ಜಿಲ್ಲೆಯ ಶಾಸಕರ ನಡುವೆ ಸಚಿವ ಸ್ಥಾನಕ್ಕೆ ಪೈಪೋಟಿ ನಡೆದಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಜಿಲ್ಲೆಯ ಯಾವ ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕಾತುರ ಮೂಡಿದೆ. ಜಿಲ್ಲೆಯ ಶಾಸಕರ ನಡುವೆ ಸಚಿವ ಸ್ಥಾನಕ್ಕೆ ಪೈಪೋಟಿ ನಡೆದಿದ್ದು, ಹೈಕಮಾಂಡ್ ಮೆಚ್ಚಿಸುವಲ್ಲಿ ಯಾರು ಸಫಲರಾಗುತ್ತಾರೆ? ಯಾರು ವಿಫಲರಾಗುತ್ತಾರೆ? ಎಂಬ ಕೌತುಕವಿದೆ.

ಈವರೆಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸಚಿವ ಸ್ಥಾನದ ಪಟ್ಟಿಯಲ್ಲಿ ನಾಗೇಂದ್ರ ಹೆಸರು ಇರುವುದು ಖಚಿತವಾಗಿತ್ತು. ಆದರೆ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗುತ್ತಿದ್ದಂತೆಯೇ ನಾಗೇಂದ್ರ ಹೆಸರಿಗೆ ಹಿನ್ನಡೆಯಾಯಿತು. ಡಿ.ಕೆ. ಶಿವಕುಮಾರ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ವಾಲ್ಮೀಕಿ ಹಗರಣದ ಪ್ರಕರಣ ಮತ್ತೆ ಜೀವ ಪಡೆದುಕೊಂಡಿತು. ಇದರಿಂದ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ನಾಗೇಂದ್ರ, ಅವರ ಬೆಂಬಲಿಗರಲ್ಲಿ ತೀವ್ರ ನಿರಾಸೆ ಮೂಡಿದೆ. ಆದರೆ, ಶಾಸಕ ನಾಗೇಂದ್ರ ಸಚಿವ ಸ್ಥಾನಕ್ಕಾಗಿ ನಡೆಸುತ್ತಿರುವ ಪ್ರಯತ್ನ ಮುಂದುವರಿದಿದೆ. ಹೈಕಮಾಂಡ್ ಒಪ್ಪಿದರೆ ನಾಗೇಂದ್ರ ಸಚಿವರಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಅನ್ನಪೂರ್ಣ ಪೈಪೋಟಿ:

ಒಂದೆಡೆ ಗ್ರಾಮೀಣ ಶಾಸಕ ನಾಗೇಂದ್ರ ಸಚಿವ ಸ್ಥಾನಕ್ಕೆ ಶತಾಯಗತಾಯ ಪ್ರಯತ್ನ ಮುಂದುವರಿಸಿದ್ದರೆ, ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಅವರನ್ನು ಸಚಿವರನ್ನಾಗಿಸಲು ಪತಿ, ಸಂಸದ ಈ.ತುಕಾರಾಂ ತೀವ್ರ ಪ್ರಯತ್ನದಲ್ಲಿದ್ದಾರೆ ಎಂದು ಗೊತ್ತಾಗಿದೆ. ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಸಚಿವ ಪದವಿ ತ್ಯಜಿಸಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಈ.