ಸಮೀಕ್ಷೆಯಿಂದ ಯಾವ ಕುಟುಂಬವು ಹೊರಗುಳಿಯಬಾರದು

| Published : Sep 10 2025, 01:03 AM IST

ಸಾರಾಂಶ

ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಯಾವ ಕುಟುಂಬವು ಹೊರಗುಳಿಯದಂತೆ ನಿಗಾವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಯಾವ ಕುಟುಂಬವು ಹೊರಗುಳಿಯದಂತೆ ನಿಗಾವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕುರಿತು ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಂಘ ಸಂಸ್ಥೆಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ವಲಸೆಗಾರರು, ಪಡಿತರ ಚೀಟಿ ಇಲ್ಲದವರು, ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಯಾವುದೇ ಕುಟುಂಬದವರಿದ್ದರೂ ಅಂತವರೂ ಕೂಡ ಸಮೀಕ್ಷೆಗೆ ಒಳಪಡಲಿದ್ದಾರೆ. ಆಧಾರ್‌ ಕಾರ್ಡ್ ಹೊಂದಿದ್ದ ಬೇರೆ ರಾಜ್ಯ ಬೇರೆ ಜಿಲ್ಲೆಯ ಕುಟುಂಬದವರು ನಮ್ಮ ಜಿಲ್ಲೆಯಲ್ಲಿ ವಾಸಿಸುತ್ತಿದ್ದರೆ. ಅಂತವರನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂದ ಅವರು, ಮನೆ ಮನೆ ಸಮೀಕ್ಷೆಯು ಸೆಪ್ಟೆಂಬರ್ 22ರಿಂದ ಆಕ್ಟೋಬರ್ 7 ರವರೆಗೆ ನಡೆಯುತ್ತದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಸಮೀಕ್ಷೆಗೆ ಒಳಪಡುವ ವಿದ್ಯುತ್ ಮೀಟರ್‌ನ ಆರ್.ಆರ್ ಸಂಖ್ಯೆ ಇರುವ 3,31,740 ಕುಟುಂಬಗಳಿದ್ದು, 2,668 ಸಮೀಕ್ಷೆದಾರರು ಸಮೀಕ್ಷ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಮೊಬೈಲ್ ಆ್ಯಪ್ ಮುಖಾಂತರ ಸಮೀಕ್ಷೆಯ ದತ್ತಾಂಶಗಳನ್ನು ಸಂಗ್ರಹಿಸಲಾಗುವುದು ಹಾಗೂ ಸುಮಾರು 60 ಪ್ರಶ್ನೆಗಳಿರುತ್ತದೆ ಎಂದು ಹೇಳಿದರು.ಈಗಾಗಲೇ ಮೆಸ್ಕಾಂ ವತಿಯಿಂದ ಪ್ರತಿ ಕುಟುಂಬಕ್ಕೆ ಯುಎಚ್‌ಐಡಿ ನಂಬರನ್ನು ಸೃಜಿಸಿ ಪ್ರತಿ ಮನೆಗೆ ಸ್ಟಿಕ್ಕರ್ ಅಂಟಿಸಲಾಗಿದೆ. ಇದನ್ನು ಜಿಯೋ ಟ್ಯಾಗ್‌ ಮಾಡಲಾಗುತ್ತಿದೆ. ಒಂದು ವೇಳೆ ಯುಎಚ್‌ಐಡಿ ಸ್ಟೀಕರ್‌ ಅನ್ನು ಯಾವುದೇ ಮನೆಗೆ ಅಂಟಿಸಿಲ್ಲವಾದಲ್ಲಿ ಯುಎಚ್‌ಐಡಿಯನ್ನು ಸೃಜಿಸಿಕೊಂಡು ಗಣತಿದಾರರು ಸಮೀಕ್ಷೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕವಿಲ್ಲದೆ ಇರುವ ಮನೆಗಳ ವಿವರವನ್ನು ನೀಡಲು ತಿಳಿಸಲಾಗಿದೆ. ಆ ಮನೆಗಳನ್ನೂ ವಿಎ, ಪಿಡಿಓಗಳ ಮೂಲಕ ಜಿಯೋ ಟ್ಯಾಗ್‌ ಮಾಡಲು ಕ್ರಮವಹಿಸಲಾಗುವುದು ಎಂದರು.

