ರಾಜ್ಯ ಸರ್ಕಾರ ಶಾಸಕರಿಗೆ ಬೋರ್ಡ್ ಅಧ್ಯಕ್ಷ ಸ್ಥಾನ ನೀಡಿ ಕ್ಯಾಬಿನೆಟ್ ದರ್ಜೆ ಕೊಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ತೆರೆಯುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರ ಶಾಸಕರಿಗೆ ಬೋರ್ಡ್ ಅಧ್ಯಕ್ಷ ಸ್ಥಾನ ನೀಡಿ ಕ್ಯಾಬಿನೆಟ್ ದರ್ಜೆ ಕೊಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ತೆರೆಯುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ಸಂಕಷ್ಟದ ಪರಿಸ್ಥಿತಿಯಿದೆ. ರಾಜ್ಯ ಸರ್ಕಾರವೇ ಅರ್ಥಿಕ ಸಂಕಷ್ಟದಲ್ಲಿದೆ. ಬರಗಾಲದ ಸಂದರ್ಭದಲ್ಲಿ ಬೋರ್ಡ್ ನೇಮಕ ಮಾಡುವ ಅನಿವಾರ್ಯತೆ ಸಿಎಂಗೆ ಏನಿತ್ತು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸಿಎಂ ಮನಸೋಇಚ್ಚೇ ಘೋಷಣೆ ಮಾಡೊದ್ದನ್ನು ಬಿಜೆಪಿ ಖಂಡಿಸುತ್ತೆ. ಕಳೆದ ಮೂರು ವರ್ಷದಿಂದ ರಸ್ತೆಯ ಗುಂಡಿ ಮುಚ್ಚಿಲ್ಲ. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಹಣವನ್ನು ಕೊಡ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಕೇವಲ ಜಾಹೀರಾತು ಮೂಲಕ ನುಡಿದಂತೆ ನಡೆದಿದ್ದೇವೆ ಅಂತಾರೇ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರನ್ನ ನೇಮಕ ಮಾಡಿದ್ದಾರೆ. ಜೊತೆಗೆ ಭಾರತ್ ಜೋಡೋ ಸಂಯೋಜಕರನ್ನ ನೇಮಕ ಮಾಡಿದ್ದಾರೆ. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ರೈತರಿಗೆ ಪರಿಹಾರ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ ಎಂದು ಹರಿಹಾಯ್ದರು.

ಆಶಾ ಕಾರ್ಯಕರ್ತೆಯರು ನಿರಂತರ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಸಂಬಳ ಹೆಚ್ಚಿಸುವ ಯೋಗ್ಯತೆ ಇಲ್ಲ. ಸಿಎಂ ಆಶಾ ಕಾರ್ಯಕರ್ತೆರಿಗೆ ಸಹೋದರ ನಾನು ಅಂತಾರೆ, ಆಶಾ ಕಾರ್ಯಕರ್ತೆಯರಿಗೆ 350 ಕೋಟಿ ವರ್ಷಕ್ಕೆ ಇಡಲು ಸರ್ಕಾರಕ್ಕೆ ಕಷ್ಟನಾ..? ಮಂಗಳೂರಿಗೆ 32 ಸಾವಿರ ಕೋಟಿ ಘೋಷಣೆ ಮಾಡ್ತೀರಿ. 16 ಸಾವಿರ ಕೋಟಿ ರಸ್ತೆ ಅಭಿವೃದ್ಧಿಗೆ ಕೊಡ್ತಿವಿ ಅಂತಾ ಘೋಷಣೆ ಮಾಡುತ್ತೀರಿ. ಆಶಾ ಕಾರ್ಯಕರ್ತೆಯರಿಗೆ 350 ಕೋಟಿ ಕೋಡೋಕೆ ನಿಮಗೆ ಆಗ್ತಿಲ್ಲ ಎಂದು ಕುಟುಕಿದರು.

