ಸಾರಾಂಶ
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 7 ನಿರ್ದೇಶಕ ಸ್ಥಾನಗಳಿಗೆ ಅ.19 ಭಾನುವಾರದಂದು ಚುನಾವಣೆ ನಡೆಯಲಿದ್ದು, ಎಲ್ಲರ ಚಿತ್ತ ಈ ಚುನಾವಣೆಯತ್ತ ನೆಟ್ಟಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 7 ನಿರ್ದೇಶಕ ಸ್ಥಾನಗಳಿಗೆ ಅ.19 ಭಾನುವಾರದಂದು ಚುನಾವಣೆ ನಡೆಯಲಿದ್ದು, ಎಲ್ಲರ ಚಿತ್ತ ಈ ಚುನಾವಣೆಯತ್ತ ನೆಟ್ಟಿದೆ.ಡಿಸಿಸಿ ಬ್ಯಾಂಕಿನ ಆಡಳಿತದ ಮೇಲೆ ಜಾರಕಿಹೊಳಿ ಬಣವೋ ಇಲ್ಲವೇ ಕತ್ತಿ-ಸವದಿ ಬಣವೋ ಹಿಡಿತ ಸಾಧಿಸುತ್ತದೆಯೋ ಎಂಬ ಕುತೂಹಲ ಕೆರಳಿಸಿದೆ. ನಗರದ ಬಿ.ಕೆ.ಮಾಡೆಲ್ ಹೈಸ್ಕೂಲ್‌ನಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾಜಿ ಸಂಸದರಾದ ರಮೇಶ ಕತ್ತಿ, ಅಣ್ಣಸಾಹೇಬ ಜೊಲ್ಲೆ, ಶಾಸಕ ಲಕ್ಷ್ಮಣ ಸವದಿ ಸೇರಿ ಕಣದಲ್ಲಿರುವ 14 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ಚುನಾವಣೆ ನಡೆಯಲಿರುವ 7 ಕ್ಷೇತ್ರಗಳಲ್ಲಿ ಒಟ್ಟು 698 ಪಿಕೆಪಿಎಸ್‌ಗಳಿವೆ. ಇದರಲ್ಲಿ ಕೆಲವು ಪಿಕೆಪಿಎಸ್‌ಗಳು ಮತದಾನದ ಹಕ್ಕು ಕಳೆದುಕೊಂಡಿವೆ. ಹಾಗಾಗೀ, ಠರಾವು ಪಾಸ್ ಮಾಡಿಕೊಂಡು ಮತದಾನದ ಹಕ್ಕು ಪಡೆದ ಒಟ್ಟು 676 ಮತದಾರರು ಮಾತ್ರ ಮತದಾನ ಮಾಡಲಿದ್ದಾರೆ. ಮತದಾನ ಪಟ್ಟಿಯಲ್ಲಿ ಹೆಸರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಭೀಮಸೇನ ಬಾಗಿ ಎಂಬುವರು ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಹುಕ್ಕೇರಿ ಕ್ಷೇತ್ರದ ಚುನಾವಣೆಯನ್ನು ಚುನಾವಣಾಧಿಕಾರಿ ಶುಕ್ರವಾರ ಆದೇಶ ಹೊರಡಿಸಿ ಮುಂದೂಡಿದ್ದರು. ಇದರಿಂದಾಗಿ ಚುನಾವಣೆಗೆ ಸ್ಪರ್ಧಿಸಿದ್ದ ರಮೇಶ ಕತ್ತಿ ಸೇರಿ ಅವರ ಬೆಂಬಲಿಗರಲ್ಲಿ ತೀವ್ರ ಆತಂಕ ಎದುರಾಗಿತ್ತು. ಶನಿವಾರ ಬೆಂಗಳೂರು ಹೈಕೋರ್ಟ್ ಚುನಾವಣೆಗೆ ಹಸಿರು ನಿಶಾನೆ ತೋರಿಸಿದ್ದರಿಂದ ರಮೇಶ ಕತ್ತಿ ನಿರಾಳರಾಗಿದ್ದಾರೆ. ಈ ಮೂಲಕ ಡಿಸಿಸಿ ಬ್ಯಾಂಕ್ ಚುನಾವಣೆ ಒಂದು ಹಂತಕ್ಕೆ ಬಂದು ನಿಂತಿದೆ.ಒಟ್ಟು 16 ನಿರ್ದೇಶಕರ ಸ್ಥಾನಗಳ ಬಲ ಹೊಂದಿರುವ ಡಿಸಿಸಿ ಬ್ಯಾಂಕ್‌ಗೆ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 7 ಜನರು ಜಾರಕಿಹೊಳಿ ಬಣದೊಂದಿಗೆ ಗುರುತಿಸಿಕೊಂಡಿದ್ದರೆ, ಶಾಸಕರಾದ ಗಣೇಶ ಹುಕ್ಕೇರಿ ಮತ್ತು ರಾಜು ಕಾಗೆ ಅವರು ತಟಸ್ಥವಾಗಿ ಉಳಿದುಕೊಂಡಿದ್ದಾರೆ. ಈಗ 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಯಾರಿಗೆ ಹೆಚ್ಚು ಸ್ಥಾನಗಳು ಸಿಗಲಿವೆ ಎಂಬುವುದರ ಮೇಲೆ ಅಧಿಕಾರ ಹಸ್ತಾಂತರವಾಗಲಿದೆ.
ಡಿಸಿಸಿ ಬ್ಯಾಂಕಿನ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಜಾರಕಿಹೊಳಿ ಬಣ ಮತ್ತು ಕತ್ತಿ- ಸವದಿ ಬಣ ರಣತಂತ್ರ ರೂಪಿಸುತ್ತಿವೆ. ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಈಗಾಗಲೇ ಜಾರಕಿಹೊಳಿ ಸಹೋದರರು ಮೇಲುಗೈ ಸಾಧಿಸಿದ್ದಾರೆ. ಆದರೆ, ಅವರಿಗೆ ಇನ್ನೂ 2 ಸ್ಥಾನಗಳ ಅವಶ್ಯಕತೆ ಇದೆ. ಜಾರಕಿಹೊಳಿ ಬಣಕ್ಕೆ ಕತ್ತಿ- ಸವದಿ ಬಣ ತೀವ್ರವಾಗಿ ಪ್ರತಿರೋಧವೊಡ್ಡಿದೆ. ಮಾಜಿ ಸಂಸದ ರಮೇಶ ಕತ್ತಿ ಅವರು, ಹುಕ್ಕೇರಿ ಕ್ಷೇತ್ರದಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೂಡ ಕೇಳಿಬರುತ್ತಿದೆ. ಜಿಲ್ಲೆಯ ರಾಜಕೀಯ ಕೇಂದ್ರ ಬಿಂದುವಾಗಿರುವ ಡಿಸಿಸಿ ಬ್ಯಾಂಕ್ ಮೇಲೆ ಯಾರು ಹಿಡಿತ ಸಾಧಿಸುತ್ತಾರೆ ಎಂಬುದನ್ನು ಕಾಯ್ದುನೋಡಬೇಕು.;Resize=(128,128))
;Resize=(128,128))
;Resize=(128,128))
;Resize=(128,128))