ಸಾರಾಂಶ
ಮಹದಾಯಿ ಬಿಜೆಪಿಯವರಿಗೆ ಸಣ್ಣ ಸಮಸ್ಯೆ. ಇದನ್ನು ಏಕೆ ಬಗೆಹರಿಸಲು ಆಗುತ್ತಿಲ್ಲ. ಈ ಯೋಜನೆ ಸಾಕಾರಕ್ಕೆ ಕೇಂದ್ರ ಸರ್ಕಾರದ ಕ್ಲಿಯರೆನ್ಸ್ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಚಿವ ಲಾಡ್ ತಿಳಿಸಿದರು.
ಹೊಸಪೇಟೆ: ಉಕ್ರೇನ್ ಹಾಗೂ ರಷ್ಯಾ ಯುದ್ಧ ನಿಲ್ಲಿಸುವ ತಾಕತ್ತು ಇರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹದಾಯಿ ನದಿ ನೀರಿನ ಸಮಸ್ಯೆ ಬಗೆಹರಿಸಲು ಏಕೆ ಆಗುತ್ತಿಲ್ಲ? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ಯೋಜನೆ ಹಿನ್ನಡೆಗೆ ಕಾಂಗ್ರೆಸ್ ನೇರ ಕಾರಣ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸುತ್ತಾರೆ. ಅವರು ಆಡಳಿತದಲ್ಲಿದ್ದಾಗ ಡಬಲ್ ಎಂಜಿನ್ ಸರ್ಕಾರ ಇತ್ತು. ಗೋವಾದಲ್ಲೂ ಬಿಜೆಪಿಯೇ ಆಡಳಿತದಲ್ಲಿದೆ. ತ್ರಿವಳಿ ಸರ್ಕಾರ ಇದ್ದರೂ ಏಕೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರಿಗೆ ಮಹದಾಯಿ ಯೋಜನೆ ಸಮಸ್ಯೆ ಬಗೆಹರಿಸಲು ಆಗಿಲ್ಲ? ಉಕ್ರೇನ್ ಯುದ್ಧ ನಿಲ್ಲಿಸುವ ತಾಕತ್ತು ಇದೆ ಎಂದು ಪ್ರಧಾನಿ ಅವರನ್ನು ಬಿಂಬಿಸುತ್ತಾರೆ. ಹಾಗಾದರೆ ಮಹದಾಯಿ ಅವರಿಗೆ ಸಣ್ಣ ಸಮಸ್ಯೆ. ಇದನ್ನು ಏಕೆ ಬಗೆಹರಿಸಲು ಆಗುತ್ತಿಲ್ಲ. ಈ ಯೋಜನೆ ಸಾಕಾರಕ್ಕೆ ಕೇಂದ್ರ ಸರ್ಕಾರದ ಕ್ಲಿಯರೆನ್ಸ್ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.ರಾಜ್ಯಸಭೆ ಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಾವು ಮೂವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ನಮ್ಮ ಬಳಿ 136 ಶಾಸಕರ ಬೆಂಬಲ ಇದೆ. ಖಂಡಿತ ನಾವು ಗೆಲುವು ಸಾಧಿಸುತ್ತೇವೆ. ನಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಲು ರೆಸಾರ್ಟ್‌ಗೆ ಹೋಗುತ್ತಿದ್ದೇವೆ ಎಂದರು.
ರಾಜ್ಯಸಭೆ ಚುನಾವಣೆ ವಿಷಯದಲ್ಲಿ ನಮಗೆ ಬಿಜೆಪಿ ಭಯ ಇದೆ. ಹಾಗಾಗಿ ನಮ್ಮ ಶಾಸಕರ ರಕ್ಷಣೆಗಾಗಿ ನಾವು ರೆಸಾರ್ಟ್‌ಗಳನ್ನು ಬುಕ್ ಮಾಡಿದ್ದೇವೆ. ನಮಗೆ ಅವರ (ಬಿಜೆಪಿ) ಭಯ ಇದೆ. ಸರ್ಕಾರ ಅಸ್ಥಿರಗೊಳಿಸುವ ಯೋಜನೆ ನಮ್ಮದಲ್ಲ. ಬಿಜೆಪಿಯವರು ಕಳೆದ ಹತ್ತು ವರ್ಷಗಳಲ್ಲಿ 500ರಿಂದ 600 ಶಾಸಕರನ್ನು ಖರೀದಿ ಮಾಡಿದ್ದಾರೆ. ಸರ್ಕಾರಗಳ ಅಸ್ಥಿರಕ್ಕೆ, ನಾಂದಿ ಹಾಡಿದ್ದೆ ಬಿಜೆಪಿಯವರು ಎಂದು ದೂರಿದರು.