ಗದಗ ಜಿಲ್ಲಾಡಳಿತ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿ ಮುಂದುವರಿಸುವುದಕ್ಕಾಗಿಯೇ ನ್ಯಾಯಾಲಯದಲ್ಲಿ ಕೆವಿಯಟ್‌ಗೆ ಅರ್ಜಿ ಹಾಕಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಶಿವಕುಮಾರ ಕುಷ್ಟಗಿ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವಾರು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಆದರೆ ಜಿಲ್ಲಾಡಳಿತ ಮಾತ್ರ ಕೇವಲ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿ ಮುಂದುವರಿಸುವುದಕ್ಕಾಗಿಯೇ ನ್ಯಾಯಾಲಯದಲ್ಲಿ ಕೆವಿಯಟ್ ಹಾಕಿಕೊಳ್ಳುವ ಮೂಲಕ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.ರಾಜ್ಯ ಸರ್ಕಾರದ ಬಂಡವಾಳ ವೆಚ್ಚ ಯೋಜನೆಯಡಿ (ಲೆಕ್ಕಶೀರ್ಷಿಕೆ: 4202/03/102/0/03/386) ಫುಟ್‌ಬಾಲ್ ಟರ್ಫ್ ನಿರ್ಮಾಣಕ್ಕೆ ₹386 ಲಕ್ಷ ಹಾಗೂ ಫ್ಲಡ್ ಲೈಟ್ ಅಳವಡಿಕೆಗೆ ₹114 ಲಕ್ಷ ಅನುದಾನ ನಿಗದಿಯಾಗಿದೆ. 2025-26ನೇ ಸಾಲಿನ ಕ್ರೀಡಾ ಇಲಾಖೆಯ ಕ್ರಿಯಾ ಯೋಜನೆಯಡಿ ಶೇ. 25ರಷ್ಟು ಅನುದಾನ ಹಂಚಿಕೆಯೊಂದಿಗೆ ಈ ಕೆಲಸ ಪ್ರಾರಂಭವಾಗಿದೆ. ಆದರೆ, ಇನ್ನೂ ಅಧಿಕೃತವಾಗಿ ಯಾವುದೇ ಭೂಮಿಪೂಜೆ ನೆರವೇರದಿದ್ದರೂ ಕಾಮಗಾರಿಗೆ ಯಾರೂ ತಡೆಯಾಜ್ಞೆ ತರಬಾರದು ಎಂದು ಅಧಿಕಾರಿಗಳೇ ಕೇವಿಯೆಟ್ ದಾಖಲಿಸಿರುವುದು ಹತ್ತಾರು ಪ್ರಶ್ನೆ ಹುಟ್ಟುಹಾಕಿದೆ.
ಮೇಲಧಿಕಾರಿಗಳ ಅನುಮತಿ ಇದೆಯೇ?: ಸಾಮಾನ್ಯವಾಗಿ ಸಾರ್ವಜನಿಕ ಹಿತದೃಷ್ಟಿಯ ಕಾಮಗಾರಿಗಳಿಗೆ ಜನಪ್ರತಿನಿಧಿಗಳು ಮುಂಚೂಣಿಯಲ್ಲಿರುತ್ತಾರೆ. ಆದರೆ ಕೋಟ್ಯಂತರ ರುಪಾಯಿ ಮೊತ್ತದ ಈ ಯೋಜನೆಯ ಗೊಂದಲಗಳ ಬಗ್ಗೆ ಸ್ಥಳೀಯ ಶಾಸಕರು ನಿಗೂಢ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಇತ್ತ ಜಿಲ್ಲೆಯಲ್ಲಿ ನೂರಾರು ಸರ್ಕಾರಿ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದರೂ ತಲೆಕೆಡಿಸಿಕೊಳ್ಳದ ಜಿಲ್ಲಾಧಿಕಾರಿ, ಈ ನಿರ್ದಿಷ್ಟ ಕಾಮಗಾರಿಗೆ ಮಾತ್ರ ಇಷ್ಟೊಂದು ಆತುರ ತೋರುತ್ತಿರುವುದೇಕೆ? ಕೇವಿಯೆಟ್ ಸಲ್ಲಿಸುವ ಮುನ್ನ ಮೇಲಾಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.ತರಾತುರಿಯಲ್ಲಿ ಕೆವಿಯಟ್: ಸಾಮಾಜಿಕ ಹೋರಾಟಗಾರ ರಾಜು ಖಾನಪ್ಪನವರ ಈ ಕಾಮಗಾರಿ ಅತ್ಯಂತ ಅವೈಜ್ಞಾನಿಕವಾಗಿದೆ ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಸೆ. 9ರಂದು ಜಿಲ್ಲಾ ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ, ಸೆ. 7ರ ದಿನಾಂಕ ನಮೂದಿಸಿ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕೇವಿಯೆಟ್ ಅರ್ಜಿ ಸಲ್ಲಿಕೆಯಾಗಿದೆ. ಸಮಾಜ ಸೇವಕ ಅರವಿಂದ ಹುಲ್ಲೂರ ಅವರನ್ನು ಪ್ರತಿವಾದಿಯನ್ನಾಗಿ ಮಾಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣಪ್ಪ ಗೋಗೇರಿ ಈ ಕೇವಿಯೆಟ್ ದಾಖಲಿಸಿದ್ದು, ಸರ್ಕಾರಿ ವಕೀಲರ ಹೆಸರು ಉಲ್ಲೇಖವಿದ್ದರೂ ಅರ್ಜಿಯಲ್ಲಿ ಯಾರೊಬ್ಬರ ಸಹಿಯೂ ಇಲ್ಲದಿರುವುದು ಕಾನೂನು ವಲಯದಲ್ಲೂ ಹುಬ್ಬೇರಿಸುವಂತೆ ಮಾಡಿದೆ.
ಸರ್ಕಾರಿ ಹಣದಲ್ಲಿ ನಡೆಯುವ ಕಾಮಗಾರಿಯಲ್ಲಿ ಪಾರದರ್ಶಕತೆ ಇರಬೇಕು. ಯಾವುದೇ ಭೂಮಿಪೂಜೆ ಮಾಡದೆ, ಸಾರ್ವಜನಿಕರ ಗಮನಕ್ಕೆ ತರದೆ ಆತುರಾತುರವಾಗಿ ಕೆಲಸ ಆರಂಭಿಸಿರುವುದರಲ್ಲಿ ಭಾರೀ ಗೋಲ್ ಮಾಲ್ ಅಡಗಿದೆ. ಅದಕ್ಕಾಗಿಯೇ ಅಧಿಕಾರಿಗಳು ಕೇವಿಯೆಟ್ ಮೊರೆ ಹೋಗಿದ್ದಾರೆ. ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸಾಮಾಜಿಕ ಹೋರಾಟಗಾರ ರಾಜು ಖಾನಪ್ಪನವರ ಹೇಳಿದರು.ಯಾವುದೇ ಪೂರ್ವ ಮಾಹಿತಿ ಇಲ್ಲದೆ ಏಕಾಏಕಿ ನನ್ನ ಹೆಸರಿಗೆ ಕೇವಿಯೆಟ್ ಹಾಕಿರುವುದು ಆಘಾತ ತಂದಿದೆ. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗದಂತೆ ಪ್ರಶ್ನಿಸುವುದು ತಪ್ಪೇ? ಸಹಿ ಇಲ್ಲದ ಕೇವಿಯೆಟ್ ಪ್ರತಿ ರವಾನಿಸಿರುವುದರ ಹಿಂದಿನ ಮರ್ಮವೇನು? ಎಂಬುದು ತನಿಖೆಯಾಗಬೇಕು. ಈ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಮಾಜ ಸೇವಕ ಅರವಿಂದ ಹುಲ್ಲೂರ ಹೇಳಿದರು.
ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಗೆ ಯಾವುದೇ ರೀತಿಯ ಅಡ್ಡಿ ಆತಂಕ ಎದುರಾಗಬಾರದು ಹಾಗೂ ಕಾಮಗಾರಿ ಸುಗಮವಾಗಿ ಸಾಗಬೇಕು ಎಂಬ ಉದ್ದೇಶದಿಂದ ಕೇವಿಯೆಟ್ ಸಲ್ಲಿಸಲಾಗಿದೆ. ಕೇವಿಯೆಟ್ ಹಾಕುವ ಪೂರ್ವದಲ್ಲಿ ನಾನು ಗದಗ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ, ಅವರ ಸೂಚನೆಯ ಮೇರೆಗೆ ಕೇವಿಯೆಟ್ ಹಾಕಲಾಗಿದೆ ಎಂದು ಗದಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಹೇಳಿದರು.