ಪಶ್ಚಿಮ ಬಂಗಾಳದಲ್ಲಿ 90 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾವಾಸಿಗಳಿದ್ದರು: ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿಕೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎಸ್‌ಐಆರ್‌ ಬಗ್ಗೆ ನಕಲು ಮತದಾರರು, ಭಯೋತ್ಪಾದಕರು, ಮೂರು-ನಾಲ್ಕುಕಡೆ ಮತದಾನದ ಹಕ್ಕು ಪಡೆದವರಿಗೆ ಭಯ ಆಗಬೇಕು. ಆದರೆ, ಈ ಕಾಂಗ್ರೆಸ್‌ನವರಿಗೆ ಏಕೆ ಕಳವಳ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ 90 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾವಾಸಿಗಳಿದ್ದರು. ಎಲ್ಲಿ ಎಸ್‌ಐಆರ್‌ ಮೂಲಕ ಬಾಂಗ್ಲಾವಾಸಿಗಳನ್ನು ಹೊರ ಹಾಕಿದ್ದನ್ನು ದೇಶವೇ ಮೆಚ್ಚಿದೆ. ಅಲ್ಲಿ ಎಸ್‌ಐಆರ್‌ನಿಂದೇ ಅಲ್ಲಿ ಬಿಜೆಪಿ ಗೆದ್ದಿದೆ ಎಂದು ಹೇಳುವುದಾದರೆ ಕೇರಳದಲ್ಲಿ ಕಾಂಗ್ರೆಸ್‌ ಗೆಲುವಿಗೆ ಎಸ್‌ಐಆರ್‌ ಕಾರಣ ಅಲ್ಲವೇ ಎಂದು ಹರಿಹಾಯ್ದರು.

ಪಾಕಿಸ್ತಾನಿ ಭಯೋತ್ಪಾದಕರು ಕೂಡ ವೋಟರ್ ಲೀಸ್ಟ್‌ನಲ್ಲಿ ಇದ್ದರು. ಬಾಡಿಗೆ ಮನೆ ಪಡೆದು, ಭಯೋತ್ಪಾದಕ ಕೃತ್ಯ ಮಾಡಿದವರು ಲಿಸ್ಟ್‌ನಲ್ಲಿದ್ದರು. ಭಯೋತ್ಪಾದಕರು ದೇಶದ ಪೌರತ್ವ ಪಡೆದು, ಸಿಕ್ಕಿ ಬಿದ್ದಿದ್ದಾರೆ. ಒಬ್ಬ ವ್ಯಕ್ತಿಯ ಹೆಸರು ಮೂರು ಕಡೆಗಳಲ್ಲಿ ಇದ್ದ ಉದಾಹರಣೆಗಳಿವೆ. ಇದನ್ನೆಲ್ಲ ಗಮನಿಸಿ, ಇದೀಗ ಆಯೋಗ ಪರಿಶೀಲನೆ ಮಾಡುತ್ತಿದೆ. ಎಸ್‌ಐಆರ್‌ ಮೂಲಕ ನೈಜ ಮತದಾರರ ಪಟ್ಟಿ ಪ್ರಾಮಾಣಿಕವಾಗಿ ಬರುತ್ತಿದೆ ಎಂದರು.


