡಿ, ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ಪ್ರೊ. ಎಚ್.ಬಿ. ವಾಲಿಕಾರ, ನಾನು ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಬೇಕು ಎಂಬ ಹಂಬಲವಿತ್ತು, ಆದರೂ ಕೃಷಿ ಬಗ್ಗೆ ಬಹಳ ಒಲವು ಇತ್ತು ಎಂದು ಹೇಳಿದರು. ಈ ವೇಳೆ ಗಣಿತ ವಿಭಾಗದಲ್ಲಿ ದತ್ತಿ ಉಪನ್ಯಾಸ ನೀಡಲು ₹ 3 ಲಕ್ಷ ನೀಡಿದರು. ಅಭಿನಂದನಾ ಸಮಿತಿಯಿಂದ ಅವರನ್ನು ಸನ್ಮಾಸಿ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಪ ಸದಸ್ಯರಾದ ಎಫ್.ಎಚ್. ಜಕ್ಕಪ್ಪನವರ, ಪ್ರೊ. ಎಸ್.ವಿ. ಸಂಕನೂರ, ಪ್ರೊ. ಎ.ಬಿ. ವೇದಮೂರ್ತಿ, ಡಾ. ಸುಭಾಷಚಂದ್ರ, ನಾಟೀಕಾರ, ಪ್ರೊ. ಎಸ್.ಸಿ. ಶಿರಾಳಶೆಟ್ಟಿ, ಗುಲ್ಬರ್ಗ ವಿವಿ ಕುಲಪತಿ ‌ಪ್ರೊ. ಶಶಿಕಾಂತ ಉಡಕೇರಿ, ಡಾ. ಸರಜು ಕಾಟ್ಕರ, ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಮಾಲಗತ್ತಿ, ಮುದ್ದೇಬಿಹಾಳ ಅಭ್ಯುದಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಸೇರಿದಂತೆ ಇತರರು ಇದ್ದರು.ಪ್ರಸ್ತುತ ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಹದಗೆಟ್ಟಿವೆ. ಕುಲಪತಿಗಳು ವಿಶ್ವವಿದ್ಯಾಲಯದ ಸಿಬ್ಬಂದಿಗೆ ಸಂಬಳ ನೀಡಲು ಪರದಾಡುತ್ತಿದ್ದಾರೆ. ವಿವಿಗಳಲ್ಲಿ 14,000 ಸಾವಿರ ಹುದ್ದೆಗಳು ಖಾಲಿ ಇದ್ದು ಪ್ರಾಧ್ಯಾಪಕರು, ಅಕಾಡೆಮಿ ಕೌನ್ಸಿಲ್ ಸದಸ್ಯರು ಮತ್ತು ಸಿಂಡಿಕೇಟ್ ಸದಸ್ಯರು ಧ್ವನಿ ಎತ್ತ ಬೇಕು. ಪ್ರಸ್ತುತ 3 ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಶೇ. ಶೇ.45ರಷ್ಟು ಕುಸಿದಿದ್ದು ಇದು ಅತ್ಯಂತ ಗಂಭೀರ ಸಮಸ್ಯೆ ಆಗಿದೆ.

ಎಚ್‌.ಕೆ. ಪಾಟೀಲ ಸಚಿವ