ಸಾರಾಂಶ
ಹೊಳೆನರಸೀಪುರ : ಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ವಿರುದ್ಧ ಒತ್ತಡ, ಭಯ ಅಥವಾ ಇತರೆ ಕಾರಣಕ್ಕೆ ಸಿಲುಕಿ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿಲ್ಲ. ಪ್ರಜ್ವಲ್ ಇಲ್ಲಿ ಇಲ್ಲದಿದ್ದರೆ ಪ್ರಕರಣದ ಒಂದನೇ ಆರೋಪಿಯಾಗಿರುವ ಎಚ್.ಡಿ.ರೇವಣ್ಣ ಕಣ್ಣೆದುರಿದ್ದರೂ ಇನ್ನೂ ಏಕೆ ಬಂಧಿಸಿಲ್ಲ ಎಂದು ಹಿರಿಯ ವಕೀಲ ಮೋಹನ್ ಕುಮಾರ್ ಎಸ್.ಎಚ್. ಪ್ರಶ್ನಿಸಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಂತ್ರಸ್ತ ಮಹಿಳೆ ದೂರಿನಲ್ಲಿ, ಎಚ್.ಡಿ.ರೇವಣ್ಣ ಅವರು ಮೈ ಮುಟ್ಟುವುದು, ಕೈ ಹಿಡಿದು ಎಳೆಯುವುದು ಮತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು, ಪ್ರಜ್ವಲ್ ರೇವಣ್ಣ ಅವರು ಅಡುಗೆ ಮನೆಯಲ್ಲಿ ಇದ್ದಾಗ ಹಿಂದಿನಿಂದ ಬಂದು ಮೈಮುಟ್ಟುವುದು, ಹೊಟ್ಟೆಭಾಗದಲ್ಲಿ ಜಿಗುಟುವುದು, ಇತ್ಯಾದಿ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಸಂತ್ರಸ್ತೆ ನೀಡಿರುವ ಹೇಳಿಕೆಗೆ ಐಪಿಸಿ ಕಾಲಂ ೩೫೪ ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇದು ಜಾಮೀನು ರಹಿತವಾಗಿರುತ್ತದೆ. ಜತೆಗೆ ಒಂದರಿಂದ ಐದು ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಆದರೆ ಐಪಿಸಿ ೧೮೬೦ (ಯುಎಸ್-೩೫೪ (ಎ), ೩೫೪ (ಡಿ), ೫೦೬, ೫೦ (೯) ಕಾಲಂ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ’ ಎಂದು ಆರೋಪಿಸಿದರು.
‘ಇಡೀ ದೇಶದಲೇ ಹರಿದಾಡುತ್ತಿರುವ ಸಿಡಿಯಿಂದ ಅವರಿಗೆ ಗೊತ್ತಾಗಿದೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಪ್ರಕರಣ ಸಂಬಂಧಿಸಿದಂತೆ ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಹೇಳಿದ್ದರು. ಆದರೆ ಇತ್ತೀಚೆಗೆ ನೀಡುತ್ತಿರುವ ಹೇಳಿಕೆಯಲ್ಲಿ ಸಿಡಿ ಎಲ್ಲಿ ಮುದ್ರಣವಾಯಿತು, ವಿತರಣೆ ಮಾಡಿದವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಮೊದಲಿಗೆ ಆರೋಪಿಗಳನ್ನು ವಿಚಾರಣೆಗೆ ಹಾಜರುಪಡಿಸಿ, ವಿಚಾರಣೆಗೆ ಸಹಕರಿಸಿ ರಾಜ್ಯದ ಜನತೆಯ ಕ್ಷಮೆ ಕೇಳುವುದಕ್ಕೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
‘ಸಂತ್ರಸ್ತೆ ಮಹಿಳೆಯೊಬ್ಬರು ಜಿಲ್ಲಾಧಿಕಾರಿಗೆ ಅರ್ಜಿ ನೀಡುವ ಸಂದರ್ಭದಲ್ಲಿ ಅರ್ಜಿ ಸ್ವೀಕರಿಸಿದ ಜಿಲ್ಲಾಧಿಕಾರಿ ಆಕೆಯನ್ನು ಸಂತೈಸುವ ಸಲುವಾಗಿ, ಒಂದು ಉದಾಹರಣೆ ಸಮೇತ ಸಮಾಧಾನ ಮಾಡಿರಬಹುದು. ಇದನ್ನು ದೊಡ್ಡದು ಮಾಡಿ ಟೀಕಿಸುವ ಅವಶ್ಯಕತೆ ಇಲ್ಲ. ನಮ್ಮ ಕುಟುಂಬ ಬೇರೆ ಬೇರೆ ಎಂದು ಹೇಳುತ್ತಾರೆ. ಒಂದು ಮಾತಿಗೆ ಬದ್ಧರಾಗಿರಬೇಕು. ಸಂತ್ರಸ್ತೆ ಮಹಿಳೆ ನೀಡಿರುವ ದೂರಿನಲ್ಲಿ ಎ೧ ಆರೋಪಿ ರೇವಣ್ಣ, ಎ೨ ಆರೋಪಿ ಪ್ರಜ್ವಲ್, ರೇವಣ್ಣ ಇಲ್ಲೇ ಇರುವಾಗ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸದೇ ಬಿಟ್ಟಿದ್ದಾರೆ. ಅದೇ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ೬೦೭, ೩೦೭ ಕಾಲಂ ದಾಖಲಿಸಿ ಬಂಧಿಸುತ್ತಿದ್ದರು. ಎ೧ ಆರೋಪಿ ಇಲ್ಲೇ ಇರುವಾಗ ಬಂಧಿಸಿ, ವಿಚಾರಣೆಗೆ ಒಳಪಡಿದೇ, ಎ2 ಆರೋಪಿಯನ್ನೆ ಏಕೆ ಹುಡುಕಾಡುತ್ತಿದ್ದೀರಾ. ಈ ಪ್ರಕರಣ ಸಂಬಂಧಿಸಿದ ಸುದ್ದಿಗಳು ಚುನಾವಣೆಯ ಒಂದು ವಾರಕ್ಕೆ ಮುಂಚೆ ಪ್ರಸಾರವಾಗಿದ್ದರೇ ರಾಜ್ಯದ ಚಿತ್ರಣವೇ ಬೇರೆಯಾಗುತ್ತಿತ್ತು’ ಎಂದು ಹೇಳಿದರು.
ಪ್ರತಿದಿನ ಸರಣಿಯಾಗಿ ಬರುತ್ತಿರುವ ವಿಡಿಯೋ ಹಾಗೂ ಫೋಟೋಗಳು ನಿಲ್ಲಬೇಕೆಂದರೆ ಮೊದಲಿಗೆ ಆರೋಪಿತರನ್ನು ವಿಚಾರಣೆಗೆ ಹಾಜರುಪಡಿಸಿ, ಇದನ್ನು ನಿಲ್ಲಿಸಬೇಕೆಂದು ವಿನಂತಿಸಿದರು.
ವಕೀಲರಾದ ಶ್ರೀನಿವಾಸ ಎಸ್.ಎನ್., ಶಿವಣ್ಣ ಆರ್., ಮಂಜುನಾಥ್ ಎಚ್.ಆರ್. ಹಾಗೂ ರಂಗನಾಥ್ ಎಚ್.ಎಸ್. ಇದ್ದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲ ಮೋಹನ್ ಕುಮಾರ್ ಎಸ್.ಎಚ್. ಮಾತನಾಡಿದರು.