ಕನ್ನಡಪ್ರಭ ವಾರ್ತೆ ಹಿರಿಯೂರು

ಕೆಲವೊಮ್ಮೆ ಅತಿಯಾದ ಸ್ವಾತಂತ್ರ್ಯ ಮತ್ತು ಅಗತ್ಯಕ್ಕಿಂತ ಹೆಚ್ಚಿನ ಪ್ರಾತಿನಿದ್ಯ ಕೊಟ್ಟಾಗ ಅಧಿಕಾರ ದುರ್ಬಳಕೆಗಳು ನಡೆದು ಬಿಡುತ್ತವೆ. ಹಿರಿಯೂರು ವಿಧಾನಸಭಾ ಕ್ಷೇತ್ರದ ಸಾರ್ವಜನಿಕರೇ ಬೆರಗಾಗುವಂತಹ ಬೆಳವಣಿಗೆಗಳು ಆಗಾಗ ನಡೆಯುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ.ಸುಧಾಕರ್ ಅವರು ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ, ಅದೇ ಆಸ್ಪತ್ರೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳನ್ನು ಎದುರಿಗೆ ಕೂರಿಸಿಕೊಂಡು ಜೆಜಿ ಹಳ್ಳಿ ಹೋಬಳಿ ಕೆರೆಗಳಿಗೆ ನೀರು ಹರಿಸುವ ಬಗ್ಗೆ ದಾಖಲೆಗಳನ್ನು ಮುಂದೆ ಹರಡಿಕೊಂಡು ಮುಖಂಡರೊಬ್ಬರು ಪೂರ್ವಭಾವಿ ಸಭೆ ನಡೆಸಿರುವುದು ಈಗ ಕ್ಷೇತ್ರದ ತುಂಬಾ ಸುದ್ದಿ ಹಬ್ಬಿದೆ. ಸಭೆ ನಡೆಸಿದವರು ಇದು ಯಾವ ಜಾಗ? ಅಧಿಕಾರಿಗಳ ಬಳಿ ಮಾಹಿತಿ ಪಡೆಯಲು ನಾವು ಯಾರು? ಎಂಬುದನ್ನು ಸಹ ಯೋಚಿಸಿದಂತೆ ಕಾಣುತ್ತಿಲ್ಲ.

ಹೌದು...ಕಲುವಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದು ಎಲ್ಲರಿಗೂ ಗೊತ್ತು. ಆ ಭಾಗಕ್ಕೆ ಶಾಶ್ವತವಾಗಿ ನೀರಿನ ಯೋಜನೆ ಒದಗಿಸಬೇಕು ಎಂಬುದು ಆ ಭಾಗದ ಜನರ ದಶಕಗಳ ಬೇಡಿಕೆಯೂ ಹೌದು. ಆದರೆ ಯಾರು ಯಾವುದನ್ನು ಮಾಡಬೇಕು ಮತ್ತು ಎಲ್ಲಿ ಮಾಡಬೇಕು ಎಂಬುದನ್ನು ಮರೆತ ಪರಿಣಾಮ ಇವತ್ತು ಕ್ಷೇತ್ರದ ತುಂಬಾ ಈ ಸಭೆಯ ಬಗ್ಗೆ ಚರ್ಚೆ ಶುರುವಾಗಿದೆ. ಅಭಿವೃದ್ಧಿ ಪರ ಚಿಂತನೆಯುಳ್ಳ ಸಚಿವರು ಜೆಜಿಹಳ್ಳಿ ಮತ್ತು ಐಮಂಗಲ ಭಾಗಕ್ಕೆ ನೀರು ಹರಿಸುವ ಬಗ್ಗೆ ಪಣ ತೊಟ್ಟಿದ್ದು ಆ ದಿಸೆಯಲ್ಲಿ ನಿರಂತರವಾಗಿ ಪ್ರಯತ್ನ ನಡೆಸಿರುವುದು ಸುಳ್ಳಲ್ಲ. ಆದರೆ ಕೆಲವು ಮುಖಂಡರು ಸಚಿವರ ವಿಶಾಲ ಮನೋಭಾವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರೇ ದಿನಂಪ್ರತಿ ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷದ ಒಳಗೇ ಬಹಳಷ್ಟು ಮುಖಂಡರು ದುಸುಮುಸು ಅನ್ನುತ್ತಿದ್ದಾರೆ.

ಹೆಸರು ಹೇಳಲು ಬಯಸದ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಮಾತನಾಡಿ, ಸಚಿವರು ಕಷ್ಟ ಕಾಲದಲ್ಲಿದ್ದಾಗ ಅವರ ಶೀಘ್ರ ಚೇತರಿಕೆಗೆ ಹಾರೈಸುವ ಬದಲು ಅವರ ಅನುಪಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳಬಾರದು. ಬೀದಿ ಬೀದಿಯಲ್ಲಿ, ಊರೂರು ಸುತ್ತಿ ಮತ ಕೇಳುವ, ಹಾಕಿಸುವ ಮುಖಂಡರನ್ನು ಮೂಲೆಗೆ ಸರಿಸಿದ್ದು ಗಿಲೀಟು ಮಾತಿನ ಕೆಲವರ ಅಟಾಟೋಪ ಮಿತಿ ಮೀರಿದೆ. ಈ ಬಗ್ಗೆ ನಮ್ಮ ಸಚಿವರ ಆರೋಗ್ಯ ಸುಧಾರಿಸಿ ಕ್ಷೇತ್ರಕ್ಕೆ ಬಂದ ಮೇಲೆ ಅವರ ಗಮನಕ್ಕೆ ವಾಸ್ತವ ಪರಿಸ್ಥಿತಿಯನ್ನು ಮುಖಂಡರೆಲ್ಲರೂ ಸೇರಿ ವಿವರಿಸುತ್ತೇವೆ ಎಂದರು.

