ಕೆರೆ ಉಳಿಸಿದ ಗರಿ, ₹400 ಕೋಟಿ ಆದಾಯ ಗುರಿ!

| Published : Oct 11 2025, 12:02 AM IST

ಸಾರಾಂಶ

ನಶಿಸುತ್ತಿರುವ ರಾಜ್ಯದ ಜಲಮೂಲಗಳ ಅಭಿವೃದ್ಧಿಗೆ ಮುಂದಾಗಿರುವ ಸಣ್ಣ ನೀರಾವರಿ ಇಲಾಖೆ, ಅದರ ಜತೆಗೆ ಆದಾಯಗಳಿಸುವತ್ತಲೂ ಗಮನಹರಿಸಿದೆ. ಮುಂದಿನ 10 ವರ್ಷಗಳಲ್ಲಿ 39 ಕೆರೆಗಳಿಂದ ₹400 ಕೋಟಿ ಆದಾಯಗಳಿಸುವ ಯೋಜನೆ ರೂಪಿಸಲಾಗಿದೆ.

ಗಿರೀಶ್‌ ಗರಗ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಶಿಸುತ್ತಿರುವ ರಾಜ್ಯದ ಜಲಮೂಲಗಳ ಅಭಿವೃದ್ಧಿಗೆ ಮುಂದಾಗಿರುವ ಸಣ್ಣ ನೀರಾವರಿ ಇಲಾಖೆ, ಅದರ ಜತೆಗೆ ಆದಾಯಗಳಿಸುವತ್ತಲೂ ಗಮನಹರಿಸಿದೆ. ಮುಂದಿನ 10 ವರ್ಷಗಳಲ್ಲಿ 39 ಕೆರೆಗಳಿಂದ ₹400 ಕೋಟಿ ಆದಾಯಗಳಿಸುವ ಯೋಜನೆ ರೂಪಿಸಲಾಗಿದೆ.

ರಾಜ್ಯದಲ್ಲಿ ಒಟ್ಟಾರೆ 41,875 ಕೆರೆಗಳಿವೆ. ಅವುಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ನಿರ್ವಹಣೆಯಲ್ಲೇ 32,068 ಕೆರೆಗಳಿವೆ. ಉಳಿದಂತೆ ಸಣ್ಣ ನೀರಾವರಿ ಇಲಾಖೆ, ಜಲಸಂಪನ್ಮೂಲ, ಸ್ಥಳೀಯ ಸಂಸ್ಥೆಗಳು ಸೇರಿ ಇನ್ನಿತರ ಇಲಾಖೆಗಳ ನಿರ್ವಹಣೆಯಲ್ಲಿ 9 ಸಾವಿರಕ್ಕೂ ಹೆಚ್ಚಿನ ಕೆರೆಗಳಿವೆ. ಅದರಲ್ಲೂ ಸಣ್ಣ ನೀರಾವರಿ ಇಲಾಖೆ ಅಡಿಯಲ್ಲೇ 3,778 ಕೆರೆಗಳಿದ್ದು, ಆ ಕೆರೆಗಳ ನಿರ್ವಹಣೆಗೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಕೆರೆಗಳ ಸಂರಕ್ಷಣೆ, ನಿರ್ವಹಣೆ ಜತೆಗೆ ಅವುಗಳಿಂದ ಇಲಾಖೆಗೆ ಆದಾಯ ಬರುವಂತೆ ಮಾಡಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ 39 ಕೆರೆಗಳನ್ನು ಗುರುತಿಸಲಾಗಿದ್ದು, ಅವುಗಳಿಂದ ಮುಂದಿನ 10 ವರ್ಷ ₹340 ಕೋಟಿನಿಂದ ₹400 ಕೋಟಿವರೆಗೆ ಆದಾಯಗಳಿಸುವ ಗುರಿ ಹೊಂದಲಾಗಿದೆ.

