ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಲ್ಲೂ ನಮ್ಮ ಮೈತ್ರಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಾರ್ಲಿಮೆಂಟ್‌ಗೆ ಕಳಿಸಿಕೊಡುವ ಶಕ್ತಿ ನನಗಿನ್ನೂ ಇದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಆಗುವ ಅರ್ಹತೆ ಯಾರಿಗಿದೆ ಹೇಳಿ?. ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಗೆದ್ದರೆ ನಿಮ್ಮ ದೇವೇಗೌಡರೇ ಗೆದ್ದಂತೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.ಕೊರಟಗೆರೆ ಪಟ್ಟಣದ ಊರ್ಡಿಗೆರೆ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಜಾತ್ಯಾತೀತ ಜನತಾದಳ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೋಮಣ್ಣ ಗೆದ್ದರೆ ಮೋದಿ ಬಳಿ ಕಾವೇರಿ ವಿಚಾರ ಪ್ರಸ್ತಾಪಿಸುವೆ:ನಾನು ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿಯನ್ನು ನಂಬಿದ್ದೇನೆ. ೧೯೬೨ರಿಂದ ನಾನು ಕಾವೇರಿ ನೀರಿಗಾಗಿ ಹೋರಾಟ ಮಾಡಿದ್ದೇನೆ. ವಿ.ಸೋಮಣ್ಣ ಗೆದ್ದರೆ ತಲೆ ಎತ್ತಿ ನಾನು ನರೇಂದ್ರ ಮೋದಿಯವರಿಗೆ ಕಾವೇರಿ ನೀರು ಮತ್ತು ಮೇಕೆದಾಟಿನ ಬಗ್ಗೆ ಪ್ರಶ್ನೆ ಮಾಡುವೆ. ತಮಿಳುನಾಡಿನ ಸ್ಟಾಲಿನ್ ನೀರಿನ ವೈರತ್ವದ ಬಗ್ಗೆ ಪ್ರಧಾನಿ ಮೋದಿಗೂ ಅರ್ಥವಾಗಿದೆ. ನಾನು ೨೦೧೯ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಆದರೆ ಈ ಬಾರಿ ವಿ.ಸೋಮಣ್ಣ ಗೆದ್ದು ದೆಹಲಿಗೆ ಹೋಗಬೇಕಿದೆ ಎಂದು ಮನವಿ ಮಾಡಿದರು.
ಸಿದ್ದರಾಮಯ್ಯನವರೇ ನೀವು ರಾಜ್ಯದ ೭ ಕೋಟಿ ಜನರ ಮುಖ್ಯಮಂತ್ರಿ. ೧೫೦ ಕೋಟಿ ಜನರ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಮುನ್ನ ಎಚ್ಚರವಹಿಸಿ. ಸೋಮಣ್ಣ ಎಲ್ಲಿಯವನು ಅಂತಾ ನೀವು ಕೇಳುತ್ತೀರಾ. ನೀವು ಎಲ್ಲಿಯವರು, ಬಾದಾಮಿಗೆ ಯಾಕೆ ಹೋಗಿದ್ರಿ ಹೇಳಿ. ಹೆಗಡೆ ಸಿಎಂ ಆಗಿದ್ದಾಗ ಬರಗಾಲವಿತ್ತು, ಆಗ ಅವರದ್ದೇ ಕೇಂದ್ರ ಸರ್ಕಾರವಿದ್ದಾಗ ಎಷ್ಟು ಹಣ ಕೊಟ್ಟಿತ್ತು ಎಂದು ಸಿದ್ದರಾಮಯ್ಯ ಹೇಳಲಿ. ನಾನು ತುಮಕೂರಿಗೆ ನೀರು ಕೊಡುವುದಿಲ್ಲ ಅಂತ ಹೇಳಿ ನನ್ನನ್ನು ಸೋಲಿಸಿದರು. ಈಗ ಬೆಂಗಳೂರಿನಲ್ಲಿ ಕುಡಿಯೋ ನೀರಿನ ದಂಧೆ ಹೇಗೆ ನಡೆಯುತ್ತಿದೆ ಎಂಬುದು ಪ್ರಧಾನಿ ಮೋದಿಯವರ ಗಮನಕ್ಕೆ ಹೋಗಿದೆ ಎಂದರು.ತುಮಕೂರು ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಸಿದ್ದರಾಮಯ್ಯ ಸಿಎಂ ಮಾಡುವುದಕ್ಕೆ ೮೬ ಶಾಸಕರ ಸಹಿ ಹಾಕಿಸಿ ದೇವೇಗೌಡರಿಗೆ ಕೊಟ್ಟಿದ್ದು ಇದೇ ಸೋಮಣ್ಣ. ಒಂದೇ ಬೂತ್‌ನಲ್ಲಿ ೨ ಸಾವಿರ ಮತಗಳ ಲೀಡ್ ಕೊಡಿಸಿದ್ದು ಇದೇ ಸೋಮಣ್ಣ. ನೀವು ಮಾತನಾಡುವಾಗ ಅವರ ಅರ್ಹತೆ ಬಗ್ಗೆ ತಿಳಿಯಬೇಕಿದೆ. ನಿಮಗೆ ಅವಕಾಶ ಸಿಕ್ಕಿತು, ನೀವು ಮುಖ್ಯಮಂತ್ರಿ ಆಗಿದ್ದೀರಿ. ಅರ್ಹತೆ ಇದ್ದವರಿಗೆ ಸರಿಯಾದ ಅವಕಾಶ ಸಿಗುವುದಿಲ್ಲ. ನೀವು ಮೇಲೆ ಕುಳಿತಿರುವಿರೆಂದು ಇನ್ನೊಬ್ಬರನ್ನು ಟೀಕೆ ಮಾಡಬೇಡಿ ಎಂದು ಕಿಡಿಕಾರಿದರು.
