ಮಾಲೂರು ನಗರದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಈಗಾಗಲೇ ಟೆಂಡರ್‌ನಲ್ಲಿ ಸೇರ್ಪಡೆ ಮಾಡಲಾಗಿದೆ.
೨೦೨೭ರ ಜೂನ್ ಒಳಗೆ ಕಾಮಗಾರಿ ಪೂರ್ಣ: ಸಂಸದ ಎಂ.ಮಲ್ಲೇಶ್ ಬಾಬು
ಕನ್ನಡಪ್ರಭ ವಾರ್ತೆ ಕೋಲಾರವೈಟ್ಫೀಲ್ಡ್ನಿಂದ ಬಂಗಾರಪೇಟೆವರೆಗೆ ರೈಲು ಸಂಚಾರದ ಸಮಸ್ಯೆ ನಿವಾರಿಸಲು ನಾಲ್ಕು ಲೈನ್ ಟ್ರ್ಯಾಕ್ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು, ಜಿಲ್ಲೆಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಹಂತಹಂತವಾಗಿ ವೇಗ ನೀಡಲಾಗುತ್ತಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಲೂರು ನಗರದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಈಗಾಗಲೇ ಟೆಂಡರ್‌ನಲ್ಲಿ ಸೇರ್ಪಡೆ ಮಾಡಲಾಗಿದೆ. ೨೦೨೭ರ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.ಸೋಮವಾರ ದಕ್ಷಿಣ ಪಶ್ಚಿಮ ರೈಲ್ವೆ ಜಿಎಂರನ್ನು ಭೇಟಿ ಮಾಡಿ ಜಿಲ್ಲೆಯ ೪ ಆರ್‌ಒಬಿ (ರೈಲ್ವೆ ಮೇಲ್ಸೇತುವೆ) ಕಾಮಗಾರಿಗಳ ಬಗ್ಗೆ ಚರ್ಚಿಸಿದ್ದೇನೆ. ಶೀಘ್ರದಲ್ಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ದೇಶಿಹಳ್ಳಿ ಹಾಗೂ ಎಸ್.ಎನ್.ರೆಸಾರ್ಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿದ್ದು, ಶೀಘ್ರದಲ್ಲೇ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಇತರೆ ಕಾಮಗಾರಿಗಳು:ಸ್ಯಾನಿಟೋರಿಯಂ, ಕಾಮಸಮುದ್ರ, ಕೋಲಾರದ ಟೇಕಲ್ ರಸ್ತೆ ಹಾಗೂ ಉರಿಗಾಂ ಸೇರಿದಂತೆ ವಿವಿಧೆಡೆ ಮೇಲ್ಸೇತುವೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಉರಿಗಾಂ ಬಳಿ ಜಿಲ್ಲಾಡಳಿತ ಅಗತ್ಯ ಜಾಗ ಒದಗಿಸಿದರೆ ಕಾಮಗಾರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ಖಾದ್ರಿಪುರ ಬಳಿ ಮಳೆ ನೀರು ನಿಲ್ಲುತ್ತಿದ್ದ ಸಮಸ್ಯೆಗೆ ಈಗಾಗಲೇ ಹೊಸ ಪೈಪ್‌ಲೈನ್ ಅಳವಡಿಸಲಾಗಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಕೆಜಿಎಫ್ ರೈಲಿನ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.ಕೋಲಾರದ ಕ್ರೀಡಾಂಗಣದ ಬಳಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸುವುದು ಸದ್ಯಕ್ಕೆ ಸಾಧ್ಯವಿಲ್ಲ. ನಿಲ್ದಾಣ ನಿರ್ಮಿಸಲು ಅಗತ್ಯ ಸ್ಥಳಾವಕಾಶ ಇಲ್ಲದಿರುವುದೇ ಕಾರಣ ಎಂದು ಸ್ಪಷ್ಟಪಡಿಸಿದರು.
ಹೆದ್ದಾರಿ ಮತ್ತು ಬುಲೆಟ್ ರೈಲು:ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಸಮೀಕ್ಷೆ ಕಾರ್ಯ ನಡೆದಿದ್ದು, ೨೦೨೮ರಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಕೋಲಾರದಿಂದ ವೈಟ್‌ಫೀಲ್ಡ್‌ಗೆ ನೇರ ಸಂಪರ್ಕ ಯೋಜನೆಗೆ ರಾಜ್ಯ ಸರ್ಕಾರ ಅಗತ್ಯ ಜಾಗ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿಯ ೧೪ ಅಪಘಾತ ವಲಯಗಳಲ್ಲಿ ಫ್ಲೈಓವರ್ ನಿರ್ಮಿಸಲು ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಚೆನ್ನೈ ಎಕ್ಸ್‌ಪ್ರೆಸ್ ಹೈವೇನಲ್ಲಿ ಅತಿವೇಗದ ಸಂಚಾರದಿಂದ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೈಕ್ ಸಂಚಾರ ನಿಷೇಧಿಸಲಾಗಿದೆ ಎಂದು ಹೇಳಿದರು.ರಾಜಕೀಯ ವಿಚಾರ:
ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದರು.ಬಿಜಿಎಂಎಲ್ ಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಲು ಸಚಿವರನ್ನು ಕರೆಸಿ ಕಾರ್ಯಕ್ರಮ ಆಯೋಜಿಸಲಾಗುವುದು. ಮುಂಬರುವ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವನ್ನು ೬ ತಿಂಗಳು ಮುಂಚಿತವಾಗಿ ತೀರ್ಮಾನಿಸಲಾಗುವುದು. ಸದ್ಯ ಜೆಡಿಎಸ್‌ನಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲೆಡೆ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಜೆಡಿಎಸ್ ಮುಖಂಡರಾದ ಸಿಎಂಆರ್ ಶ್ರೀನಾಥ್, ಬಣಕನಹಳ್ಳಿ ನಟರಾಜ್, ಶಬರೀಶ್, ರಾಕೇಶ್ ಇದ್ದರು.