ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಚಿಕ್ಕೋಡಿ ಭಾಗದ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ರಾಜ್ಯ ಸರಕಾರವನ್ನೇ ಉರುಳಿಸುವ ಹಾಗೂ ಕಟ್ಟುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಚಿಕ್ಕೋಡಿಯನ್ನು ಜಿಲ್ಲೆ ಮಾಡುವ ವಿಷಯದಲ್ಲಿ ಮಾತ್ರ ನಮ್ಮ ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿರುವುದನ್ನು ನೋಡಿದರೆ ಇದರಲ್ಲಿ ಸ್ವಾರ್ಥದ ರಾಜಕಾರಣ ನಡೆಸಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಪಿ.ಎಮ್.ಭೋಜೆ ಅಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಚಿಕ್ಕೋಡಿ ಭಾಗದ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ರಾಜ್ಯ ಸರಕಾರವನ್ನೇ ಉರುಳಿಸುವ ಹಾಗೂ ಕಟ್ಟುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಚಿಕ್ಕೋಡಿಯನ್ನು ಜಿಲ್ಲೆ ಮಾಡುವ ವಿಷಯದಲ್ಲಿ ಮಾತ್ರ ನಮ್ಮ ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿರುವುದನ್ನು ನೋಡಿದರೆ ಇದರಲ್ಲಿ ಸ್ವಾರ್ಥದ ರಾಜಕಾರಣ ನಡೆಸಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಪಿ.ಎಮ್.ಭೋಜೆ ಅಕ್ರೋಶ ವ್ಯಕ್ತಪಡಿಸಿದರು.ಚಿಕ್ಕೋಡಿ ಪಟ್ಟಣದ ಬಸವ ಸರ್ಕಲ್‌ದಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಘೋಷಣೆಗಾಗಿ ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ತೆರಳಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅವರು, ಈ ಭಾಗದ ಜನಪ್ರತಿನಿಧಿಗಳು ಸಾಮೂಹಿಕವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಮೊದಲು ಜನಪ್ರತಿನಿಧಿಗಳು ತಮ್ಮ ಸ್ವಾರ್ಥದಿಂದ ಹೊರ ಬಂದು ಅಭಿವೃದ್ಧಿಯ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡಲು ಒಮ್ಮತದಿಂದ ಪ್ರಯತ್ನ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.ಸದಲಗಾ ಪಟ್ಟಣದ ಹೋರಾಟಗಾರರು ಹಾಗೂ ಸಹಕಾರಿ ಧುರೀಣ ಧರೆಪ್ಪಾ ಹವಾಲ್ದಾರ ಮಾತನಾಡಿ, ನಮ್ಮ ಭಾಗದ ಹಲವಾರು ಜನಪ್ರತಿನಿಧಿಗಳು ಸದನದಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಧ್ವನಿ ಎತ್ತಿದರೂ ಕೂಡ, ಇಲ್ಲಿಯವರೆಗೆ ಚಿಕ್ಕೋಡಿ ಜಿಲ್ಲೆ ಘೋಷಣೆ ಆಗಲಿಲ್ಲ. ನಮ್ಮ ಭಾಗದ ಜನರ ಬೇಡಿಕೆಗಳನ್ನು ಸರ್ಕಾರ ಯಾಕೆ ನಿರ್ಲಕ್ಷ್ಯ ಮಾಡುತ್ತಿದೆ ಎಂಬುದೇ ತಿಳಿಯದ ವಿಷಯವಾಗಿದೆ. ಬೆಳಗಾವಿ ಜಿಲ್ಲೆಯ ವಿಭಜನೆ ಆಗದ ಹೊರತು ನಮ್ಮ ಭಾಗಕ್ಕೆ ಭವಿಷ್ಯವಿಲ್ಲ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಚಂದ್ರಶೇಖರ ಅರಭಾಂವಿ, ಮನೋಜ ಶಿರಗಾಂವೆ, ಮಹಾದೇವ ಬರಗಾಲೆ, ಡಿ.ಎ.ಮಾನೆ, ದುಂಡಪ್ಪ ಚೌಗುಲೆ, ದುರದುಂಡಿ ಬಡಿಗೇರ, ಅಜ್ಜಪ್ಪಾ ವಗ್ಗೆ, ಹಾಲಪ್ಪಾ ದುಗ್ಗಾನೆ, ಚಿದಾನಂದ ಶಿರೋಳೆ, ಅಪ್ಪಾಸಾಬ ಹಿರೇಕೋಡಿ, ಭೀಮರಾವ್ ಮಡ್ಡೆ, ಸುರೇಶ ಕದ್ದಿ, ಪಿಂಟು ಹರಕೆ, ಸುಶಾಂತ ಬರಗಾಲೆ, ಸಚೀನ ಬರಗಾಲೆ ಸೇರಿದಂತೆ ನೂರಾರು ಹೋರಾಟಗಾರರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.