ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಪ್ರಶ್ನೆಸಿ ಜೆಜೆಹಟ್ಟಿ ತಿಪ್ಪೇಸ್ವಾಮಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರತಿ ಬಾರಿ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಹೊರಗಿನವರಿಗೆ ಮಣೆ ಹಾಕಿದ್ರೆ ಇಲ್ಲಿದ್ದೋರು ಎಲ್ಲಿ ಹೋಗಬೇಕು. ಇದನ್ನು ಯಾರಾದರೂ ರಾಜಕೀಯ ಸಂಸ್ಕೃತಿ ಅಂತಾರಾ? ಹೀಗೆಂದು ಪ್ರಶ್ನಿಸಿದವರು ನಗರಸಭೆ ಮಾಜಿ ಅಧ್ಯಕ್ಷಬುಧವಾರ ಇಲ್ಲಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ಹೊರಗಿನವರ ತಂದು ಚುನಾವಣೆಗೆ ನಿಲ್ಲಿಸುವ ಪರಿಪಾಟಲು ಬೆಳೆಸಿಕೊಂಡಿದ್ದಾರೆ. ಸ್ಥಳೀಯರಿಗೆ ಟಿಕೆಟ್ ನೀಡಿದರೆ ಗೆಲ್ಲುವ ಸಾಮರ್ಥ್ಯ ಇಲ್ಲವೆಂದುಕೊಂಡರೆ ಹೇಗೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ ಹಾಗೂ ಜಗಳೂರಿನ ಇಮಾಮ್‍ಸಾಬ್ ರವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಸಹ ಸ್ಥಳೀಯರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿರುವುದಿಲ್ಲ. ಬೇರೆ ಕಡೆಯಿಂದ ಬಂದು ಇಲ್ಲಿ ಗೆದ್ದರೆ ನಮ್ಮ ಸಮಸ್ಯೆ ಹೇಳಿಕೊಳ್ಳು ವುದಕ್ಕೆ ಆಗಲ್ಲ. ಆದ್ದರಿಂದ ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ನಮ್ಮ ಸಮಸ್ಯೆ ಹೇಳಿಕೊಳ್ಳಬಹುದು ಎಂದರು.ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಸ್ಥಳಿಯರನ್ನು ಆಯ್ಕೆ ಮಾಡಬೇಕು ಅದರಲ್ಲೂ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿಯವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವಂತೆ ಪಕ್ಷದ ಮುಖಂಡರನ್ನು ಒತ್ತಾಯಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ದಿಂದ 24 ಜನ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18 ಲಕ್ಷ ಮತದಾರರ ಪೈಕಿ ಪರಿಶಿಷ್ಟ ಜಾತಿಯ 8 ಲಕ್ಷ ಮತದಾರರಿದ್ದಾರೆ. ಅದರಲ್ಲಿ 4 ಲಕ್ಷ ಮಾದಿಗ ಸಮುದಾಯದಕ್ಕೆ ಸೇರಿದವರು ಇದ್ದಾರೆ. ಇದನ್ನು ಪಕ್ಷದ ವರಿಷ್ಠರು ಗಮನಿಸಿದ್ದಾರೆ. ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಸಂಗತಿ ವರಿಷ್ಠರ ಗಮನಕ್ಕೆ ಬಂದಿದೆ. ಕೆಲವರು ಮಿಸ್ ಗೈಡ್ ಮಾಡಿ ನನಗೆ ಟಿಕೆಟ್ ಸಿಕ್ಕಿದೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.ಬೇರೆ ಕಡೆಯಿಂದ ಬಂದು ಸ್ಪರ್ಧಿಸಿ ಗೆದ್ದು ಹೋಗುತ್ತಾರೆ. ಯಾವುದೇ ಅಭಿವೃದ್ಧಿ ಮಾಡಿಲ್ಲ. ಸ್ಥಳೀಯರಾದರೆ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಹೊರಗಿನ ಜಿಲ್ಲೆಯವರೆಗೆ ಟಿಕೆಟ್ ನೀಡಬಾರದು ಸ್ಥಳೀಯ ಅಭ್ಯರ್ಥಿ ಡಾ.ತಿಪ್ಪೇಸ್ವಾಮಿರವರಿಗೆ ಟಿಕೆಟ್ ನೀಡಿದರೆ 2 ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ ಮಾತನಾಡಿ, ಹೊರಗಿನವರಿಗೆ ಟಿಕೆಟ್ ನೀಡುವ ಸಂಪ್ರದಾಯ ಇವತ್ತಿಗೆ ಕೊನೆಯಾಗಲಿ. ಸ್ಥಳೀಯರಿಗೆ ಟಿಕೆಟ್ ನೀಡಿದರೆ ಮತದಾರರಲ್ಲಿ ನಮ್ಮವರು ಎಂಬ ಭಾವನೆ ಮುೂಡುತ್ತದೆ. ಹಾಗಾಗಿ ಕಾಂಗ್ರೆಸ್ ವರಿಷ್ಠರು ಈ ಬಾರಿ ಡಾ.ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಕಿರಣ್, ಮಲ್ಲೇಶ್, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.