ಕರ್ನಾಟಕ ರಾಜ್ಯ ಲೆಕ್ಕ ಮತ್ತು ಪರಿಶೋಧನಾ ಇಲಾಖೆಗೆ ಸಂಬಂಧಿಸಿದ ಎಸಿ-ಸಿಎಎಡಿ (ಅಸಿಸ್ಟಂಟ್‌ ಕಂಟ್ರೋಲರ್‌- ಸ್ಟೇಟ್‌ ಆಡಿಟ್‌ ಆ್ಯಂಡ್‌ ಅಕೌಂಟ್‌) ಹುದ್ದೆಗಳ ನೇಮಕಾತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಪಾರದರ್ಶಕತೆ ಪ್ರಶ್ನಾರ್ಹವಾಗಿದೆ ಎಂದು ಬೆಳಗಾವಿ ಮೂಲದ ಪರೀಕ್ಷಾರ್ಥಿ ಚೇತನ ಚೋಪಡೆ ಆರೋಪಿಸಿದ್ದಾರೆ.

ಬೆಳಗಾವಿ : ಕರ್ನಾಟಕ ರಾಜ್ಯ ಲೆಕ್ಕ ಮತ್ತು ಪರಿಶೋಧನಾ ಇಲಾಖೆಗೆ ಸಂಬಂಧಿಸಿದ ಎಸಿ-ಸಿಎಎಡಿ (ಅಸಿಸ್ಟಂಟ್‌ ಕಂಟ್ರೋಲರ್‌- ಸ್ಟೇಟ್‌ ಆಡಿಟ್‌ ಆ್ಯಂಡ್‌ ಅಕೌಂಟ್‌) ಹುದ್ದೆಗಳ ನೇಮಕಾತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಪಾರದರ್ಶಕತೆ ಪ್ರಶ್ನಾರ್ಹವಾಗಿದೆ ಎಂದು ಬೆಳಗಾವಿ ಮೂಲದ ಪರೀಕ್ಷಾರ್ಥಿ ಚೇತನ ಚೋಪಡೆ ಆರೋಪಿಸಿದ್ದಾರೆ.

ಎಸಿ-ಸಿಎಎಡಿ ಪೂರ್ವಭಾವಿ ಪರೀಕ್ಷೆ

ಈ ಕುರಿತು ಪ್ರಕಟಣೆ ನೀಡಿ, ಮಾಧ್ಯಮಗಳೊಂದಿಗೂ ಮಾತನಾಡಿರುವ ಅವರು, ಕೆಪಿಎಸ್‌ಸಿ ನಡೆಸಿದ ಎಸಿ-ಸಿಎಎಡಿ ಪೂರ್ವಭಾವಿ ಪರೀಕ್ಷೆಯ ನಂತರ ವರ್ಗವಾರು ಕಟ್‌ ಆಫ್ ಹಾಗೂ ಅಭ್ಯರ್ಥಿಗಳ ಅಂಕಗಳ ಸಂಪೂರ್ಣ ವಿವರ ಪ್ರಕಟಿಸಿಲ್ಲ. ಏಪ್ರಿಲ್ 2025ರಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿದ್ದರೂ, ಸುಮಾರು 17 ತಿಂಗಳ ಬಳಿಕ ಸೆ.3ರಂದು 1:3 ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ. ಈ ಮೂಲಕ ಪರೀಕ್ಷೆಯಲ್ಲಿ ಅಕ್ರಮದ ವಾಸನೆ ನುಸುಳಿರುವುದನ್ನು ಅವರು ಪರೋಕ್ಷವಾಗಿ ಆರೋಪಿಸಿದ್ದಾರೆ.

ಆಯ್ಕೆಯಾದ ಅಭ್ಯರ್ಥಿಗಳ ಮಾಹಿತಿಯನ್ನು ಮಾತ್ರ ಪ್ರಕಟಿಸಿ, ಆಯ್ಕೆಯಾಗದ ಅಭ್ಯರ್ಥಿಗಳ ಅಂಕ ಹಾಗೂ ವರ್ಗವಾರು ವಿವರಗಳನ್ನು ಬಹಿರಂಗಪಡಿಸದಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಎಲ್ಲ ಅಭ್ಯರ್ಥಿಗಳ ಅಂಕಗಳನ್ನು ಪ್ರಕಟಿಸಿ, 1:3 ಆಯ್ಕೆ ಪಟ್ಟಿ ಯಾವ ಮಾನದಂಡದ ಮೇಲೆ ಸಿದ್ಧವಾಗಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕು. ಫಲಿತಾಂಶ ಪ್ರಕಟಿಸಲು ಇಷ್ಟು ವಿಳಂಬವಾಗಿರುವುದರ ಕುರಿತು ಸ್ವತಂತ್ರ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮತ್ತಷ್ಟು ಅನುಮಾನ

ಈ ನೇಮಕಾತಿ ಪ್ರಕ್ರಿಯೆ ಶಿವಶಂಕರಪ್ಪ ಸಾಹುಕಾರ್ ಹಾಗೂ ಜ್ಞಾನೇಂದ್ರಕುಮಾರ್ ಅವರ ಅವಧಿಯಲ್ಲಿ ನಡೆದಿರುವುದರಿಂದ ಮತ್ತಷ್ಟು ಅನುಮಾನ ಮೂಡಿದೆ ಎಂದು ಚೇತನ ಹೇಳಿದ್ದಾರೆ. ಆದರೆ, ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಸ್ಪಷ್ಟನೆ ಇನ್ನಷ್ಟೇ ಹೊರಬರಬೇಕಿದೆ. ಮತ್ತೊಂದು ಬೆಳವಣಿಗೆಯಲ್ಲಿ, ಒಬ್ಬ ಅಭ್ಯರ್ಥಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ವಿಚಾರವಾಗಿ ಸೆ.9ರಂದು ಕೆಪಿಎಸ್‌ಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವುದೂ ಪ್ರಶ್ನೆಗೆ ಕಾರಣವಾಗಿದೆ. ಮೌಲ್ಯಮಾಪನ ಪ್ರಕ್ರಿಯೆ ಮುಗಿದು ಸುಮಾರು 2 ತಿಂಗಳ ಬಳಿಕ ನಿಯಮ ಉಲ್ಲಂಘನೆ ಕುರಿತು ಪ್ರಕಟಣೆ ನೀಡಿರುವುದರ ಹಿಂದಿನ ಕಾರಣವೇನು ಎಂಬ ಪ್ರಶ್ನೆ ಅಭ್ಯರ್ಥಿಗಳಲ್ಲಿ ಮೂಡಿದೆ. ಅಲ್ಲದೆ, 40ಕ್ಕೂ ಹೆಚ್ಚು ಅಭ್ಯರ್ಥಿಗಳ ರ್‍ಯಾಂಕ್‌ ಹಾಗೂ ಸರಣಿ ಸಂಖ್ಯೆಗಳ ಮಾಹಿತಿಯೂ ಇದೆ ಎಂಬ ಅನುಮಾನ ಅಭ್ಯರ್ಥಿಗಳಲ್ಲಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಎಸಿ-ಸಿಎಎಡಿ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ, ಪಾರದರ್ಶಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.