ಇದೆಲ್ಲಾ ಏನೇ ಇರಲಿ. ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಕಡತಗಳನ್ನು ಅಥವಾ ಯೋಜನೆಗಳ ಮಾಹಿತಿಯನ್ನು ಆ ವಿಷಯಕ್ಕೆ ಸಂಬಂಧವೇ ಇಲ್ಲದವರ ಬಳಿ ಹಂಚಿಕೊಳ್ಳುವ ಮತ್ತು ಅವರ ಸಲಹೆ ಸೂಚನೆ ಪಡೆಯುವ ಹಕೀಕತ್ತು ಆದರೂ ಏನಿತ್ತು ಎಂಬುದು ಸದ್ಯದ ಪ್ರಶ್ನೆ. ಮನೆಯ ಯಜಮಾನನ ಗೌರವವನ್ನು ಆತನ ಅನುಪಸ್ಥಿತಿಯಲ್ಲಿ ಕಳೆಯುವುದು ಎಂದರೆ ಇದೇ ಇರಬೇಕು ಅಲ್ಲವಾ?*ಸುತ್ತಲಿನ ಕ್ಯಾಕ್ಟಸ್‌ನಿಂದ ಶೀಘ್ರ ಸಚಿವರು ಹೊರಬರಲಿ:


ಅದೇನೋ ಗೊತ್ತಿಲ್ಲ. ಹಿರಿಯೂರು ಕ್ಷೇತ್ರದಲ್ಲಿ ಶಾಸಕರಾದವರ ಬೆನ್ನ ಹಿಂದಿನ ಕೆಲವರು ತಾವೇ ಶಾಸಕರಂತೆ ವರ್ತಿಸುವುದನ್ನು ತಾಲೂಕಿನ ಜನತೆ ಎಲ್ಲಾ ಪಕ್ಷಗಳಲ್ಲೂ ಕಂಡಿದ್ದಾರೆ. ಸಾರ್ವಜನಿಕರು ಶಾಸಕರ ಭೇಟಿ ಮಾಡುವುದಕ್ಕೆ ಈ ಚಕ್ರವ್ಯೂಹ ಸೃಷ್ಟಿಸಿಕೊಂಡು ನಿಂತ ಹತ್ತಾರು ಮುಖಂಡರನ್ನು ದಾಟಿ ಹೋಗಬೇಕು. ಹಳ್ಳಿಯಿಂದ ಕಷ್ಟ ಕೈಲಿಡಿದು ಬಂದ ಮತದಾರ ಸಚಿವರ ಕಾರಿನ ಬಳಿಯೂ ಹೋಗಲಿಕ್ಕೆ ಆಗದಷ್ಟು ಲೀಡರ್‌ಗಳೇ ಸಚಿವರನ್ನು ಸುತ್ತುವರೆದಿರುತ್ತಾರೆ. ಹೋಗಲಿ, ಆ ಲೀಡರ್‌ಗಳದು ಏನಾದರೂ ಕೆಲಸ ಇರಬೇಕೇನೋ ಅಂದುಕೊಂಡರೆ ಅವರಾಗಲೇ ಸಚಿವರನ್ನು ಮಾತಾಡಿಸಿ ಆಗಿರುತ್ತದೆ. ಹಳ್ಳಿಯಿಂದ ಬಂದ ವ್ಯಕ್ತಿ ಕೆಲಸ ಆಗದೇ ಮುಂದಿನ ಬಾರಿ ಬರಲಿ ಎಂದುಕೊಳ್ಳುತ್ತಾ ಬರಿಗೈಲಿ ಮನೆಗೋಗುತ್ತಾನೆ. ಇದು ಇವತ್ತಿನ ಸ್ಥಿತಿ. ಸಚಿವರು ಈ ಸುತ್ತಲಿನ ಕ್ಯಾಕ್ಟಸ್ ನಿಂದ ಶೀಘ್ರ ಹೊರಬರಬೇಕಿದೆ.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು:

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ ಪ್ರತಿಕ್ರಿಯೆ ನೀಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅಷ್ಟಕ್ಕೂ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಮೃತೇಶ್ವರ ಸ್ವಾಮಿಯವರು ನಡೆಸಿರುವುದು ಅಧಿಕೃತ ಸರ್ಕಾರಿ ಸಭೆ ಅಲ್ಲ. ಜೆಜಿ ಹಳ್ಳಿ ಭಾಗದ ಕುಡಿಯುವ ನೀರಿನ ಸಮಸ್ಯೆ ಎಲ್ಲರಿಗೂ ಗೊತ್ತಿರುವಂತದ್ದೇ. ಹತ್ತಾರು ವರ್ಷಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಚಿವರು ಪಣತೊಟ್ಟಿದ್ದು ಅದರ ಆಗುಹೋಗುಗಳ ಬಗ್ಗೆ ಗಮನ ಹರಿಸಿರುವುದನ್ನು ದೊಡ್ಡದು ಮಾಡಲಾಗಿದೆ ಎಂದರು.