ಎಸ್ಐಆರ್‌ಗೆ ರಾಜ್ಯ ಸರ್ಕಾರದ ಸಿಬ್ಬಂದಿಯನ್ನೇ ಬಳಸಲಾಗುತ್ತಿದೆ. ಆದರೆ, ಕಾಂಗ್ರೆಸ್ ನಾಯಕರ ಪದ ಬಳಕೆ ನೋಡಿದರೆ ಆಶ್ಚರ್ಯವಾಗುತ್ತೆ. ಮಾಜಿ ಸಿಎಂ ಸಿದ್ದರಾಮಯ್ಯ ಎಸ್ ಐಆರ್‌ನಿಂದ ಪ್ರಜಾಪ್ರಭುತ್ವ ಮಾರಣ ಹೋಮವಾಗುತ್ತೇ ಅಂತಾರೇ. ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಾಸದ್‌ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದಾರೆ. ಹೀಗೆ ಮೈಮೇಲೆ ಜ್ಞಾನವಿಲ್ಲದ ರೀತಿ ಎಸ್‌ಐಆರ್‌ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಬಾಂಗ್ಲಾವಾಸಿಗಳು, ಪಾಕಿಸ್ತಾನಿಗಳು, ಭಯೋತ್ಪಾದಕರು ವೋಟ್ ಮಾಡಿದರೆ ಅದು ಸರಿನಾ. ಒಬ್ಬರು ಮೂರು ಮೂರು ಕಡೆ ವೋಟ್ ಮಾಡಿದರೆ ಸರಿನಾ? ಎಂದು ಕಿಡಿಕಾರಿದರು.ಎಸ್ಐಆರ್ ಅನ್ನು 2ನೇ ಸ್ವಾತಂತ್ರ್ಯ ಹೋರಾಟ. ದೇಶ ಗುಲಾಮಗಿರಿಗೆ ಹೋಗುತ್ತೇ ಅಂತ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾರಾದ್ರೂ ನಿಮ್ಮ ಕಾರ್ಯಕರ್ತರನ್ನು ಬಿಎಲ್ಓ ಜೊತೆ ಕಳಿಸಬೇಡಿ ಅಂದಿದ್ದಾರಾ? ಎಸ್ಐಆರ್ ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ. ದೇಶದಲ್ಲಿ 1951 ರಿಂದ 2002ರವರೆಗೆ 9 ಬಾರಿ ಎಸ್ಐಆರ್ ನಡೆದಿದೆ ಎಂದರು.

ಆಗೆಲ್ಲಾ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಎಸ್ಐಆರ್ ದುರುಪಯೋಗ ಮಾಡಿ, ಆಡಳಿತ ನಡೆಸಿತ್ತಾ ಎಂಬ ಅನುಮಾನವಿದೆ. ರಾಹುಲ್ ಗಾಂಧಿ ಅವರದ್ದು ಎರಡು ಕಡೆ ಇದೆ. ಇದಕ್ಕೆ ಸಿದ್ದರಾಮಯ್ಯ ಎನೂ ಹೇಳ್ತಾರೆ. ರಾಹುಲ್ ಅವರ ದತ್ತು ಪುತ್ರ ಹರಿಪ್ರಸಾದ್ ಏನು ಉತ್ತರ ಕೊಡುತ್ತಾರೆ ಎಂದು ಕುಟುಕಿದರು.

ಕಾಂಗ್ರೆಸ್ ಎಸ್ಐಆರ್ ಬಗ್ಗೆ ಅಪಾದನೆ ಮಾಡೋದನ್ನು ಬಿಟ್ಟು ಕಾರ್ಯಕರ್ತರನ್ನು ಮನೆಗೆ ಕಳಿಸಲಿ. ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹರಿಗೂ ಸಿಗಲಿ. ರಾಷ್ಟ್ರಭಕ್ತರ ಬಳಗ ಎಸ್ಐಆರ್‌ಗೆ ಸಂಪೂರ್ಣ ಸಹಕಾರ ನೀಡುತ್ತೆ. ಬಿಎಲ್ಓಗಳ ಜೊತೆ ಕೈಜೋಡಿಸುತ್ತೇವೆ. ಅಕ್ರಮ ಮತದಾರರು ಸೇರದಂತೆ ನಿಗಾವಹಿಸುತ್ತೇವೆ. ಪಾರದರ್ಶಕವಾಗಿ ಎಲ್ಲಾ ಚಟುವಟಿಕೆ ಆಗಬೇಕು ಎಂದರು.

ಮಾಜಿ ಸಿಎಂ ಸದಾನಂದ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ಬಿಜೆಪಿಯವರನ್ನು ಕೇಳಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ಮೋಹನ್‌ಜಾದವ್, ಮಾಜಿ ಮೇಯರ್ ಸುವರ್ಣಾಶಂಕರ್, ಬಾಲು, ಶಿವಾಜಿ, ರಾಜಣ್ಣ, ಕೆಂಪಮ್ಮ, ಕುಬೇರಪ್ಪ ಮತ್ತಿತರರು ಇದ್ದರು.

------------------

ಪೋಟೋ: 30ಎಸ್‌ಎಂಜಿಕೆಪಿ01

ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಮಾತನಾಡಿದರು.