ಸಾರಾಂಶ
ಬೈಲಹೊಂಗಲ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೆ.3ರಂದು ಚುನಾವಣೆ ಘೋಷಣೆಯಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ತುರಿಸಿನ ಪೈಪೋಟಿ ಏರ್ಪಟ್ಟಿದೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೆ.3ರಂದು ಚುನಾವಣೆ ಘೋಷಣೆಯಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ತುರಿಸಿನ ಪೈಪೋಟಿ ಏರ್ಪಟ್ಟಿದೆ.27 ಬಲ ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್ 18 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪೂರ್ಣ ಬಹುಮತ ಪಡೆದಿದೆ. ಪ್ರತಿಪಕ್ಷ ಬಿಜೆಪಿಯ 9 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ವಿಜಯ ಬೊಳನ್ನವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬುಡ್ಡೆಸಾಬ ಶಿರಸಂಗಿ, ಸದ್ರುದ್ದೀನ್ ಅತ್ತಾರ ನಡುವೆ ತೀವ್ರ ಪೈಪೋಟಿ ಇದ್ದು, ಶಾಸಕರ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಸಾಮಾನ್ಯ ವರ್ಗದ ಮೀಸಲಾತಿ ಹೊಂದಿದ್ದ ಮೊದಲ ಅವಧಿಯಲ್ಲಿ 30 ತಿಂಗಳು ಬಾಬು ಕುಡಸೋಮನ್ನವರ, ನಂತರ ಬಸವರಾಜ ಜನ್ಮಟ್ಟಿ ಅಧ್ಯಕ್ಷರಾಗಿದ್ದರು. ನಂತರದ ಅವಧಿಗೆ ರಾಜ್ಯಾದ್ಯಂತ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ವಿಚಾರ ಹೈಕೋರ್ಟ್ ಕದ ತಟ್ಟಿದ್ದರಿಂದ ಉಪವಿಭಾಗಾಧಿಕಾರಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ನ್ಯಾಯಾಲಯ ಚುನಾವಣೆಗೆ ಹಸಿರು ನಿಶಾನೆ ತೋರಿಸಿದ ಬಳಿಕ ತಹಸೀಲ್ದಾರರು ಸೆ.3ರಂದು ಚುನಾವಣೆ ನಿಗದಿಪಡಿಸಿದೆ.ಶಾಸಕ ಮಹಾಂತೇಶ ಕೌಜಲಗಿ ಅವರ ನಿರ್ಣಯವೇ ಅಂತಿಮವಾಗಿದ್ದು, ಶಾಸಕರ ನಿಲುವಿಗೆ ಬದ್ಧರಿರುವದಾಗಿ ಸದಸ್ಯರು ತಿಳಿಸಿದ್ದಾರಂತೆ. ಚುನಾವಣೆ ನಡೆಸದೆ ಶಾಸಕರು ಅವಿರೋಧ ಆಯ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ.
ಮೊದಲ ಅವಧಿಯಲ್ಲಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿ ವಿಜಯ ಬೋಳನ್ನವರ ಪ್ರಬಲ ಪೈಪೋಟಿ ನೀಡಿದ್ದರು. ನಂತರ ಶಾಸಕರ ಸಂಧಾನ ನಡೆಸಿ ಮುಂದಿನ ಅವಧಿಗೆ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದರಿಂದ ಪಟ್ಟು ಸಡಿಲಿಸಿದ್ದರು ಎಂದು ಹೇಳಲಾಗುತ್ತಿದೆ,.ಹೀಗಾಗಿ ಈ ಬಾರಿ ವಿಜಯ ಶ್ರೀಶೈಲ ಬೋಳನ್ನವರ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವ ಲಕ್ಷಣಗೋಚರವಾಗಿದ್ದು, ಶಾಸಕ ಮಹಾಂತೇಶ ಕೌಜಲಗಿ ಅವರ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಸದಸ್ಯರು ಹಾಗೂ ಪಟ್ಟಣದ ಜನತೆಯಲ್ಲಿ ಮನೆಮಾಡಿದ್ದು, ಮಂಗಳವಾರ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.