ತುಕಾರಾಂ ಅವರು ಪತ್ನಿ ಅನ್ನಪೂರ್ಣ ಅವರನ್ನು ಸಂಡೂರು ಶಾಸಕಿ ಮಾಡುವಲ್ಲಿ ಯಶಸ್ವಿಯಾದರು. ಪಕ್ಷದ ಸೂಚನೆಯಂತೆ ಸಚಿವ ಸ್ಥಾನ ತ್ಯಜಿಸಿ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾನು ಪದವೀಧರ; ಪಕ್ಷದ ನಿಷ್ಠಾವಂತ ಕಾರ್ಯಕರ್ತನಿದ್ದೇನೆ. ಪತ್ನಿಗೆ ಸಚಿವ ಸ್ಥಾನ ನೀಡುವುದರಿಂದ ಎಸ್ಟಿ ಕೋಟಾ ಹಾಗೂ ಮಹಿಳೆಯರಿಗೆ ಆದ್ಯತೆ ನೀಡಿದಂತಾಗುತ್ತದೆ. ಜಿಲ್ಲೆಯಲ್ಲಿ ರಾಜಕೀಯ ಇಮೇಜ್ ಉಳಿಸಿಕೊಂಡಿದ್ದೇನೆ. ಅಷ್ಟಕ್ಕೂ ನನ್ನ ಮೇಲೆ ಯಾವುದೇ ಗುರುತರ ಆರೋಪಗಳಿಲ್ಲ. ಹೀಗಾಗಿ ನನ್ನ ಪತ್ನಿಗೆ ಸಚಿವ ಸ್ಥಾನದ ಅವಕಾಶ ನೀಡಬೇಕು ಎಂದು ತುಕಾರಾಂ ಹೈಕಮಾಂಡ್ ನಾಯಕರ ಮುಂದೆ ತಮ್ಮ ನಿವೇದನೆ ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ ಕಂಪ್ಲಿ ಶಾಸಕ ಗಣೇಶ್ ಕೂಡ ಸಚಿವ ಸ್ಥಾನದ ಪ್ರಯತ್ನದಲ್ಲಿದ್ದಾರೆ. ನಾಗೇಂದ್ರ, ಅನ್ನಪೂರ್ಣ, ಗಣೇಶ್ ನಡುವೆ ಯಾರಿಗೆ ಮಂತ್ರಿಯಾಗುವ ಯೋಗ ಕೂಡಿ ಬರಲಿದೆ ಎಂಬುದೇ ಸದ್ಯಕ್ಕಿರುವ ಕುತೂಹಲ. ಪಕ್ಷದ ಉನ್ನತ ಮೂಲಗಳ ಪ್ರಕಾರ ಶಾಸಕರ ನಡುವೆ ಪೈಪೋಟಿ ತೀವ್ರಗೊಂಡರೆ ಸದ್ಯಕ್ಕೆ ಬಳ್ಳಾರಿಯವರಿಗೆ ಸಚಿವ ಸ್ಥಾನ ನೀಡದೇ ಮುಂದೂಡಬಹುದು. ಬೇರೆ ಜಿಲ್ಲೆಯ ಮಂತ್ರಿಯನ್ನೇ ಈ ಜಿಲ್ಲೆಗೆ ಉಸ್ತುವಾರಿ ಮಾಡಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ನನ್ನ ಪತ್ನಿ ಅನ್ನಪೂರ್ಣಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿಕೊಂಡಿರುವೆ. ಪಕ್ಷಕ್ಕಾಗಿ ಇಷ್ಟು ವರ್ಷ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಯಾವುದೇ ಆಮಿಷಕ್ಕೆ ಬಲಿಯಾಗದೇ ಪಕ್ಷ ನಿಷ್ಠೆ ಕಾಯ್ದುಕೊಂಡಿದ್ದೇನೆ. ನನ್ನ ಸೇವೆ ಕುರಿತು ಹೈಕಮಾಂಡ್ ಗಮನಕ್ಕೆ ತಂದಿರುವೆ. ಉಳಿದಿದ್ದು ಪಕ್ಷದ ವರಿಷ್ಠರಿಗೆ ಬಿಟ್ಟದ್ದು ಎನ್ನುತ್ತಾರೆ ಸಂಸದ ಈ.ತುಕಾರಾಂ.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಅವಕಾಶ ನೀಡಿದರೆ ಉತ್ತಮ ಸೇವೆ ನೀಡುವೆ. ಅಂತಿಮ ತೀರ್ಮಾನ ಪಕ್ಷದ ವರಿಷ್ಠರಿಗೆ ಬಿಟ್ಟದ್ದು ಎನ್ನುತ್ತಾರೆ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ.