ಪ್ರಾಧಿಕಾರದಲ್ಲಿ ಕೇವಲ ಫಲಾನುಭವಿಗಳಿಂದ ಸ್ವೀಕಾರ ಮಾಡಿರುವ ಹಣ ಅಷ್ಟೇ ಅಲ್ಲದೆ ಇತರೆ ಮೂಲದಿಂದ ಬಂದಿರುವ ಹಣದಲ್ಲಿಯೂ ಅಕ್ರಮವಾಗಿದೆ
ಸೋಮರಡ್ಡಿ ಅಳವಂಡಿ ಕೊಪ್ಪಳ
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಕೋಟಿ ಕೋಟಿ ಅಕ್ರಮದಲ್ಲಿ ಕೇವಲ ನಾಪತ್ತೆಯಾಗಿರುವ ಗುತ್ತಿಗೆ ನೌಕರ ರವೀಂದ್ರ ಕುಮಾರ್ ಖಾತೆಗೆ ಅಷ್ಟೇ ಅಲ್ಲ, ಬೇರೆ ಬೇರೆ 30ಕ್ಕೂ ಹೆಚ್ಚು ಖಾತೆಗಳಿಗೂ ಹಣ ವರ್ಗಾವಣೆಯಾಗಿದ್ದು, ಇದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಇಡೀ ಅಕ್ರಮದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪಾಲು ಹೋಗಿದೆ ಮತ್ತು ಅವರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಸಮಗ್ರ, ಪಾರದರ್ಶಕ ತನಿಖೆ ಆಗಬೇಕಿದೆ.ಪ್ರಾಧಿಕಾರದಲ್ಲಿ ಕೇವಲ ಫಲಾನುಭವಿಗಳಿಂದ ಸ್ವೀಕಾರ ಮಾಡಿರುವ ಹಣ ಅಷ್ಟೇ ಅಲ್ಲದೆ ಇತರೆ ಮೂಲದಿಂದ ಬಂದಿರುವ ಹಣದಲ್ಲಿಯೂ ಅಕ್ರಮವಾಗಿದೆ. ಪ್ರಾಧಿಕಾರದ ಅಧಿಕೃತ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿರುವ ಹಣವನ್ನೂ ಸಹ ಅಕ್ರಮವಾಗಿ ತೆರೆದಿರುವ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚನೆ ಮಾಡುವ ಯತ್ನ ನಡೆದಿದೆ.
ಯಾರ್ಯಾರಿಗೆ ಪಾಲು: ಈಗ ಮೇಲ್ನೋಟಕ್ಕೆ ₹8.42 ಕೋಟಿ ವಂಚನೆಯಾಗಿದೆ ಎಂದು ಗೊತ್ತಾಗಿದೆ, ಆದರೆ ಇನ್ನೂ ಬೇರೆ ಬೇರೆ ಅಕ್ರಮಗಳೂ ನಡೆದಿದ್ದು, ಅವ್ಯವಹಾರದ ಮೊತ್ತ ಇನ್ನೂ ಹೆಚ್ಚಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಅಕ್ರಮದ ಹಣ ವರ್ಗಾವಣೆಯಾಗಿರುವ ಖಾತೆ ಬೆನ್ನು ಹತ್ತಿ ಅದರ ಮಾಲೀಕರು ಯಾರು ಎನ್ನುವುದು ಗೊತ್ತಾದರೆ ಪ್ರಕರಣಕ್ಕೆ ಹೊಸ ತಿರುವು ಸಿಗಲಿದೆ. ಯಾರ್ಯಾರಿಗೆ ಎಷ್ಟೆಷ್ಟು ಪಾಲು ಹೋಗಿದೆ ಎನ್ನುವುದು ಗೊತ್ತಾಗುತ್ತದೆ.ಪ್ರಾಧಿಕಾರದ ಹೆಸರಿನಲ್ಲಿ ಅಕ್ರಮ ಖಾತೆ ತೆರೆದು ಅದರ ಮೂಲಕ ವಹಿವಾಟು ನಡೆಸುವುದು ಅಲ್ಲದೆ ಅಲ್ಲಿಂದ ಲಕ್ಷಾಂತರ ರು. ಸೆಳೆದು (ವಿಥ್‌ಡ್ರಾ) ಬಳಕೆ ಮಾಡಲಾಗಿದೆ. ಏಕ ಕಾಲಕ್ಕೆ ಕೋಟ್ಯಂತರ ಹಣ ಬ್ಯಾಂಕಿನಿಂದ ಸೆಳೆಯಲಾಗಿದೆ. ಸರ್ಕಾರದ ಅಧೀನ ಸಂಸ್ಥೆಯಿದ ತೆರೆದಿರುವ ಖಾತೆಯಿಂದ ಲಕ್ಷಾಂತರ, ಕೆಲವೊಮ್ಮೆ ಕೋಟ್ಯಂತರ ರು. ಡ್ರಾ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಬ್ಯಾಂಕ್ ಖಾತೆಯಿಂದ ಹಣ ಸೆಳೆಯಲು ಹಲವು ನಿಯಮಗಳಿವೆ. ಷರತ್ತುಗಳಿವೆ. ಆದರೆ ಇಲ್ಲಿ ಅದ್ಯಾವ ನಿಯಮವನ್ನೂ ಪಾಲಿಸದಿರುವುದು, ಸಿಬ್ಬಂದಿಗಳು ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳೂ ಶಾಮೀಲಾಗಿರುವ ಅನುಮಾನ ಹುಟ್ಟು ಹಾಕಿದೆ.