ನಾವು ಬಡವರ ಮಕ್ಕಳು, ನಿಮ್ಮ ಹಾಗೆ ಶ್ರೀಮಂತರ ಮಕ್ಕಳಲ್ಲ. ನಾವು ಇನ್ನೊಬ್ಬರ ಬಗ್ಗೆ ರಾಜಕೀಯ ಪ್ರೇರಿತವಾಗಿ ಮಾತನಾಡಲ್ಲ. ಸೋಮಣ್ಣನ ಹಿಂದೆ ಇಡೀ ಭಾರತ ದೇಶವೇ ಇದೆ. ನರೇಂದ್ರ ಮೋದಿ, ಅಮಿತ್ ಶಾ ಅಂತಹ ನಾಯಕರು ಇದ್ದಾರೆ. ನನಗೆ ಸಂಸ್ಕಾರ ಹೇಳಿಕೊಟ್ಟ ದೇವೇಗೌಡರು ಜೊತೆಗಿದ್ದಾರೆ. ನಾನು ಯಾರ ಬಗ್ಗೆ ಟೀಕೆ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್‌ಗೆ ಟಾಂಗ್ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗೋಪಾಲಯ್ಯ, ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಬಿಜೆಪಿ ಮುಖಂಡ ಅನಿಲ್‌ಕುಮಾರ್, ಎಂಎಲ್‌ಸಿ ನಾರಾಯಣಸ್ವಾಮಿ, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ಬಿಜೆಪಿ ಯುವ ಅಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ಪವನಕುಮಾರ್, ಗುರುದತ್, ದಾಸಲುಕುಂಟೆ ರಘು ಸೇರಿದಂತೆ ಇತರರು ಇದ್ದರು.
೩ಗಂಟೆ ತಡವಾಗಿ ಸಮಾವೇಶ ಆರಂಭ:ಮೈತ್ರಿಪಕ್ಷದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೋಮವಾರ ಬೆ.೧೦ಗಂಟೆಗೆ ಬರಬೇಕಿತ್ತು. ಆದರೆ ಕೆಲವು ಕಾರಣದಿಂದ ೩ಗಂಟೆ ತಡವಾಗಿ ಮಧ್ಯಾಹ್ನ ೧ಗಂಟೆಗೆ ಆಗಮಿಸಿದ ಪರಿಣಾಮ ಸಮವೇಶ ತಡವಾಗಿ ಆರಂಭವಾಯಿತು. ಹಳ್ಳಿಗಳಿಂದ ಆಗಮಿಸಿದ್ದ ನೂರಾರು ಜನ ಮುಖಂಡರು ಮತ್ತು ಕಾರ್ಯಕರ್ತರು ಬಿಸಿಲಿನ ತಾಪಕ್ಕೆ ಕಾದು ಕಾದು ಬೇಜಾರಿನಿಂದ ಹಿಂದಿರುಗಿದ ಘಟನೆ ನಡೆಯಿತು. ಹಾಲಿ ಸಂಸದ ಬಸವರಾಜು ಗೈರು:ಮೈತ್ರಿಪಕ್ಷದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಾವೇಶದಲ್ಲೂ ಗೈರಾಗಿದ್ದ ತುಮಕೂರು ಹಾಲಿ ಸಂಸದ ಜಿ.ಎಸ್.ಬಸವರಾಜು ಕೊರಟಗೆರೆಯಲ್ಲಿ ಸೋಮವಾರ ನಡೆದ ಮಾಜಿ ಪ್ರಧಾನಿಯವರ ಸಮಾವೇಶದಲ್ಲೂ ಮತ್ತೆ ಗೈರಾದರು. ಕೊರಟಗೆರೆಯಲ್ಲಿ ನಡೆದ ವಿ.ಸೋಮಣ್ಣನವರ ಸುದ್ದಿಗೋಷ್ಟಿ ಸೇರಿದಂತೆ ಕೊರಟಗೆರೆ ಕ್ಷೇತ್ರದ ಬೂತ್‌ಮಟ್ಟದ ಸಭೆ ಮತ್ತು ಗ್ರಾಪಂಮಟ್ಟದ ಯಾವುದೇ ಸಮಾರಂಭಗಳಲ್ಲಿ ಅವರು ಭಾಗವಹಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ.