ಕನ್ನಡಪ್ರಭ ವಾರ್ತೆ ಕಾಗವಾಡ ಕಾಗವಾಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ನೀಡಬೇಕಾದ ಔಷಧಗಳನ್ನು ನೀಡದೆ, ಹೊರಗಿನಿಂದ ಖರೀಧಿಸುವಂತೆ ಚೀಟಿ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಕಾಗವಾಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ನೀಡಬೇಕಾದ ಔಷಧಗಳನ್ನು ನೀಡದೆ, ಹೊರಗಿನಿಂದ ಖರೀಧಿಸುವಂತೆ ಚೀಟಿ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.ತಾಲೂಕು ಆಡಳಿತದಿಂದ ಶೇಡಬಾಳ ಪಟ್ಟಣದ ಬಸವಣ್ಣ ಸಭಾಭವನದಲ್ಲಿ ಆಯೋಜಿಸಿದ್ದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶ್ರೀನಿವಾಸ ಕಾಂಬಳೆ, ಕಾಗವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳನ್ನು ನೀಡುವ ಬದಲು ಹೊರಗಿನಿಂದ ತರುವಂತೆ ಚೀಟಿ ನೀಡಲಾಗುತ್ತಿದೆ. ಹೊರಗಿನಿಂದಲೇ ಔಷಧಿ ಖರೀದಿಸುವುದಾದರೆ ಸರ್ಕಾರಿ ಆಸ್ಪತ್ರೆ ಏಕೆ ಎಂದು ಪ್ರಶ್ನಿಸಿದರು. ಹಾವು ಕಡಿತದಂತಹ ತುರ್ತು ಸಂದರ್ಭಗಳಲ್ಲಿಯೂ ಔಷಧಿ ಲಭ್ಯವಿಲ್ಲ ಎಂದು ಹೇಳಲಾಗುತ್ತಿದ್ದು, ಬಡವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಭಾಗ್ಯಲಕ್ಷ್ಮೀ ವೈನ್ಸ್‌ನಲ್ಲಿ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬೆಳಿಗ್ಗೆ 7 ಗಂಟೆಗೇ ಅಂಗಡಿ ತೆರೆಯಲಾಗುತ್ತಿದೆ ಎಂದು ಸಂಜು ಮುಕುಂದ ಅಬಕಾರಿ ಅಧಿಕಾರಿಗಳ ಗಮನಕ್ಕೆ ತಂದರು. ಇದನ್ನು ಪ್ರಶ್ನಿಸುವವರ ಮೇಲೆ ಕೆಲವರ ಮೂಲಕ ಹಲ್ಲೆ ಮಾಡಿಸಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದರು. ಈ ಕುರಿತು ಪರಿಶೀಲನೆ ನಡೆಸುವಂತೆ ತಹಶೀಲ್ದಾರ ರವೀಂದ್ರ ಹಾದಿಮನಿ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ನಿಮ್ಮ ಮನೆ ಬಾಗಿಲಿಗೆ ನಮ್ಮ ಸರ್ಕಾರ ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಿ, ಶೀಘ್ರ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಜಾಸೇವೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಹಸೀಲ್ದಾರ್ ರವೀಂದ್ರ ಹಾದಿಮನಿ ಹೇಳಿದರು.ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಉತ್ಕರ್ಷ್ ಪಾಟೀಲ, ಇಒ ವೀರಣ್ಣ ವಾಲಿ, ಉಪ ತಹಸೀಲ್ದಾರ್ ರಶ್ಮಿ ಜಕಾತಿ, ಮುಖ್ಯಾಧಿಕಾರಿ ಕೆ.ಕೆ.ಗಾವಡೆ, ಸಿಡಿಪಿಒ ಸಂಜುಕುಮಾರ ಸದಲಗೆ, ಬಿಸಿಎಂ ಅಧಿಕಾರಿ ವೆಂಕಟೇಶ ಕುಲಕರ್ಣಿ, ರಾಕೇಶ ಅರ್ಜುನವಾಡ, ರವೀಂದ್ರ ಮುರಗಾಲಿ, ಪಿಎಸ್‌ಐ ರಾಘವೇಂದ್ರ ಖೋತ, ಹೆಸ್ಕಾಂ ಎಇಇ ಮಾಕಣಿ, ಕೃಷಿ ಅಧಿಕಾರಿ ನಿಂಗನಗೌಡ ಬಿರಾದರ, ರೇಖಾ ಹಳ್ಳೂರ ಸೇರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.