ಸಾರಾಂಶ
ಈ ಮೂವರಲ್ಲಿ ಯಾರೇ ಮಂತ್ರಿಯಾದರೂ ಹುಬ್ಬಳ್ಳಿಗೆ ಲಾಭವಾಗುವುದಂತೂ ನಿಜ. ಜೋಶಿ ಅವರ ಕ್ಷೇತ್ರವೇ ಧಾರವಾಡ. ಇನ್ನು ಶೆಟ್ಟರ್ ಬೆಳಗಾವಿ ಎಂಪಿ ಆದರೂ ಹುಬ್ಬಳ್ಳಿಯ ಮೂಲದವರು. ಬೊಮ್ಮಾಯಿ ಕೂಡ ಅಷ್ಟೇ ಹಾವೇರಿ-ಗದಗ ಕ್ಷೇತ್ರದ ಸಂಸದರಾಗಿದ್ದರೂ ಅವರ ನಿವಾಸ ಇರುವುದು ಹುಬ್ಬಳ್ಳಿಯಲ್ಲೇ.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಅತ್ತ ಸರ್ಕಾರ ರಚಿಸಲು ಎನ್‌ಡಿಎ ಸಿದ್ಧತೆ ನಡೆಸಿದ್ದು, ಜೂ. 8ಕ್ಕೆ ನೂತನ ಸರ್ಕಾರ ರಚನೆಯಾಗಲಿದೆ. ಈ ಸಲ ಯಾರಾಗ್ತಾರೆ ಮಂತ್ರಿ ಎಂಬುದೀಗ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.
ನೂತನ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗದ ಮೂವರು ನೂತನ ಸಂಸದರ ಕುರಿತು ಭಾರೀ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಎನ್‌ಡಿಎ 2.0 ರಲ್ಲಿ ಸಚಿವರಾಗಿದ್ದ ಪ್ರಹ್ಲಾದ ಜೋಶಿ, ಬೆಳಗಾವಿಗೆ ತೆರಳಿ ಭಾರೀ ಮತಗಳ ಅಂತರದಿಂದ ಗೆದ್ದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಹಾವೇರಿ- ಗದಗ ಕ್ಷೇತ್ರದಿಂದ ಗೆದ್ದಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಸರುಗಳು ಕೇಳಿ ಬರುತ್ತಿವೆ. ಈ ಮೂವರಲ್ಲಿ ಯಾರು ಮಂತ್ರಿಯಾಗುತ್ತಾರೆ ಎಂಬುದೇ ಇದೀಗ ಕುತೂಹಲ ಮೂಡಿಸಿದೆ.ಜೋಶಿ ಮತ್ತೆ ಮಂತ್ರಿ?:
ಧಾರವಾಡ ಕ್ಷೇತ್ರದಿಂದ 5ನೇ ಬಾರಿಗೆ ಗೆದ್ದು ದಾಖಲೆ ನಿರ್ಮಿಸಿರುವ ಪ್ರಹ್ಲಾದ ಜೋಶಿ ಈಗಾಗಲೇ 5 ವರ್ಷ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದವರು. ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿ ಪ್ರಚಾರಕ್ಕೆ ಬಂದ ವೇಳೆ ಜೋಶಿ ಅವರನ್ನು ಆರಿಸಿ ಕಳುಹಿಸಿ ಉನ್ನತ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದುಂಟು. ಹೀಗಾಗಿ ಜೋಶಿ ಅವರಿಗೆ ಮತ್ತೆ ಸಚಿವರಾಗುತ್ತಾರೆಯೇ? ಶಾ ಅಂದು ಹೇಳಿದಂತೆ ಇದಕ್ಕಿಂತ ಪ್ರಮುಖವಾದ ಖಾತೆಯೇನಾದರೂ ಸಿಗುತ್ತದೆಯೇ? ಅಥವಾ ಬೇರೆಯಾವುದಾದರೂ ಉನ್ನತ ಹುದ್ದೆಗೆ ಹೋಗುತ್ತಾರೆಯೇ ಎಂಬುದೀಗ ಪಕ್ಷದ ಕಾರ್ಯಕರ್ತರಲ್ಲಿ ಚರ್ಚೆಯಾಗುತ್ತದೆ.ಮಾಜಿ ಸಿಎಂಗಳಲ್ಲಿ ಯಾರಿಗೆ?:
ಇನ್ನು ಈ ಭಾಗದಿಂದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಇಬ್ಬರು ಆಯ್ಕೆಯಾಗಿದ್ದಾರೆ. ಇವರಿಬ್ಬರಲ್ಲಿ ಯಾರಿಗೆ ಸಚಿವಗಿರಿ ಸಿಗಬಹುದು ಎಂಬುದರ ಬಗ್ಗೆಯೂ ವಿಶ್ಲೇಷಣೆ ನಡೆಯುತ್ತಿದೆ. ಇಬ್ಬರು ರಾಜ್ಯದಲ್ಲಿ ಪ್ರಬಲವಾದ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹೀಗಾಗಿ ಸಿಕ್ಕರೂ ಇಬ್ಬರಲ್ಲಿ ಒಬ್ಬರಿಗೆ ಸಿಗಬಹುದು. ಹಾಗೆ ನೋಡಿದರೆ ಬೊಮ್ಮಾಯಿಗಿಂತ ಶೆಟ್ಟರ್ ಹಿರಿಯರು. ಅದರಲ್ಲೂ ಬೇರೆ ಜಿಲ್ಲೆಯಿಂದ ಸ್ಪರ್ಧಿಸಿ ಭಾರೀ ಅಂತರದಿಂದ ಗೆದ್ದು ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಹಿಂದೆ ಟಿಕೆಟ್ ನೀಡದೇ ಅನ್ಯಾಯ ಮಾಡಿತ್ತು ಎಂಬ ಕೂಗು ಅವರ ಬೆಂಬಲಿಗರು ಹಾಗೂ ಲಿಂಗಾಯತ ಸಮುದಾಯದಲ್ಲಿದೆ. ಮಂತ್ರಿ ಸ್ಥಾನ ಸಿಕ್ಕರೆ ಅತ್ಯಂತ ಸಮರ್ಥವಾಗಿ ನಿಭಾಯಿಸಬಲ್ಲ ಅನುಭವ ಕೂಡ ಇದೆ. ಹೀಗಾಗಿ ಶೆಟ್ಟರ್‌ಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಕೂಗು ಅವರ ಬೆಂಬಲಿಗರದ್ದು. ಆದರೆ ಬೊಮ್ಮಾಯಿ ಕೂಡ ಮಾಜಿ ಮುಖ್ಯಮಂತ್ರಿ. ಹೀಗಾಗಿ ಅವರು ಕೂಡ ಹಿರಿಯರ ಲೆಕ್ಕಕ್ಕೆ ಬರುತ್ತಾರೆ. ಅವರಿಗೆ ಮಂತ್ರಿಗಿರಿ ನೀಡಬೇಕೆಂಬ ಬೇಡಿಕೆ ಅವರ ಅಭಿಮಾನಿಗಳದ್ದು.ಹುಬ್ಬಳ್ಳಿಗೆ ಲಾಭ:
ಈ ಮೂವರಲ್ಲಿ ಯಾರೇ ಮಂತ್ರಿಯಾದರೂ ಹುಬ್ಬಳ್ಳಿಗೆ ಲಾಭವಾಗುವುದಂತೂ ನಿಜ. ಜೋಶಿ ಅವರ ಕ್ಷೇತ್ರವೇ ಧಾರವಾಡ. ಇನ್ನು ಶೆಟ್ಟರ್ ಬೆಳಗಾವಿ ಎಂಪಿ ಆದರೂ ಹುಬ್ಬಳ್ಳಿಯ ಮೂಲದವರು. ಬೊಮ್ಮಾಯಿ ಕೂಡ ಅಷ್ಟೇ ಹಾವೇರಿ-ಗದಗ ಕ್ಷೇತ್ರದ ಸಂಸದರಾಗಿದ್ದರೂ ಅವರ ನಿವಾಸ ಇರುವುದು ಹುಬ್ಬಳ್ಳಿಯಲ್ಲೇ. ಹೀಗಾಗಿ ಮೂವರಲ್ಲಿ ಯಾರೇ ಮಂತ್ರಿ ಆದರೂ ಹುಬ್ಬಳ್ಳಿ-ಧಾರವಾಡದವರೇ ಮಂತ್ರಿಯಾದಂತಾಗುತ್ತದೆ ಎಂಬುದು ಕಾರ್ಯಕರ್ತರ ಅಂಬೋಣ. ಯಾವುದಕ್ಕೂ ಯಾರಿಗೆ ಒಲಿಯಲಿದೆ ಮಂತ್ರಿಗಿರಿ ಎಂಬುದಕ್ಕೆ ಇನ್ನು ಪ್ರಮಾಣವಚನದವರೆಗೂ ಕಾಯಬೇಕಷ್ಟೇ!