3 ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಮೋದಿ ಚಾಲನೆ

| Published : Feb 27 2024, 01:33 AM IST / Updated: Feb 27 2024, 09:15 AM IST

3 ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಮೋದಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ರೈಲ್ವೆ ವಿಭಾಗದ ಮೂರು ರೈಲು ನಿಲ್ದಾಣಗಳ ಅಭಿವೃದ್ಧಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಹದೇವಪುರ

ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ವೈಟ್‌ಫೀಲ್ಡ್, ಕೃಷ್ಣರಾಜಪುರ ಹಾಗೂ ಕೆಂಗೇರಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. 

ಬೆಂಗಳೂರು ಪೂರ್ವ ರೈಲ್ವೆ ನಿಲ್ದಾಣ ಬಳಿ ಪಾಟ್ರಿ ಟೌನ್‌ನಲ್ಲಿ ನೂತನವಾಗಿ ನಿರ್ಮಿಸಲಾದ ರಸ್ತೆ ಮೇಲ್ಸೇತುವೆ ಲೋಕಾರ್ಪಣೆ ಮಾಡಿದರು.

ವೈಟ್‌ಫೀಲ್ಡ್‌ ರೈಲ್ವೆ ನಿಲ್ದಾಣದಲ್ಲಿ ನೇರಪ್ರಸಾರದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಮಾತನಾಡಿ, ಬೆಂಗಳೂರು ವಿಭಾಗದ 15 ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. 

ಮೊದಲ ಹಂತದಲ್ಲಿ ಪ್ರಯಾಣಿಕರು ಕಾಯುವ ಸ್ಥಳ, ಶೌಚಾಲಯ, ಲಿಫ್ಟ್‌, ಎಸ್ಕಲೇಟರ್‌ ಅಳವಡಿಕೆ ಆಗಲಿವೆ. ಉಚಿತ ವೈಫೈ, ಒಂದು ನಿಲ್ದಾಣ-ಒಂದು ಉತ್ಪನ್ನ ಯೋಜನೆಯಂತೆ ಸ್ಥಳೀಯ ಉತ್ಪನ್ನಗಳಿಗೆ ಮಳಿಗೆ ಒದಗಿಸಲಾಗುತ್ತಿದೆ. ಐಷಾರಾಮಿ ವಿಶ್ರಾಂತಿ ಕೊಠಡಿಗಳು ನಿರ್ಮಾಣವಾಗಲಿವೆ ಎಂದು ತಿಳಿಸಿದರು.

ಎರಡನೇ ಹಂತದಲ್ಲಿ ನಿಲ್ದಾಣದ ಕಟ್ಟಡ ನಿರ್ಮಾಣ, ನಿಲ್ದಾಣಕ್ಕೆ ಸಂಪರ್ಕ, ಅಂಗವಿಕಲ ಸ್ನೇಹಿ ಕ್ರಮ, ಪರಿಸರ ಸ್ನೇಹಿ ಪರಿಹಾರಗಳು ಹಾಗೂ ರೂಫ್‌ ಪ್ಲಾಝಾ ನಿರ್ಮಾಣ ಆಗಲಿವೆ. ಒಟ್ಟಾರೆ ನಗರ ಕೇಂದ್ರಿತ ಸ್ಥಳವಾಗಿ ರೂಪಿಸಲಾಗುವುದು ಎಂದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿದರು. ಬೆಂಗಳೂರು ರೈಲ್ವೆ ವಿಭಾಗಾಧಿಕಾರಿ ಯೋಗೇಶ್‌ ಮೋಹನ್ ಇದ್ದರು.

ಬೆಂಗಳೂರಿನ ಕೆಂಗೇರಿ ರೈಲ್ವೆ ನಿಲ್ದಾಣ ₹21 ಕೋಟಿ, ಕೃಷ್ಣರಾಜಪುರ ರೈಲ್ವೆ ನಿಲ್ದಾಣ ₹21.1 ಕೋಟಿ, ವೈಟ್ ಫೀಲ್ಡ್ ರೈಲ್ವೆ ನಿಲ್ದಾಣ - ₹23.37 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಆಗಲಿದೆ.