ಸಾರಾಂಶ
ಬಳ್ಳಾರಿ: ಯಾವುದೇ ಧರ್ಮವು ಕೆಡುಕನ್ನು ಬೋಧಿಸುವುದಿಲ್ಲ. ಆದರೆ, ಧರ್ಮ ಪಾಲಿಸುವವರು ಸರಿಯಾದ ದಿಕ್ಕಿನಲ್ಲಿ ಧರ್ಮಾಚರಣೆಯಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಧರ್ಮ ಹಾಗೂ ಸಮಾಜಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಕೊಟ್ಟೂರು ಸಂಸ್ಥಾನ ಮಠದ ಶ್ರೀಜಗದ್ಗುರು ಬಸವಲಿಂಗ ಮಹಾಸ್ವಾಮಿ ಹೇಳಿದರು.
ನಗರದ ಬಿಡಿಎಎ ಸಭಾಂಗಣದಲ್ಲಿ ಸಹಮತ ವೇದಿಕೆಯಿಂದ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರತಿಯೊಂದು ಧರ್ಮದ ಆಶಯವೇ ಶಾಂತಿ ಹಾಗೂ ಸೌಹಾರ್ದತೆಯ ಪರಿಸರ ಕಟ್ಟುವುದಾಗಿದೆ. ಜಗತ್ತಿನ ಯಾವುದೇ ಧರ್ಮ ಕೆಟ್ಟದನ್ನು ಬೋಧಿಸುವುದಿಲ್ಲ. ಹಿಂಸೆ ಪ್ರಚೋದಿಸುವುದಿಲ್ಲ. ಆದರೆ, ಧರ್ಮ ಪಾಲನೆ ಮಾಡುವವರು ತಮ್ಮ ಧರ್ಮದ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳದೇ ಹೋದರೆ ಅವಘಡ ಸಂಭವಿಸುತ್ತವೆ ಎಂದು ಹೇಳಿದರು.
ಮುಸ್ಲಿಂ ಧರ್ಮಗುರು ಶ್ರೀ ಮುಪ್ತಿ ಮುಬಿನ್ ಮಾತನಾಡಿ, ಬಸವಾದಿ ಶರಣರು ಸಮಸಮಾಜದ ನಿರ್ಮಾಣಕ್ಕಾಗಿ ಅಪಾರವಾಗಿ ಶ್ರಮಿಸಿದರು. ಬಸವಾದಿ ಶರಣರ ವಚನಗಳು ಮನುಷ್ಯ ಸಮಾಜಮುಖಿಯಾಗಿ ಹೇಗೆ ಬದುಕಬೇಕು ಎಂಬುದರ ಕುರಿತು ಮಾರ್ಗ ತೋರಿಸುವ ದಿಕ್ಸೂಚಿಗಳಂತಿವೆ. ಶಾಂತಿ-ಸಹಬಾಳ್ವೆಯ ಬದುಕು ರೂಢಿಸಿಕೊಳ್ಳುವುದು ಹೇಗೆ? ಕಾಯಕದ ಮೂಲಕ ಸಮಾಜ ಸಮೃದ್ಧಗೊಳಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟ ವಿಶ್ವಗುರು ಬಸವಣ್ಣನವರು ಸರ್ವರಿಗೂ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು.ಕ್ರೈಸ್ತ ಧರ್ಮಗುರು ಶ್ರೀ ಬಿಷಪ್ ಹೆನ್ರಿ ಡಿಸೋಜಾ ಮಾತನಾಡಿ, ಧರ್ಮಗಳ ಮೂಲ ಉದ್ದೇಶ ಶಾಂತಿ ನೆಮ್ಮದಿ ಹಾಗೂ ಮಾನವನ ಕಲ್ಯಾಣ ಬಯಸುವುದೇ ಆಗಿದೆ. ಯಾವುದೇ ಧರ್ಮಗಳು ಹಿಂಸೆ ಪ್ರಚೋದಿಸುವುದಿಲ್ಲ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಇಲ್ಲಿ ಎಲ್ಲ ಧರ್ಮಗಳು ಶಾಂತಿ ಸೌಹಾರ್ದತೆಯಿಂದ ಇದ್ದು ನಾಡಿನ ಪ್ರಗತಿಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಮ್ಮರಚೇಡು ಸಂಸ್ಥಾನ ಮಠದ ಶ್ರೀಕಲ್ಯಾಣಿ ಸ್ವಾಮಿ, ಮನುಷ್ಯನು ಆಚಾರ-ವಿಚಾರದಲ್ಲಿ ಶುದ್ಧನಾಗಿರಬೇಕು. ನುಡಿದಂತೆ ನಡೆಯಬೇಕು. ಬಸವಣ್ಣನವರು ಹೇಳಿದಂತೆ ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬುದನ್ನು ಅರ್ಥ ಮಾಡಿಕೊಂಡರೆ ಮಾನವ ಜೀವನ ಸುಂದರಮಯವಾಗಲಿದೆ ಎಂದು ಹೇಳಿದರು.