ಜಿಲ್ಲಾ ಬಿಜೆಪಿಗೆ ಬಾಸ್‌ ಯಾರು?

| Published : Dec 30 2023, 01:15 AM IST

ಸಾರಾಂಶ

ಲೋಕಸಭೆ ಚುನಾವಣೆ ಸಮೀಪಿಸಿದ್ದು ಯಾರು ಕೈಗೆ ಜಿಲ್ಲೆಯ ಅಧಿಕಾರಿ ಸಿಗಲಿದೆ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಹೆಚ್ಚಿದೆ. ವರಿಷ್ಠರ ಆಯ್ಕೆ ಯಾರಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ಶಿರಸಿ:

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ವೆಂಕಟೇಶ ನಾಯ್ಕ ಅವರ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಶಿರಸಿಗೆ ಶುಕ್ರವಾರ ಆಗಮಿಸಿದ್ದ ವೀಕ್ಷಕರ ಮುಂದೆ 12 ಜನ ತಮ್ಮ ಅಹವಾಲು ಸಲ್ಲಿಸಿದ್ದಾರೆ ಎನ್ನಲಾಗಿದೆ.

ನಗರದ ಪಕ್ಷದ ಕಚೇರಿಯಲ್ಲಿ ಆಕಾಂಕ್ಷಿತರ ಅಹವಾಲು ಸ್ವೀಕಾರ ಆಂತರಿಕವಾಗಿ ನಡೆದಿದೆ. ವಿಶೇಷವಾಗಿ ಭಟ್ಕಳ ಮತ್ತು ಕುಮಟಾ ಭಾಗದಿಂದಲೇ ಹೆಚ್ಚಿನ ಕಾರ್ಯಕರ್ತ ನಾಯಕರು ತಮ್ಮ ಅಹವಾಲು ಸಲ್ಲಿಸಿದ್ದಾರೆ.

ಒಂದು ಮೂಲದ ಪ್ರಕಾರ ಶಿರಸಿಯಿಂದ ತಾಪಂ ಮಾಜಿ ಉಪಾಧ್ಯಕ್ಷ, ಸಕ್ರಿಯ ಕಾರ್ಯಕರ್ತ ಚಂದ್ರು ಎಸಳೆ ತಮ್ಮ ಉಮೇದುದಾರಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಅದರಂತೆ ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ಜಟ್ಟಪ್ಪ ನಾಯ್ಕ, ಕುಮಟಾದ ಮಾರ್ಕಂಡೇಯ, ಎನ್‌.ಎಸ್. ಹೆಗಡೆ, ಹಳಿಯಾಳದ ಮಾಜಿ ಶಾಸಕ ಸುನೀಲ ಹೆಗಡೆ ಸಹ ತಮ್ಮ ಅಹವಾಲು ಸಲ್ಲಿಸಿದ್ದಾರೆ. ವೀಕ್ಷಕರಾಗಿ ಮೂವರನ್ನು ನೇಮಿಸಲಾಗಿತ್ತಾದರೂ ನಗರಕ್ಕೆ ಶುಕ್ರವಾರ ಇಬ್ಬರು ಮಾತ್ರ ಆಗಮಿಸಿದ್ದರು. ಮಾಜಿ ಸಚಿವ ಹರತಾಳು ಹಾಲಪ್ಪ, ಹರೀಶ ಪೂಂಜಾ ಆಗಮಿಸಿದ್ದರೆ ಇನ್ನೋರ್ವ ವೀಕ್ಷಕ ಸುನೀಲಕುಮಾರ ಬಂದಿರಲಿಲ್ಲ ಎನ್ನಲಾಗಿದೆ.ಆಕಾಂಕ್ಷಿತರ ಪಟ್ಟಿಯನ್ನು ಈ ವೀಕ್ಷಕರು ಬೆಂಗಳೂರಿನ ಮುಖ್ಯ ಕಚೇರಿಗೆ ತಲುಪಿಸಲಿದ್ದು, ಪಕ್ಷ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕೌತುಕ ಈಗ ಮನೆ ಮಾಡಿದೆ. ಲೋಕಸಭೆ ಚುನಾವಣೆ ಸಮೀಪ ಇರುವುದರಿಂದ ಯೋಗ್ಯ ವ್ಯಕ್ತಿಯ ಕೈನಲ್ಲೇ ಜಿಲ್ಲೆಯನ್ನು ನೀಡುವ ಜವಾಬ್ದಾರಿ ಪಕ್ಷದ ಮೇಲಿದ್ದು, ವರಿಷ್ಠರ ಆಯ್ಕೆ ಯಾರಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.