ಒಂದು ಕೆರೆಯಿಂದ ತಲಾ ₹2 ಕೋಟಿ:

ಸದ್ಯ ಸಣ್ಣ ನೀರಾವರಿ ಇಲಾಖೆ 9 ಜಿಲ್ಲೆಗಳ 39 ಕೆರೆಗಳನ್ನು ಗುರುತಿಸಿದೆ. ಅದರಲ್ಲಿ ಬೆಂಗಳೂರು, ಮೈಸೂರು, ಧಾರವಾಡ, ತುಮಕೂರು ಜಿಲ್ಲೆಗಳ ನಗರ ಪ್ರದೇಶದಲ್ಲಿನ 15 ಕೆರೆಗಳು ಹಾಗೂ ಚಿತ್ರದುರ್ಗ, ಬಳ್ಳಾರಿ, ತುಮಕೂರು, ಕೊಪ್ಪಳ ಮತ್ತು ಕೋಲಾರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿನ 24 ಕೆರೆಗಳನ್ನು ಆದಾಯ ಗಳಿಕೆಗೆ ಆಯ್ಕೆ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆ ರೂಪಿಸಿರುವ ಯೋಜನೆ ಪ್ರಕಾರ ನಗರ ಪ್ರದೇಶದ ಪ್ರತಿ ಕೆರೆಗಳಿಂದ ವಾರ್ಷಿಕ ₹1.70 ಕೋಟಿಯಿಂದ ₹2 ಕೋಟಿ ಮತ್ತು ಗ್ರಾಮೀಣ ಭಾಗದ ಕೆರೆಗಳಿಂದ ವಾರ್ಷಿಕ ತಲಾ ₹35 ಲಕ್ಷ ದಿಂದ ₹45 ಲಕ್ಷ ಆದಾಯ ಅಂದಾಜಿಸಲಾಗಿದೆ. ಅದರಂತೆ ನಗರ ಪ್ರದೇಶದ ಕೆರೆಗಳಿಂದ 10 ವರ್ಷದಲ್ಲಿ ₹255 ಕೋಟಿಗಳಿಂದ ₹300 ಕೋಟಿ ಹಾಗೂ ಗ್ರಾಮೀಣ ಭಾಗದ ಕೆರೆಗಳಿಂದ ₹85 ಕೋಟಿನಿಂದ ₹100 ಕೋಟಿ ಆದಾಯಗಳಿಸುವ ಗುರಿ ಹೊಂದಲಾಗಿದೆ.

ಬೋಟಿಂಗ್‌, ಮೀನುಗಾರಿಕೆಗೆ ಒತ್ತು:

ನಗರ ಪ್ರದೇಶದಲ್ಲಿನ ಕೆರೆಗಳಲ್ಲಿ ಬೋಟಿಂಗ್‌, ಆ್ಯಂಪಿ ಥಿಯೇಟರ್‌ ನಿರ್ಮಿಸಿ ಬಾಡಿಗೆಗೆ ನೀಡುವುದು, ಕೆಫೆ, ವ್ಯಾಪಾರಿ ಕಿಯಾಸ್ಕ್‌ ನಿರ್ಮಾಣ, ಜಾಹೀರಾತು ಪ್ರದರ್ಶನ, ವಾಹನ ನಿಲುಗಡೆ ಶುಲ್ಕದಿಂದ ಆದಾಯಗಳಿಸಲು ನಿರ್ಧರಿಸಲಾಗಿದೆ. ಉಳಿದಂತೆ ಗ್ರಾಮೀಣ ಭಾಗದ ಕೆರೆಗಳಲ್ಲಿ ಮೀನುಗಾರಿಕೆ, ಇಕೋ ಟೂರಿಸಂ, ಅವಕಾಶವಿದ್ದರೆ ಬೋಟಿಂಗ್‌, ವ್ಯಾಪಾರಿ ಕಿಯಾಸ್ಕ್‌ಗಳ ನಿರ್ಮಾಣದ ಮೂಲಕ ಆದಾಯಗಳಿಸಲಾಗುತ್ತದೆ.