ಪ್ರಾಸ್ತಾವಿಕ ಮಾತನಾಡಿದ ಸಹಮತ ವೇದಿಕೆ ಸಂಚಾಲಕ ಸಿರಿಗೇರಿ ಪನ್ನರಾಜ್, ಸಹಮತ ವೇದಿಕೆಯು ಮನುಷ್ಯ ಮತ್ತು ಮನುಷ್ಯತ್ವದ ಬೆಸುಗೆ ಕಟ್ಟುವ ಮುಖ್ಯ ಉದ್ದೇಶ ಹೊಂದಿದೆ. ಜಾತಿ, ಮತ, ಪಂಥಮ ಪಕ್ಷ ಹಾಗೂ ಲಿಂಗಭೇದ ತಾರತಮ್ಯವಿಲ್ಲದ ಸಮಾಜ ನಿರ್ಮಿಸುವುದು ಸಂಘಟನೆಯ ಮುಖ್ಯ ಆಶಯವಾಗಿದೆ. ಸಹಮತ ವೇದಿಕೆಯು ಸಾಣೇಹಳ್ಳಿ ಮಠದ ಶಿವಕುಮಾರ್ ಶಿವಾಚಾರ್ಯ ಸ್ವಾಮೀಜಿರವರ ಮಾರ್ಗದರ್ಶನದಲ್ಲಿ ಬಸವ ಮತ್ತು ಶರಣ ಪರಂಪರೆಯಲ್ಲಿ ಸಹಮತ ವೇದಿಕೆಯು ಮುನ್ನಡೆದುಕೊಂಡು ಸಾಗುತ್ತಿದೆ. ಸಂಘಟನೆ ಆರಂಭಿಸಿ ಒಂದು ದಶಕವಾಗುತ್ತಿದ್ದು ಬಳ್ಳಾರಿಯಲ್ಲಿ ಮೊದಲ ಬಾರಿಗೆ ಎಲ್ಲ ಧರ್ಮ ಗುರುಗಳು ಮತ್ತು ಎಲ್ಲ ಸಮುದಾಯದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸೇರಿಸುವ ಮೂಲಕ ಭಾವೈಕ್ಯತೆ ಮುನ್ನುಡಿಗೆ ಹೊಸ ಭಾಷ್ಯ ಬರೆಯಲಾಗುತ್ತಿದೆ ಎಂದು ತಿಳಿಸಿದರು.
ಕ್ರೈಸ್ತ ಧರ್ಮಗುರು ಫಾದರ್ ಐವಾನ್ ಪಿಂಟೋ. ಸಿಖ್ ಧರ್ಮಗುರು ಸುರಿಂದರ್ ಸಿಂಗ್ ಜಿ, ಬೌದ್ಧ ಬಿಕ್ಕು ಕಮಲ ರತ್ನ ಬಂತೆಜಿ, ಹಾಲುಮತ ಸಮುದಾಯದ ಶರಣಯ್ಯ, ಮುಸ್ಲಿಂ ಸಮುದಾಯದ ಮುಖಂಡ ಮುನ್ನಾಭಾಯ್, ಅಲ್ಲಾ ಬಕಾಷ್, ಬಲಿಜ ಸಂಘದ ಅಧ್ಯಕ್ಷ ರಮೇಶ್ ಬುಜ್ಜಿ, ಚಲವಾದಿ ಸಂಘದ ಅಧ್ಯಕ್ಷ ಶಿವಕುಮಾರ್, ಕಮ್ಮ ಸಂಘದ ಅಧ್ಯಕ್ಷ ದಾಮೋದರ್, ವೈಶ್ಯ ಸಂಘದ ಅಧ್ಯಕ್ಷ ನಾಮ ನಾಗರಾಜ, ವಾಲ್ಮೀಕಿ ಸಮುದಾಯದ ಮುಖಂಡ ಮೀನಳ್ಳಿ ತಾಯಣ್ಣ, ಮೇದಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಉಪ್ಪಾರು ಸಮುದಾಯದ ಅಧ್ಯಕ್ಷ ಹನುಮೇಶ, ಉರುಕುಂದಪ್ಪ ಕುಂಬಾರು ಸಮಾಜದ ಮುಖಂಡ ಕೆ.ಎರ್ರಿಸ್ವಾಮಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ಅನಂತನಾಯಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಪಿಂಜಾರ ಸಮುದಾಯದ ಅಧ್ಯಕ್ಷ ಮೌಲಾಲಿ, ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲನಗೌಡ, ಸಹಮತ ಸಂಸ್ಥೆಯ ಪ್ರಮುಖ ಬಿ.ಮಲ್ಲಿಕಾರ್ಜುನ, ರಘು, ಮಲ್ಲೇಶ್ವರಿ, ಚಿಕ್ಕ ಗಾದಿಲಿಂಗಪ್ಪ, ತಳವಾರ ದುರ್ಗಪ್ಪ, ಗಂಗಾಧರ, ರಿಜ್ವಾನ್, ಸಂಗನಕಲ್ಲು ವಿಜಯಕುಮಾರ್, ರವಿಕುಮಾರ್, ಕಪಗಲ್ಲು ಓಂಕಾರಪ್ಪ, ಶಂಕರ್ ಚಲವಾದಿ, ಕಾರೆಕಲ್ಲು ಕಟ್ಟೆಗೌಡ, ಚಂದ್ರಪ್ಪ, ಗುಡುದೂರು ರಾಮಾಂಜನೇಯ, ರಮಣಪ್ಪ, ಚಂದ್ರಶೇಖರ ಸೋನಾರ್, ಶ್ರೀಧರ ಗಡ್ಡೆ ಚಂದ್ರು, ವೆಂಕಟೇಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸಂಗನಕಲ್ಲು ವಿಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.