ಯಾರಾಗ್ತಾರೆ ಮಹಾನಗರದ ಪ್ರಥಮ ಪ್ರಜೆ

| Published : Jun 29 2024, 12:38 AM IST

ಸಾರಾಂಶ

ಮೇಯರ್ ಸ್ಥಾನವು ಹಿಂದುಳಿದ ವರ್ಗ ಎ ಹಾಗೂ ಉಪಮೇಯರ್ ಸ್ಥಾನವೂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಮೇಯರ್‌ ಸ್ಥಾನಕ್ಕೆ ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕರ್‌, ರಾಮಣ್ಣ ಬಡಿಗೇರ ಮಧ್ಯೆ ತೀವ್ರ ಪೈಪೋಟಿ ನಡೆದಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಚುನಾವಣೆ ಶನಿವಾರ ನಡೆಯಲಿದೆ. ಮೇಯರ್‌ ಸ್ಥಾನಕ್ಕೆ ಹಿರಿಯ ಸದಸ್ಯರಾದ ರಾಮಣ್ಣ ಬಡಿಗೇರ, ಉಮೇಶಗೌಡ ಕೌಜಗೇರಿ ಹಾಗೂ ಬೀರಪ್ಪ ಖಂಡೇಕರ್‌ ಮಧ್ಯೆ ಪೈಪೋಟಿ ಏರ್ಪಟ್ಟಿದ್ದರೆ, ಉಪಮೇಯರ್‌ ಹುದ್ದೆಗೆ ದುರ್ಗಮ್ಮ ಬಿಜವಾಡ, ಚಂದ್ರಿಕಾ ಮೇಸ್ತ್ರಿ ಮಧ್ಯೆ ಪೈಪೋಟಿ ನಡೆದಿದೆ. ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಕೋರ್‌ ಕಮೀಟಿ ಸಭೆ ನಡೆಸಿ ಎಲ್ಲ ಸದಸ್ಯರ ಪ್ರತ್ಯೇಕ ಅಭಿಪ್ರಾಯ ಸಂಗ್ರಹಿಸಿದ್ದು, ಯಾರಿಗೆ ಪಟ್ಟ ಎಂಬುದು ಕುತೂಹಲ ಕೆರಳಿಸಿದೆ.

ಮೇಯರ್ ಸ್ಥಾನವು ಹಿಂದುಳಿದ ವರ್ಗ ಎ ಹಾಗೂ ಉಪಮೇಯರ್ ಸ್ಥಾನವೂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಮೇಯರ್‌ ಸ್ಥಾನಕ್ಕೆ ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕರ್‌, ರಾಮಣ್ಣ ಬಡಿಗೇರ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಬೀರಪ್ಪ ಹಾಗೂ ಕೌಜಗೇರಿ 3 ಬಾರಿ ಸದಸ್ಯರಾದವರು. ಬಡಿಗೇರ ನಾಲ್ಕನೆಯ ಬಾರಿಗೆ ಪಾಲಿಕೆಗೆ ಆಯ್ಕೆಯಾದವರು. ಹಿಂದೆ ಎರಡು ಬಾರಿ ಮೇಯರ್‌ ಹುದ್ದೆಗೆ ಅರ್ಹರಾಗಿದ್ದರೂ ಅವರಿಗೆ ಆಗ ತಪ್ಪಿತ್ತು. ಹೀಗಾಗಿ ಅವರ ಬಗ್ಗೆ ಪಕ್ಷದಲ್ಲಿ ಸಿಂಪಥಿ ಇದೆ. ಖಂಡೇಕರ್‌ ಕೂಡ ಭಾರೀ ಪ್ರಯತ್ನ ನಡೆಸಿದ್ದಾರೆ. ಖಂಡೇಕರ್‌ ಮತ್ತು ಬಡಿಗೇರ ಮಧ್ಯೆ ಫೈಪೋಟಿ ಜೋರಾಗಿದೆ. ಈ ಇಬ್ಬರಲ್ಲಿ ಒಬ್ಬರಿಗೆ ಪಟ್ಟ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಉಪಮೇಯರ್‌ ಹುದ್ದೆಗೆ ದುರ್ಗಮ್ಮ ಬಿಜವಾಡ ಹಾಗೂ ಚಂದ್ರಿಕಾ ಮೇಸ್ತ್ರಿ ಮಧ್ಯ ಪೈಪೋಟಿ ಇದೆ. ಬಿಜವಾಡ ಮುಂಚೂಣಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಯ್ಕೆಗಾಗಿ ಮೀಟಿಂಗ್‌?:

