ಸಾರಾಂಶ
ಆತಂಕದಲ್ಲಿ ರೈತಾಪಿ ಸಮುದಾಯ । ತಾಲೂಕಿನಲ್ಲಿ 4836 ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಬಿಳಿಜೋಳಕ್ಕೆ ಲದ್ದಿ ಹುಳುವಿನ ಕಾಟ ಹೆಚ್ಚಾಗಿದ್ದು, ರೈತರು ಆತಂಕ ಪಡುವಂತಾಗಿದೆ.ತಾಲೂಕಿನಲ್ಲಿ 4836 ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆ ಮಾಡಲಾಗಿದೆ. ಹಿಂಗಾರು ಹಂಗಾಮಿನ ಮಳೆಯು ಉತ್ತಮವಾಗಿ ಸುರಿದಿದ್ದು, ಚಳಿಯು ಜಾಸ್ತಿ ಇರುವುದರಿಂದಾಗಿ ಬೆಳೆಯು ಉತ್ತಮವಾಗಿ ಬಂದಿದೆ. ಈಗ ಲದ್ದಿ ಹುಳುವಿನ ಕಾಟ ಹೆಚ್ಚಾಗಿದ್ದು, ಕೃಷಿ ಇಲಾಖೆಯು ನಿಯಂತ್ರಣಕ್ಕೆ ಸಲಹೆ ನೀಡಬೇಕಿದೆ.
ಇಳುವರಿ ಕಡಿಮೆಯಾಗುವ ಭೀತಿ:ಲದ್ದಿ ಹುಳದ ಕಾಟ ಹೆಚ್ಚಾಗಿದ್ದು, ಪರಿಣಾಮ ಜೋಳದ ಇಳುವರಿ ಕಡಿಮೆಯಾಗುವ ಭೀತಿ ರೈತರನ್ನು ಕಾಡುತ್ತಿದೆ. ಜೋಳದ ಬೆಳೆ ಬೆಳವಣಿಗೆ ಹಂತದಲ್ಲಿ ಸುಳಿಯಲ್ಲಿ ಲದ್ದಿಹುಳು ಆಶ್ರಯ ಪಡೆದು ಚಿಗುರುವ ಸುಳಿಯನ್ನು ತಿಂದು ಹಾಕುತ್ತಿದೆ. ಇದರಿಂದ ಬೆಳೆ ಕುಂಠಿತಗೊಳ್ಳಲಿದೆ. ಜೋಳ ತೆನೆ ಆಗುವವರೆಗೂ ಸುಳಿಯಲ್ಲಿ ಆಶ್ರಯ ಪಡೆಯುವುದರಿಂದ ತೆನೆ ರೋಗದಿಂದ ಕೂಡಿ ಸರಿಯಾಗಿ ಕಾಳು ಕಟ್ಟುವುದಿಲ್ಲ. ರೈತರು ಸಾಲಸೋಲ ಮಾಡಿ ಬಿಳಿಜೋಳ ಬೆಳೆದಿದ್ದಾರೆ. ಬಿತ್ತನೆ ಮಾಡಿದ ಬಿಳಿಜೋಳ ಬೆಳೆಗೆ ಈಗ ಲದ್ದಿ ಹುಳು ಕಾಡುತ್ತಿರುವುದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ನಿಯಂತ್ರಣ ಕ್ರಮ:ಈ ಲದ್ದಿ ಹುಳು ಅಪಾಯಕಾರಿ ಕೀಟವಾಗಿದ್ದು, ಜಮೀನಿನಲ್ಲಿ ಕಾಣಿಸಿಕೊಂಡರೆ ಅದು ಬೆರಳೆಣಿಕೆ ದಿನಗಳಲ್ಲಿ ಇಡೀ ಬೆಳೆ ತಿಂದು ನಾಶ ಮಾಡುತ್ತದೆ. ಹೀಗಾಗಿ ರೈತರು ಮೋನೊಕ್ರೊಟೋಫಾಸ್ ವಿಷ ಪಾಷಾಣ ತಯಾರಿಸಿ ಜೋಳದ ಸುಳಿಗೆ ಹಾಕಬೇಕು. ವಿಷ ಪಾಷಾಣ ತಯಾರಿಸಲು 2 ಕೆಜಿ ಬೆಲ್ಲವನ್ನು ಪುಡಿ ಮಾಡಿ 4 ಲೀ. ನೀರಿನಲ್ಲಿ ಕರಗಿಸಿ 250 ಮಿ.ಲೀ. ಮೋನೊಕ್ರೊಟೋಫಾಸ್ 36 ಎಸ್.ಎಲ್. ಕೀಟನಾಶಕ ಸೇರಿಸಿದ ಮೇಲೆ ಈ ಮಿಶ್ರಣವನ್ನು 20 ಕೆಜಿ ಭತ್ತ ಅಥವಾ ಗೋದಿ ಹೊಟ್ಟಿನಲ್ಲಿ ಬೆರೆಸಿ ಚೆನ್ನಾಗಿ ಕಲಸಿ ಗಾಳಿಯಾಡದಂತೆ 48 ಗಂಟೆಗಳ ಕಾಲ ಗೊಬ್ಬರದ ಚೀಲ ಅಥವಾ ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ಮುಚ್ಚಿಟ್ಟು ಬಿಡಬೇಕು. ಈ ರೀತಿ ತಯಾರಿಸಿದ ಪಾಷಾಣವನ್ನು ಜೋಳದ ಸುಳಿಯಲ್ಲಿ ಹಾಕುವ ಮೂಲಕ ಕೀಟ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.ನಿಯಂತ್ರಣಕ್ಕೆ ಸಲಹೆ:
ಲದ್ದಿಹುಳು ನಿಯಂತ್ರಣಕ್ಕೆ ಕ್ಲೋರಾಂಟಿಲಿಪ್ರೋಲ್ 0.3 ಎಂಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ನೈಸರ್ಗಿಕವಾಗಿ ಪಕ್ಷಿ ಆಕರ್ಷಣೆ ಮಾಡಲು ಜಮೀನುಗಳಲ್ಲಿ ಚುರುಮುರಿ ಹಾಕಬೇಕು. ಪಕ್ಷಿಗಳು ಕುಳಿತುಕೊಳ್ಳಲು ಉದ್ದನೆಯ ಕಟ್ಟಿಗೆ ನಿಲ್ಲಿಸಬೇಕು. ಇದರಿಂದ ಪಕ್ಷಿಗಳು ಆಕರ್ಷಿತವಾಗಿ ಬೆಳೆ ಮೇಲಿರುವ ಹುಳುಗಳನ್ನು ಹೆಕ್ಕಿ ತಿನ್ನುತ್ತವೆ. ಇದರಿಂದ ಹುಳದ ಕಾಟ ನಿಯಂತ್ರಣಕ್ಕೆ ಬರುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜಮೀರ ಅಲಿ ತಿಳಿಸಿದ್ದಾರೆ.