ಸಿಎಂ ಮನೆ ಶೃಂಗಾರಕ್ಕೆ 100 ಕೋಟಿ ಖರ್ಚು ಮಾಡಿದ್ದಾರೆ. ಪ್ರಜಾಸೇವಕ ಅನ್ನೋ ನೀವು ಬರಗಾಲದ ಸಮಯದಲ್ಲಿ ಮನೆ ಆಲಂಕಾರ ಬೇಕಿತ್ತಾ? ಬಿಜೆಪಿಯವರು ಮನೆ ಬಾಗಿಲಿಗೆ ಬಂದ್ರೇ ಬಹಿಷ್ಕಾರ ಹಾಕಿ ಅಂತಾರೆ. ಇತ್ತೀಚೆಗೆ ಪರಿಷತ್ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಕಪಾಳ ಮೋಕ್ಷ ಮಾಡಿದ್ದಾರೆ. ಅದೇ ರೀತಿ ಹಿರಿಯೂರು ಉಪಚುನಾವಣೆಯಲ್ಲಿ ಜನರು ಮಾತಾಡುತ್ತಾರೆ. ಕಾಡುಗೊಲ್ಲ ಜನರ ಮೀಸಲಾತಿ ವಿಚಾರಕ್ಕೆ ಈಗ ರಾಜಕಾರಣ ಮಾಡುತ್ತಿದ್ದಾರೆ. ಹಿರಿಯೂರು ನೀರಾವರಿಗೆ ಅನುದಾನ ಕೊಟ್ಟಿದ್ದು, ಯಡಿಯೂರಪ್ಪ ಸರ್ಕಾರ. ನೀವು ನೀರಾವರಿಗೆ ಎಷ್ಟು ಅನುದಾನ ಕೊಟ್ಟಿದ್ದೀರಿ. ಬನ್ನಿ ಅಧಿವೇಶನದಲ್ಲಿ ಚರ್ಚೆ ಮಾಡೋಣ. ಜನ ಕಳೆದ ಚುನಾವಣೆಯಲ್ಲಿ ಮೋಸ ಹೋಗಿರಬಹುದು. ಪದೇ ಪದೇ ಆ ರೀತಿ ಆಗಲ್ಲ ಎಂದು ತಿರುಗೇಟು ನೀಡಿದರು.

ರವಿ ಹಂಜ್ ಸಮಾಜದ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಅಣ್ಣ ಬಸವಣ್ಣರ ಬಗ್ಗೆ ಅವಹೇಳನ ಮಾಡಿದ್ದಾರೆ. ಕೇವಲ ವೀರಶೈವ ಸಮಾಜ ಮಾತ್ರ ಅಲ್ಲ. ನಾಡಿನ ಜನತೆಗೆ ಅಪಚಾರ ಮಾಡಿದ್ದಾರೆ. ರವಿ ಹಂಜ್ ಅವರನ್ನು ಕೇವಲ ಬಂಧಿಸಿ, ಬಿಡೋ ಕೆಲಸ ಮಾಡಬಾರದು‌. ಮುಂದೆ ನಾಡಿನ ಯಾವ ದಾರ್ಶನಿಕರಿಗೂ ಅವಮಾನ ಮಾಡುವ ಕೆಲಸ ಆಗಬಾರದು. ಆ ನಿಟ್ಟಿನಲ್ಲಿ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾನು ಗೃಹ ಸಚಿವರಿಗೆ ಒತ್ತಾಯ ಮಾಡುತ್ತೇನೆ ಎಂದರು.

ಬೆಲೆ ಏರಿಕೆ ಬಗ್ಗೆ ಸದನದಲ್ಲಿ ಹೋರಾಟ ಮಾಡುತ್ತೇವೆ. ಗ್ಯಾರಂಟಿ ಹೆಸರಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಹಿರಿಯೂರು ಉಪ ಚುನಾವಣೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಎರಡು ಪಕ್ಷಗಳು ಸಹಮತದ ಅಭ್ಯರ್ಥಿಯನ್ನು ಹಾಕ್ತೇವೆ. ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಿಕ್ಷಣ ಸಚಿವರು ಕ್ಷಮೆ ಕೇಳಬೇಕು: ಇದ್ದದ್ದು ಇದ್ದಂಗೆ ಹೇಳಿದ್ರೇ ಎದ್ದು ಬಂದು ಎದೆಗೆ ಒದ್ದರು ಎಂಬಂತೆ ಸಚಿವ ಮಧು ಬಂಗಾರಪ್ಪ ವರ್ತನೆ ಮಾಡುತ್ತಿದ್ದಾರೆ ಎಂದು ಕೊಪ್ಪಳದಲ್ಲಿ ಸಚಿವ ಮಧು ಬಂಗಾರಪ್ಪ ದರ್ಪ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದರು. ಅವರ ಉದ್ದಟತನದ ಹೇಳಿಕೆಯನ್ನು ರಾಜ್ಯಾದ್ಯಂತ ಖಂಡನೆ ಮಾಡುತ್ತಿದ್ದಾರೆ. ಅವಿವೇಕತನದ ನಡವಳಿಕೆಯನ್ನ ಯಾರು ಕೂಡ ಕ್ಷಮಿಸೋಕೆ ಸಾಧ್ಯವಿಲ್ಲ. ಶಿಕ್ಷಣ ಸಚಿವರಿಗೆ ಗೌರವ ಇದ್ರೆ ಕ್ಷಮೆಯನ್ನ ಕೇಳಬೇಕು ಎಂದು ಒತ್ತಾಯಿಸಿದರು.