ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಇಲ್ಲಿನ ಕೇಶ್ವಾಪುರದಲ್ಲಿ ಇರುವ ಮಹದೇವ ಕಾಲನಿ ಕಳೆದ 35 ವರ್ಷಗಳಿಂದ ಸಮಸ್ಯೆಗಳ ಸುಳಿಯಲ್ಲಿ ನರಳುತ್ತಿದೆ. ಸ್ಥಳೀಯರ ಸಮಸ್ಯೆಗೆ ಸ್ಪಂದನೆ, ಅಭಿವೃದ್ಧಿಗೆ ಆದ್ಯತೆ ನೀಡಬೇಕಿದ್ದ ಪಾಲಿಕೆ ಸದಸ್ಯರು ಚುನಾಯಿತರಾದ ಮೇಲೆ ಇತ್ತ ಒಮ್ಮೆಯೂ ತಿರುಗಿ ನೋಡಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು ಸಮಸ್ಯೆ ಯಾರಬಳಿ ಹೇಳಿಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದಾರೆ.
ಹು-ಧಾ ಮಹಾನಗರ ಪಾಲಿಕೆಯ 43ನೇ ವಾರ್ಡಿನಲ್ಲಿ ಬರುವ ಕೇಶ್ವಾಪುರದ ಮಹದೇವ ಕಾಲನಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಹೊಸ ರಸ್ತೆ ನಿರ್ಮಿಸುವ ವರೆಗೆ ದುರಸ್ತಿಯನ್ನಾದರೂ ಮಾಡಿ ಎಂದು ಈ ರಸ್ತೆಯ ಕುರಿತು ಸ್ಥಳೀಯರು ಕಳೆದ ಎಂಟತ್ತು ವರ್ಷಗಳಿಂದ ಪಾಲಿಕೆ ಆಯುಕ್ತರಿಗೆ ಹಾಗೂ ಸದಸ್ಯರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ, ಸ್ಪಂದಿಸುವ ಕಾರ್ಯ ಮಾತ್ರ ಈ ವರೆಗೂ ಆಗಿಲ್ಲ.ಕೆಸರುಗದ್ದೆಯಾದ ರಸ್ತೆ:
ಕೇಶ್ವಾಪುರದಿಂದ ಸುಳ್ಳ ರಸ್ತೆ ಮಾರ್ಗ ಮಧ್ಯದಲ್ಲಿ ಬರುವ ಮಹದೇವ ಕಾಲನಿಗೆ ತೆರಳಬೇಕಾದರೆ ಜನತೆ ಹರಸಾಹಸ ಪಡುವಂತಾಗಿದೆ. ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ಮಧ್ಯದಲ್ಲಿ ಬೃಹತ್ ಗುಂಡಿಗಳು ಬಿದ್ದಿದ್ದು, ಎರಡು ಅಡಿಗೂ ಹೆಚ್ಚು ನೀರು ರಸ್ತೆಯಲ್ಲಿಯೇ ನಿಲ್ಲುತ್ತಿರುವುದರಿಂದ ವಾಹನ ಸವಾರರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ.ಸಾಂಕ್ರಾಮಿಕ ರೋಗಗಳ ಭಯ:
ಕಳೆದ ಎಂಟತ್ತು ದಿನಗಳಿಂದ ಹುಬ್ಬಳ್ಳಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಮಹದೇವ ಕಾಲನಿಯ ರಸ್ತೆಯುದ್ದಕ್ಕೂ ಮತ್ತಷ್ಟು ನೀರು ನಿಂತು ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ರಸ್ತೆಯ ಅಕ್ಕಪಕ್ಕದಲ್ಲಿರುವ ಜನತೆ ಸಾಂಕ್ರಾಮಿಕ ರೋಗಗಳು ಉಲ್ಬಣಿಸುವ ಆತಂಕದಲ್ಲಿದ್ದಾರೆ. ಅಲ್ಲದೇ ಡೆಂಘೀ ಹಾವಳಿ ಹೆಚ್ಚಾಗಿದೆ. ಈ ಭಾಗದಲ್ಲಿ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಲು ಭಯಪಡುವಂತಾಗಿದೆ.ಮನೆಗೆ ನುಗ್ಗುವ ಕೊಳಚೆ ನೀರು:
ರಸ್ತೆಗೆ ಹೊಂದಿಕೊಂಡಿರುವ ಮನೆಗಳಿಗೆ ಕೊಳಚೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ರಸ್ತೆಯ ಮೇಲೆ ವಾಹನಗಳು ಸಂಚರಿಸಿದರೆ ರಸ್ತೆಯ ಮೇಲಿದ್ದ ನೀರು ಮನೆಗೆ ನುಗ್ಗುತ್ತಿದೆ. ಇನ್ನು ಟ್ರ್ಯಾಕ್ಟರ್, ಆಟೋ ಸಂಚರಿಸಿದರೆ ರಸ್ತೆ ಮೇಲೆ ಸಂಗ್ರಹಗೊಂಡ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ನಿತ್ಯವೂ ಈ ನೀರನ್ನು ಹೊರಹಾಕಬೇಕು. ಈ ಕುರಿತು ಪಾಲಿಕೆ ಆಯುಕ್ತರಿಗೆ ಹತ್ತಾರು ಬಾರಿ ಮನವಿ ಸಲ್ಲಿಸಲಾಗಿದೆ. ಇನ್ನು ಪಾಲಿಕೆ ಸದಸ್ಯರಿಗೆ ಈ ಕುರಿತು ಹೇಳಲು ಕರೆ ಮಾಡಿದರೆ ಸ್ವೀಕರಿಸುವುದೇ ಇಲ್ಲ. ಚುನಾವಣೆ ವೇಳೆ ನಮ್ಮ ಕಾಲನಿಗೆ ಭೇಟಿ ನೀಡಿರುವುದನ್ನು ಹೊರತುಪಡಿಸಿದರೆ ಈ ಕಡೆ ಅವರು ಒಮ್ಮೆಯೂ ಸುಳಿದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ. ಇನ್ನು ಇಲ್ಲಿನ ಸಮಸ್ಯೆ ಕುರಿತು ''''ಕನ್ನಡಪ್ರಭ'''' ಪ್ರತಿನಿಧಿ ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ ಅವರಿಗೆ ಹತ್ತಾರು ಬಾರಿ ಕಡೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.ಮಹದೇವ ಕಾಲನಿಯ ರಸ್ತೆಯು ಕಳೆದ 20 ವರ್ಷಗಳಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಅಕ್ಕಪಕ್ಕದಲ್ಲಿರುವ ಕಾಲನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಿದ್ದಾರೆ. ಮಹದೇವ ಕಾಲನಿಯ ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ ಎಂದು ವಿ.ವಿ. ಗೌಡರ, ಅಶೋಕ ತಿಮ್ಮಣ್ಣವರ ಎಂದು ಬೇಸರ ವ್ಯಕ್ತಪಡಿಸಿದರು.ಮಹದೇವ ಕಾಲನಿ ರಸ್ತೆ ಸೇರಿದಂತೆ ಅಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಸದಸ್ಯರೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸಲು ಆದ್ಯತೆ ನೀಡಲಾಗುವುದು. ಪ್ರಮುಖ ಸಮಸ್ಯೆಯಾಗಿರುವ ರಸ್ತೆ ದುರಸ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.