ಮೇಯರ್‌- ಉಪಮೇಯರ್‌ ಸ್ಥಾನಗಳ ಆಯ್ಕೆಗಾಗಿ ಬಿಜೆಪಿ ಕೋರ್‌ ಕಮೀಟಿ ಸಭೆಯೂ ನಗರದ ಖಾಸಗಿ ಹೋಟೆಲ್‌ನಲ್ಲಿ ತಡರಾತ್ರಿವರೆಗೂ ನಡೆದಿದೆ. ಜಿಲ್ಲೆಯ ಮಟ್ಟಿಗೆ ಹೈಕಮಾಂಡ್‌ ಎನಿಸಿರುವ ಕೇಂದ್ರ ಸಚಿವರೂ ಆಗಿರುವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಧಾರವಾಡ ವಿಭಾಗದ ಪ್ರಭಾರಿ ಲಿಂಗರಾಜ ಪಾಟೀಲ, ಎಂಎಲ್ಸಿ ಎಸ್‌.ವಿ. ಸಂಕನೂರ ಸಭೆ ನಡೆಸಿದ್ದಾರೆ.

ಪಾಲಿಕೆಯ ಬಿಜೆಪಿಯ ಎಲ್ಲ ಸದಸ್ಯರನ್ನು ಪ್ರತ್ಯೇಕವಾಗಿ ಕರೆದು ಅಭಿಪ್ರಾಯವನ್ನು ಕೇಳಿರುವ ಮುಖಂಡರು, ಯಾರಿಗೆ ಪಟ್ಟ ಎನ್ನುವುದನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ಮುಖಂಡರು ಪ್ರತ್ಯೇಕವಾಗಿ ಸಭೆ ನಡೆಸಿ ಯಾರನ್ನು ಮಾಡಿದರೆ ಉತ್ತಮ ಎನ್ನುವುದರ ಕುರಿತು ಚರ್ಚೆ ನಡೆಸಿದ್ದಾರೆ.

ವಾಸ್ತವ್ಯ ಅಲ್ಲೇ:

ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆದಿದ್ದು, ಅಲ್ಲೇ ಎಲ್ಲ ಸದಸ್ಯರು ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಬೆಳಗ್ಗೆ ಕೂಡ ಮತ್ತೊಮ್ಮೆ ಎಲ್ಲ ಸದಸ್ಯರೊಂದಿಗೆ ಮುಖಂಡರು ಸಭೆ ನಡೆಸಲಿದ್ದಾರೆ. ಬಳಿಕ ಹೋಟೆಲ್‌ನಿಂದಲೇ ನೇರವಾಗಿ ಪಾಲಿಕೆಯ ಮೇಯರ್‌ ಚುನಾವಣೆಗೆ ಎಲ್ಲ ಸದಸ್ಯರು ಆಗಮಿಸಲಿದ್ದಾರೆ.

ಒಟ್ಟಿನಲ್ಲಿ ಮಹಾನಗರದ ಪ್ರಥಮ ಪ್ರಜೆ ಯಾರಾಗ್ತಾರೆ ಎಂಬ ಕುತೂಹಲಕ್ಕೆ ಶನಿವಾರ ತೆರೆ ಬೀಳಲಿದೆ.

