ಮಾಗಡಿ: ಹೇಮಾವತಿ ಯೋಜನೆಯ ನೀರನ್ನು ಮಾಗಡಿ ತಾಲೂಕಿಗೆ ಬಿಡುವುದಿಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಕುಣಿಗಲ್‌ ತಾಪಂ ಮಾಜಿ ಸದಸ್ಯ ಜಗದೀಶ್ ಅವರಿಗೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ತಿರುಗೇಟು ನೀಡಿದರು

ಮಾಗಡಿ: ಹೇಮಾವತಿ ಯೋಜನೆಯ ನೀರನ್ನು ಮಾಗಡಿ ತಾಲೂಕಿಗೆ ಬಿಡುವುದಿಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಕುಣಿಗಲ್‌ ತಾಪಂ ಮಾಜಿ ಸದಸ್ಯ ಜಗದೀಶ್ ಅವರಿಗೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿಗೆ ನೀರು ಹಂಚಿಕೆ ಮಾಡಿರುವುದು ಹೈಪವರ್ ಕಮಿಟಿ ತೀರ್ಮಾನ. ಹೇಮಾವತಿ ನೀರಿನ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಇಂದಿನ ಸರ್ಕಾರದ ತೀರ್ಮಾನವಲ್ಲ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಚನೆಯಾದ ಹೈಪವರ್ ಕಮಿಟಿ ಕುಣಿಗಲ್ ತಾಲೂಕಿಗೆ 3 ಟಿಎಂಸಿ ಹಾಗೂ ಮಾಗಡಿ ತಾಲೂಕಿನ ಕೆರೆಗಳನ್ನು ತುಂಬಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 0.676 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು. ಈ ಯೋಜನೆಯ ರೂಪುರೇಷೆ ಸಿದ್ಧವಾಗುವಲ್ಲಿ ಎಚ್.ಎಂ.ರೇವಣ್ಣ, ದಿ. ಟಿ.ಎ ರಂಗಯ್ಯ, ವೈ.ಕೆ.ರಾಮಯ್ಯ, ಹುಚ್ಚಮಾಸ್ತಿಗೌಡ, ಎಸ್.ಎಂ.ಕೃಷ್ಣ ಹಾಗೂ ಜೆ.ಎಚ್.ಪಟೇಲ್ ಅವರಂತಹ ಹಿರಿಯ ನಾಯಕರ ಪಾತ್ರ ದೊಡ್ಡದಿದೆ ಎಂದು ಅಶೋಕ್ ಹೇಳಿದರು.

ಎಕ್ಸ್‌ಪ್ರೆಸ್ ಕೆನಾಲ್ ಡಿ.ಕೆ.ಸಹೋದರರ ಶ್ರಮ:

ತೆರೆದ ಕಾಲುವೆಗಳ ಮೂಲಕ ಸುಮಾರು 150ರಿಂದ 170 ಕಿ.ಮೀ ದೂರ ನೀರು ಹರಿದು ಬರುವಾಗ ಮಾರ್ಗಮಧ್ಯೆಯೇ ನೀರು ಪೋಲಾಗಿ ಮಾಗಡಿಯ ಕೊನೆಯ ಭಾಗಕ್ಕೆ ತಲುಪುವುದು ಕಷ್ಟಸಾಧ್ಯವಾಗಿತ್ತು. ಇದನ್ನು ಮನಗಂಡ ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾವುದೇ ಅಡೆತಡೆಯಿಲ್ಲದೆ ಮಾಗಡಿಯ 63 ಕೆರೆಗಳಿಗೆ ನೀರು ತಲುಪಿಸಲು ಎಕ್ಸ್‌ಪ್ರೆಸ್ ಕೆನಾಲ್(ಪೈಪ್‌ಲೈನ್) ಯೋಜನೆಗೆ ಒತ್ತು ನೀಡಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಹೈಕೋರ್ಟ್ ಕೂಡ ಮಾಗಡಿಯ ಪಾಲಿನ ನೀರಿಗೆ ಅಡ್ಡಿಪಡಿಸದಂತೆ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ರಾಜಕೀಯ ಮತ್ಸರ ಸಲ್ಲದು:

ವಿದ್ಯಾವಂತರಾದ ಜಗದೀಶ್ ಅವರು ಪ್ರಬುದ್ಧತೆಯಿಂದ ಮಾತನಾಡಬೇಕು. ಕುಣಿಗಲ್ ಶಾಸಕ ರಂಗನಾಥ್ ಅವರ ಜನಪ್ರಿಯತೆ ಸಹಿಸದೆ, ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾಂತೀಯ ಭಾವನೆ ಕೆರಳಿಸುವಂತಹ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಶೋಕ್ ಕಿಡಿಕಾರಿದರು.