ಈ ಅವ್ಯವಹಾರ, ಅಕ್ರಮದಲ್ಲಿ ಗುತ್ತಿಗೆ ನೌಕರ ಮತ್ತು ಆಯುಕ್ತರಷ್ಟೇ ಅಲ್ಲ, ಒಂದು ತಂಡ (ಗ್ಯಾಂಗ್) ವ್ಯವಸ್ಥಿತವಾಗಿ ಕಾರ್ಯಾಚರಿಸಿರುವ ಗುಮಾನಿ ಇದೆ. ಪ್ರಾಧಿಕಾರದ ಕಚೇರಿಯಲ್ಲಿ ಸದಾ ಸುತ್ತಾಡುತ್ತಿದ್ದ ಅನೇಕರ ಹೆಸರು ಸಹ ಈ ಅವ್ಯವಹಾರದಲ್ಲಿ ಥಳಕು ಹಾಕಿಕೊಂಡಿದ್ದು, ಹಲವರ ಹೆಸರು ಕೇಳಿ ಬರುತ್ತಿದೆ. ಹೀಗಾಗಿ ಈ ಹಣ ವರ್ಗಾವಣೆಯ ತನಿಖೆ ತುರ್ತಾಗಿ ಆಗಬೇಕಾಗಿದೆ. ಕೇವಲ ವ್ಯಕ್ತಿಗಳ ಖಾತೆಗೆ ಅಷ್ಟೇ ಅಲ್ಲ, ಕೆಲವೊಂದು ಸಂಸ್ಥೆ ಮತ್ತು ಮಠಗಳ ಖಾತೆಗೆ ಹಣ ವರ್ಗಾವಣೆ ಆಗಿದೆ ಎನ್ನುವ ಆರೋಪವೂ ಇದೆ. ಅಕ್ರಮದಲ್ಲಿ ಭಾಗಿಯಾಗಿರುವ ಗುತ್ತಿಗೆ ನೌಕರರ ಸುತ್ತಲೇ ಎಲ್ಲವೂ ಇದೆ ಎಂದು ಹೇಳಲಾಗುತ್ತದೆ.ಅಕ್ರಮದ ಕುರಿತು ಸಮಗ್ರ ತನಿಖೆ ನಡೆಯಬೇಕು. ಇದರಲ್ಲಿ ಯಾರ್ಯಾರ ಪಾಲಿದೆ ಎನ್ನುವುದು ಗೊತ್ತಾಗಬೇಕು. ಈ ಕುರಿತು ಸದನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ತಿಳಿಸಿದ್ದಾರೆ.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ನಡೆದಿರುವ ಅಕ್ರಮದಲ್ಲಿ ತೆರೆಯ ಹಿಂದೆ ಅನೇಕರು ಇದ್ದಾರೆ. ಅದೆಲ್ಲವೂ ತನಿಖೆಯಾಗಲಿ ಎಂದು ಬಿಜೆಪಿ ನಾಯಕ ಡಾ.ಬಸವರಾಜ ಕೆ. ತಿಳಿಸಿದ್ದಾರೆ