ಲೋಕಸಮರದ ಗೆಲುವು ಯಾರಿಗೆ?

| Published : Jun 04 2024, 12:30 AM IST

ಸಾರಾಂಶ

ಬಿಗಿ ಪೊಲೀಸ್ ಭದ್ರತೆಯಲ್ಲಿ 23 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಕಾರವಾರ: ಇನ್ನೇನು ಮತ ಎಣಿಕೆ ಆರಂಭವಾಗಿ ಇಂದು ಸಂಜೆಯೊಳಗೆ ಫಲಿತಾಂಶ ಬರಲಿದೆ. ಆದರೂ ಗೆಲುವು ಸೋಲಿನ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಲೇ ಇದೆ. ಮತ ಎಣಿಕೆ ಕೇಂದ್ರವಾದ ಕುಮಟಾದ ಡಾ. ಎ.ವಿ. ಬಾಳಿಗಾ ಮಹಾವಿದ್ಯಾಲಯದತ್ತ ಎಲ್ಲದ ದೃಷ್ಟಿ ನೆಟ್ಟಿದೆ.

ಬಿಗಿ ಪೊಲೀಸ್ ಭದ್ರತೆಯಲ್ಲಿ 23 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ, ಹಳಿಯಾಳ, ಕಿತ್ತೂರು ಹಾಗೂ ಖಾನಾಪುರ ಈ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ

ಕಿತ್ತೂರು ಹಾಗೂ ಖಾನಾಪುರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯ ಮೇಲೆ ಗಮನ ಹೆಚ್ಚು ಕೇಂದ್ರೀಕೃತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿನ ಎಲ್ಲ ಲೆಕ್ಕಾಚಾರಗಳನ್ನು ಈ ಎರಡು ವಿಧಾನಸಭೆ ಕ್ಷೇತ್ರಗಳು ಬುಡಮೇಲು ಮಾಡುತ್ತಿವೆ. ಬಿಜೆಪಿಗೆ ಪ್ರತಿಬಾರಿಯೂ ಸುನಾಮಿಯಂತೆ ಲೀಡ್ ಸಿಗುತ್ತಿದ್ದುದು ಈ ಎರಡು ಕ್ಷೇತ್ರಗಳಲ್ಲಿ. ಈ ಬಾರಿ ಕಾಂಗ್ರೆಸ್ ನ ಅಂಜಲಿ ನಿಂಬಾಳ್ಕರ್ ಖಾನಾಪುರ ವಿಧಾನಸಭೆ ಕ್ಷೇತ್ರದವರಾಗಿದ್ದು, ಅದರಲ್ಲೂ ಬಹುಸಂಖ್ಯಾಕ ಮರಾಠ ಸಮಾಜವನ್ನು ಪ್ರತಿನಿಧಿಸುತ್ತಿರುವುದರಿಂದ ಅಲ್ಲಿನ ಮತಗಳು ಬಿಜೆಪಿಗೆ ಎಂದಿನ ಚುನಾವಣೆಯಂತೆ ಬರಲಿವೆಯೇ ಅಥವಾ ಕಾಂಗ್ರೆಸ್‌ನತ್ತ ವಾಲಲಿದೆಯೇ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಲಿದೆ.

ಅನಂತಕುಮಾರ ಹೆಗಡೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ಬರದೆ ಇರುವುದರ ಪರಿಣಾಮ ಏನು? ಅವರ ಬೆಂಬಲಿಗರು ಕಾಗೇರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪೋಸ್ಟ್ ಹಾಕಿರುವುದು, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ಪರವಾಗಿ ನಿಲ್ಲದೆ ಇರುವುದು, ಮೇಲಾಗಿ ತಮ್ಮ ಮಗ ಹಾಗೂ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕಳುಹಿಸಿರುವುದು, ಇವೆಲ್ಲವುಗಳಿಗಿಂತ ಮುಖ್ಯವಾಗಿ ಕಾಂಗ್ರೆಸ್ ಗ್ಯಾರಂಟಿಯ ಪರಿಣಾಮಗಳೇನಾಗಲಿದೆ ಎಂದು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರವಾಗಿ ಶಾಸಕರು ಹೊಂದಾಣಿಕೆಯಿಂದ ಕೆಲಸ ಮಾಡದೆ ಇರುವುದು, ಸ್ವತಃ ನರೇಂದ್ರ ಮೋದಿ ಶಿರಸಿಗೆ ಬಂದು ಪ್ರಚಾರ ನಡೆಸಿ ಅಲೆ ಎಬ್ಬಿಸಿರುವುದು, ತಳ ಮಟ್ಟದಲ್ಲಿ ಕಾಂಗ್ರೆಸ್ ನಾಯಕರಿಂದ ನಿರೀಕ್ಷಿತ ಕೆಲಸ ಆಗದೆ ಇರುವುದು, ಜತೆಗೆ ಉತ್ತರ ಕನ್ನಡ ಜಿಲ್ಲೆಯ ಹೊರಗಿನವರಾದ ಅಂಜಲಿ ನಿಂಬಾಳ್ಕರ್ ಜಿಲ್ಲೆಯ ಜತೆಗೆ ಯಾವುದೆ ನಂಟು ಇಟ್ಟುಕೊಳ್ಳದೆ ಈಗ ಹಠಾತ್ತಾಗಿ ಚುನಾವಣೆಗೆ ನಿಂತಿರುವುದು, ಇವೆಲ್ಲವುಗಳ ಪರಿಣಾಮ ಏನಾಗಲಿದೆ ಎಂದು ಕಾಂಗ್ರೆಸ್ ಮುಖಂಡರು ಚರ್ಚೆಯಲ್ಲಿ ನಿರತರಾಗಿದ್ದಾರೆ.

ಮೇಲ್ನೋಟಕ್ಕೆ ಉಭಯ ಪಕ್ಷಗಳ ಅಭ್ಯರ್ಥಿಗಳೂ ಗೆಲುವಿನ ವಿಶ್ವಾಸದಲ್ಲಿದ್ದರೂ ಆಂತರಿಕವಾಗಿ ತಳಮಳಗೊಂಡಿರುವುದು ಸುಳ್ಳೇನಲ್ಲ. ಫಲಿತಾಂಶ ಉಭಯ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಎದೆಬಡಿತವನ್ನು ಹೆಚ್ಚಿಸಿದೆ. ಇಂದು ಇದಕ್ಕೆಲ್ಲ ಸ್ಪಷ್ಟ ಉತ್ತರ ಸಿಗಲಿದೆ.