ರಾಮನಗರ ಅಥವಾ ಕನಕಪುರಕ್ಕೆ ಈ ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂಬ ಅಪಪ್ರಚಾರ ಸತ್ಯಕ್ಕೆ ದೂರವಾದುದು. ಮಾಗಡಿ ಮತ್ತು ಕುಣಿಗಲ್ ತಾಲೂಕುಗಳ ನಡುವೆ ಸಾಮರಸ್ಯವಿದೆ. ರಾಜಕೀಯಕ್ಕಾಗಿ ನೀರಿನ ವಿಚಾರದಲ್ಲಿ ಮತ್ಸರ ಸಾಧಿಸಬಾರದು. ಇನ್ನೊಂದು ವರ್ಷದೊಳಗೆ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಪೂರ್ಣಗೊಂಡು ಮಾಗಡಿಗೆ ಹೇಮಾವತಿ ನೀರು ಹರಿಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಗೊರೂರು ಜಲಾಶಯದಿಂದ ಬಿಡುಗಡೆಯಾಗುವ ನೀರಿನಲ್ಲಿ 388 ಕ್ಯೂಸೆಕ್ ನೀರನ್ನು 70ನೇ ಕಿ.ಮೀ.ನಿಂದ 167ನೇ ಕಿ.ಮೀ.ವರೆಗೆ 9 ಅಡಿ ವ್ಯಾಸದ ಬೃಹತ್ ಪೈಪ್‌ಗಳ ಮೂಲಕ ಸುಮಾರು 34.5 ಕಿ.ಮೀ ಉದ್ದದ ಎಕ್ಸ್‌ಪ್ರೆಸ್ ಕೆನಾಲ್‌ನಲ್ಲಿ ಹರಿಸಲಾಗುವುದು. ಈ ಕಾಮಗಾರಿಗೆ ಈಗಾಗಲೇ ಶೇ.70-80ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, 5,500ಕ್ಕೂ ಹೆಚ್ಚು ಪೈಪ್‌ಗಳು ಸಿದ್ಧವಾಗಿವೆ.

ಹೇಮಾವತಿ (0.676 ಟಿಎಂಸಿ), ಎತ್ತಿನಹೊಳೆ (0.339 ಟಿಎಂಸಿ) ಮತ್ತು ಸತ್ತೇಗಾಲ ಯೋಜನೆಗಳ (0.859 ಟಿಎಂಸಿ) ಮೂಲಕ ಮಾಗಡಿ ತಾಲೂಕಿಗೆ ಒಟ್ಟು 1.8 ಟಿಎಂಸಿ ನೀರು ಹಂಚಿಕೆಯಾಗಿದೆ. ಇದರಿಂದ ಮಾಗಡಿಯ ಕೆರೆಗಳಿಗೆ ನೀರು ತುಂಬಿಸುವುದಲ್ಲದೆ, ಅಂತರ್ಜಲ ವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಯೋಜನೆಗಳು ಅಧಿಕಾರಿಗಳ ಪರಿಶ್ರಮದಿಂದ ಸಾಗುತ್ತಿದ್ದು, ಯಾರೂ ಪ್ರಾಂತೀಯ ಭಾವನೆ ಕೆರಳಿಸುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನರಸಿಂಹಮೂರ್ತಿ, ಜೆ.ಪಿ.ಚಂದ್ರೇಗೌಡ, ಎಂ.ಕೆ.ಧನಂಜಯ್ಯ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಬೆಳ್ಳಿಯಪ್ಪ, ಪ್ರಕಾಶ್, ಕುದೂರು ವಿನಯ್, ಅಶ್ವಥ್, ರೂಪೇಶ್, ಜಯಮ್ಮ, ಶಾಂತರಾಜು ಇತರರು ಹಾಜರಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿಯಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್. ಎನ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ನರಸಿಂಹಮೂರ್ತಿ, ಜೆ.ಪಿ.ಚಂದ್ರೇಗೌಡ, ಎಂ.ಕೆ.ಧನಂಜಯ್ಯ, ಪೂಜಾರಿಪಾಳ್ಯ ಕೃಷ್ಣಮೂರ್ತಿ ಇತರರಿದ್ದರು.