ಇಂಟರ್ ನೆಟ್ ಸೌಲಭ್ಯ ಇಲ್ಲದೇ ಇರುವ ಪ್ರದೇಶಗಳಲ್ಲಿ ಸರ್ಕಾರ ಗುರುತಿಸುವ ಸರ್ಕಾರಿ ಕಟ್ಟಡಗಳಲ್ಲಿ ಸಮೀಕ್ಷೆ ಕಾರ್ಯವನ್ನು ನಡೆಸಲಾಗುವುದು. ಅಂತಹ ಸ್ಥಳಗಳಿಗೆ ಕುಟುಂಬದ ಮಾಹಿತಿದಾರರೊಬ್ಬರನ್ನು ಮಾಹಿತಿಯೊಂದಿಗೆ ಕರೆ ತರಲಾಗುವುದು ಎಂದ ಅವರು, ಸಮೀಕ್ಷೆಗೆ ದಸರಾ ರಜೆ ಇರುವುದರಿಂದ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನಿಯೋಜಿಸಲಾಗುವುದು. ಶಿಕ್ಷಕರು ಕೆಲಸ ಮಾಡುವ ಗ್ರಾಮ / ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು ಎಂದರು.ಸಮೀಕ್ಷೆದಾರರಾದ ಶಿಕ್ಷಕರಿಗೆ 150 ಮನೆಗಳನ್ನು ನಿಗದಿ ಪಡಿಸಲಾಗುತ್ತದೆ. ಮಲ್ನಾಡು ಭಾಗದಲ್ಲಿ ಮನೆಗಳು ದೂರ ದೂರವಿರುವುದರಿಂದ ಒಬ್ಬರಿಗೆ 100 ಮನೆಗಳನ್ನು ನಿಗದಿಪಡಿಸಿ ಸಮೀಕ್ಷೆ ಮಾಡಲಾಗುವುದು. ಪ್ರತಿ 50 ಶಿಕ್ಷಕರಿಗೆ ಒಬ್ಬರು ತರಬೇತಿದಾರರಿರುತ್ತಾರೆ, ಪ್ರತಿ 20 ಶಿಕ್ಷಕರಿಗೆ ಒಬ್ಬರು ಮೇಲ್ವಿಚಾರಕರಿರುತ್ತಾರೆ, 50 ಮೇಲ್ವಿಚಾರಕರಿಗೆ ಒಬ್ಬ ಮಾಸ್ಟರ್ ತರಬೇತಿದಾರರಿರುತ್ತಾರೆ ಎಂದು ಮಾಹಿತಿ ನೀಡಿದರು.ಮನೆ, ಮನೆಗೆ ಹೋಗಿ ಈ ಸಮೀಕ್ಷೆಯ ಬಗ್ಗೆ ಅರಿವು ಮೂಡಿಸುವಂತೆ ಮತ್ತು ಅವರಿಗೆ ಯಾವ ರೀತಿ ಪ್ರಶ್ನೆಗಳಿರುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿ ಸಮೀಕ್ಷೆಗೆ ಬಂದವರಿಗೆ ಸುಲಭವಾಗುವಂತೆ ಮಾಡಲು ಈ ಸಮೀಕ್ಷೆಗೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಪಾಲ್ಗೋಳ್ಳುತ್ತಾರೆ ಎಂದು ತಿಳಿಸಿದರು.

ಗ್ರಾಮ ಆಡಳಿತಾಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ವಿದ್ಯುತ್ ಸಂಪರ್ಕದ ಆರ್‌.ಆರ್‌. ನಂಬರ್ ಹೊಂದಿಲ್ಲದೇ ಇರುವ ವಿದ್ಯುತ್‌ಚ್ಛಕ್ತಿ ಸಂಪರ್ಕವಿಲ್ಲದಿರುವ ಮನೆಗಳನ್ನು ಪಟ್ಟಿ ಮಾಡಿ, ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಜೊತೆಗೆ ಜಿಯೋ-ಟ್ಯಾಗಿಂಗ್ ಮಾಡುವ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. ಮನೆಯ ಮುಖ್ಯ ದ್ವಾರದಲ್ಲಿ ಅಂಟಿಸಿರುವ ಸ್ಪೀಕರ್‌ಗಳನ್ನು ಸಾರ್ವಜನಿಕರು ಗಣತಿ ಕಾರ್ಯ ಮುಗಿಯುವವರೆಗೂ ಗೀಚುವುದಾಗಲಿ, ಕಿತ್ತುಹಾಕುವುದಾಗಲಿ ಮಾಡಬಾರದು ಜೊತೆಗೆ ಇದು ನಮ್ಮದೆ ಸಮೀಕ್ಷೆ ನಾವೆಲ್ಲರೂ ಜವಾಬ್ದಾರಿಯೊಂದಿಗೆ ಪಾಲ್ಗೊಂಡು ಸಮೀಕ್ಷೆಗೆ ಬರುವ ಶಿಕ್ಷಕರಿಗೆ ತಮ್ಮ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಕೋರಿದರು.ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಗುಣಮಟ್ಟದ ಡೇಟಾ ತುಂಬಾ ಮುಖ್ಯವಾಗಿದೆ. ಮುಂದಿನ ದಿನದಲ್ಲಿ ಈ ಡೇಟಾಗಳು ಬೇರೆ ಬೇರೆ ವಿಷಯಗಳಿಗೆ ಬುನಾದಿಯಾಗುವುದರಿಂದ ಮುಖಂಡರು ತಮ್ಮ ವ್ಯಾಪ್ತಿಯ ಜನರಿಗೆ ಈ ಸಮೀಕ್ಷೆ ಬಗ್ಗೆ ಅರಿವು ಮೂಡಿಸಬೇಕು. 60 ಪ್ರಶ್ನೆಗಳಿರುತ್ತದೆ ಅದರ ಬಗ್ಗೆ ಮೊದಲೇ ಉತ್ತರಗಳನ್ನು ಸಿದ್ಧಪಡಿಸಿಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು, ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು 63617-89579 ಈ ನಂಬರ್ ವಾಟ್ಸಪ್ ಮುಖಾಂತರ ಹಾಯ್‌ ಎಂದು ಸಂದೇಶವನ್ನು ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ಕೆ.ಜಿ. ಕಾಂತರಾಜ್ ಅವರು ಸಮೀಕ್ಷೆ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಸಮಾಜ ಕಲ್ಯಾ ಇಲಾಖೆಯ ಉಪ ನಿರ್ದೆಶಕಿ ಮಾಲತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.