ಸಂಖ್ಯಾಬಲ:

82 ಸದಸ್ಯ ಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್‌, ಮೂವರು ಎಐಎಂಐಎಂ, 6 ಜನ ಪಕ್ಷೇತರ ಹಾಗೂ ಒಬ್ಬರು ಜೆಡಿಎಸ್‌ ಸದಸ್ಯರಿದ್ದಾರೆ. ಒಬ್ಬ ಸಂಸದ, ನಾಲ್ವರು ಶಾಸಕರು, ಮೂರು ಎಂಎಲ್‌ಸಿ ಹೀಗೆ ಎಂಟು ಜನಪ್ರತಿನಿಧಿಗಳು ಸೇರಿದಂತೆ 90 ಮತಗಳಿವೆ. ಎಲ್ಲರೂ ಪಾಲ್ಗೊಂಡರೆ 46 ಮತಗಳು ಬೇಕಾಗುತ್ತವೆ. ಜೆಡಿಎಸ್‌ನೊಂದಿಗೆ ಹೈಕಮಾಂಡ್‌ ಮಟ್ಟದಲ್ಲೇ ಬಿಜೆಪಿ ಮೈತ್ರಿ ಇರುವ ಕಾರಣ ಈ ಸಲ ಸಹಜವಾಗಿ ಅವರು ಬಿಜೆಪಿಗೆ ಮತಚಲಾಯಿಸಲಿದ್ದಾರೆ. ಇನ್ನು ಪಕ್ಷೇತರ 6 ಜನರಲ್ಲಿ ಈಗಾಗಲೇ ಮೂವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಇನ್ನು ಬಿಜೆಪಿಯಲ್ಲಿ ಮೂವರು ಎಂಎಲ್ಸಿ, ಇಬ್ಬರು ಶಾಸಕರು, ಒಬ್ಬರು ಸಂಸದರು ಸೇರಿದಂತೆ 6 ಜನ ಅಂದರೆ 48 ಮತಗಳಾಗುತ್ತವೆ. ಹೀಗಾಗಿ ಬಿಜೆಪಿಗೆ ಸ್ಪಷ್ಟಬಹುಮತ ಇದೆ. ಮತ್ತೊಮ್ಮೆ ಬಿಜೆಪಿ ಬಾವುಟ ಹಾರುವುದು ಖಚಿತವಾಗಿದೆ.

ಈ ನಡುವೆ ಕಾಂಗ್ರೆಸ್‌ಗೆ 33, ಪಕ್ಷೇತರ ಪೈಕಿ ಮೂವರು ಬೆಂಬಲಿಸಿದರೂ, ಶಾಸಕರಿಬ್ಬರ ಮತ ಲೆಕ್ಕ ಹಾಕಿದರೂ 38 ಆಗಬಹುದು. ಎಐಎಂಐಎಂ ಪಕ್ಷ ಏನಾದರೂ ಕಾಂಗ್ರೆಸ್‌ಗೆ ಬೆಂಬಲಿಸಿದರೆ 41 ಆಗಬಹುದು. ಆದರೆ ಎಐಎಂಐಎಂ ಪಕ್ಷದ ನಿಲುವೇನು ಎಂಬುದು ಗೊತ್ತಾಗಿಲ್ಲ. ಬಹುತೇಕ ತಟಸ್ಥ ಉಳಿಯುವ ಸಾಧ್ಯತೆ ಹೆಚ್ಚು.

ಧೋಂಗಡಿಗೆ ಮತ ಹಾಕಲು ಅವಕಾಶ:

ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಅನರ್ಹಗೊಂಡಿದ್ದ ಬಿಜೆಪಿ ಸದಸ್ಯೆ ಸರಸ್ವತಿ ವಿನಾಯಕ ಧೋಂಗಡಿ ಅವರಿಗೂ ಮತಾಧಿಕಾರ ದೊರಕಿದೆ. ಹೈಕೋರ್ಟ್‌ ಆದೇಶದ ಮೇಲೆ ಇವರ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ. ಹೀಗಾಗಿ ಮತ ಹಾಕಲು ಅಧಿಕಾರ ಸಿಕ್ಕಂತಾಗಿದೆ.