ಇವುಗಳ ಜತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಕೆರೆಗಳ ಸುತ್ತ ವಾಕಿಂಗ್‌ ಪಥ, ಸೈಕಲ್‌ ಪಥ, ಇಕೋ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಇನ್ನಿತರ ಮೂಲಸೌಕರ್ಯ ಒದಗಿಸಲಾಗುತ್ತದೆ. ಅದರೊಂದಿಗೆ ಕೆರೆಗಳಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯುವುದು, ಕೆರೆಯ ದಂಡೆಗಳ ಅಭಿವೃದ್ಧಿ ಸೇರಿ ಕೆರೆ ಸಂರಕ್ಷಿಸುವ ಕೆಲಸವನ್ನೂ ಮಾಡಲಾಗುತ್ತದೆ.

ಅಭಿವೃದ್ಧಿ-ನಿರ್ವಹಣೆ ಖಾಸಗಿಯವರದ್ದು:

ಕೆರೆಗಳ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ ಅಥವಾ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಳ್ಳಲಾಗುತ್ತದೆ. ಕೆರೆಗಳನ್ನು ನಿಗದಿಯಂತೆ ಅಭಿವೃದ್ಧಿ ಮಾಡಿ ನಿರ್ವಹಣೆ ಮಾಡುವ ಹೊಣೆಯನ್ನು ಖಾಸಗಿಯವರಿಗೆ ನೀಡಲಾಗುತ್ತದೆ. ಅಲ್ಲದೆ, ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬ ಕುರಿತು ಸಣ್ಣ ನೀರಾವರಿ ಇಲಾಖೆಯೇ ನಿಗದಿ ಮಾಡುತ್ತದೆ. ಅಲ್ಲದೆ, ಕೆರೆಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆ ಮತ್ತು ಸಣ್ಣ ನೀರಾವರಿ ಇಲಾಖೆ 10 ವರ್ಷಕ್ಕೆ ₹285 ಕೋಟಿ ವ್ಯಯಿಸಲಿವೆ. ಅವುಗಳಿಂದ ಬರುವ ಆದಾಯ ಹಂಚಿಕೆ ಮಾಡಿಕೊಳ್ಳಲಿವೆ.

10 ವರ್ಷಗಳ ಆದಾಯಕ್ಕೆ ನಿರ್ದೇಶನ

ಮೊದಲ ಹಂತದಲ್ಲಿ 39 ಕೆರೆಗಳನ್ನು ಇಲಾಖೆ ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ 15 ನಗರ ಮತ್ತು 24 ಗ್ರಾಮೀಣ ಭಾಗದ ಕೆರೆಗಳು. ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅದಕ್ಕಾಗಿ 10 ವರ್ಷಕ್ಕೆ ₹285 ಕೋಟಿ ವೆಚ್ಚ ನಿಗದಿ ಮಾಡಲಾಗಿದೆ. ಇದರಲ್ಲಿ ನಗರ ಪ್ರದೇಶದ 15 ಕೆರೆಗಳಿಗೆ ತಲಾ ₹11.25 ಕೋಟಿಯಂತೆ ₹168.75 ಕೋಟಿ ಹಾಗೂ ಗ್ರಾಮೀಣ ಭಾಗದ 24 ಕೆರೆಗಳಿಗೆ ತಲಾ ₹4.85 ಕೋಟಿಯಂತೆ ₹116.40 ಕೋಟಿ ವ್ಯಯಿಸಲಾಗುತ್ತದೆ. ಅಲ್ಲದೆ, ಗುರುತಿಸಲಾಗಿರುವ ಕೆರೆಗಳಲ್ಲಿ ಬೋಟಿಂಗ್‌, ಮೀನುಗಾರಿಕೆ, ಇಕೋ ಟೂರಿಸಂ ಸೇರಿ ಇನ್ನಿತರ ಚಟುವಟಿಕೆಗಳ ಅನುಷ್ಠಾನ, ಆದಾಯಗಳಿಸಲು ಯೋಜನೆ ರೂಪಿಸಲಾಗುತ್ತದೆ. ಒಟ್ಟಾರೆ 10 ವರ್ಷದಲ್ಲಿ 340ರಿಂದ 400 ಕೋಟಿ ರು. ಆದಾಯಗಳಿಸುವ ಗುರಿ ಹೊಂದಲಾಗಿದೆ.