ಕಾಂಗ್ರೆಸ್‌ ಸಚಿವರು, ಶಾಸಕರ ಮೇಲೆ ಕ್ರಮ ಏಕಿಲ್ಲ ?: ಕೂಡಲ ಸ್ವಾಮೀಜಿ

| Published : Dec 15 2024, 02:00 AM IST

ಕಾಂಗ್ರೆಸ್‌ ಸಚಿವರು, ಶಾಸಕರ ಮೇಲೆ ಕ್ರಮ ಏಕಿಲ್ಲ ?: ಕೂಡಲ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

2ಎ ಮೀಸಲಾತಿ ನೀಡಬೇಕೆಂದು ಪಂಚಮಸಾಲಿ ಸಮಾಜದ ಹೋರಾಟ ಸಂವಿಧಾನ ವಿರೋಧಿ, ಕಾನೂನು ಬಾಹಿರವಾಗಿದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ನಮ್ಮ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಹೋರಾಟ ಸಂವಿಧಾನ ವಿರೋಧಿ, ಕಾನೂನು ವಿರೋಧಿಯಾಗಿದ್ದರೆ ಹೋರಾಟದಲ್ಲಿ ಭಾಗಿಯಾದ ಸಚಿವರು, ಶಾಸಕರ ಮೇಲೆ ಕ್ರಮ ಏಕಿಲ್ಲ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

2ಎ ಮೀಸಲಾತಿ ನೀಡಬೇಕೆಂದು ಪಂಚಮಸಾಲಿ ಸಮಾಜದ ಹೋರಾಟ ಸಂವಿಧಾನ ವಿರೋಧಿ, ಕಾನೂನು ಬಾಹಿರವಾಗಿದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ನಮ್ಮ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಹೋರಾಟ ಸಂವಿಧಾನ ವಿರೋಧಿ, ಕಾನೂನು ವಿರೋಧಿಯಾಗಿದ್ದರೆ ಹೋರಾಟದಲ್ಲಿ ಭಾಗಿಯಾದ ಸಚಿವರು, ಶಾಸಕರ ಮೇಲೆ ಕ್ರಮ ಏಕಿಲ್ಲ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಶ್ನಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಹೋರಾಟದಲ್ಲಿ ಕಾಂಗ್ರೆಸ್ಸಿಗರಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಬಾಸಾಹೇಬ ಪಾಟೀಲ, ರಾಜು ಕಾಗೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬಂದಿದ್ದರು. ನಮ್ಮ ಹೋರಾಟ ಸಂವಿಧಾನ ವಿರೋಧಿಯೇ ಆಗಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಚಿವರಿಂದ ರಾಜೀನಾಮೆ ಪಡೆಯಬೇಕು, ಶಾಸಕ ಸ್ಥಾನದಿಂದ ವಜಾಗೊಳಿಸಲಿ ಎಂದು ಸವಾಲು ಹಾಕಿದರು.

ನಮ್ಮ ಸಮಾಜದ ಬಗ್ಗೆ ನಿಮಗೆ ಕಳಕಳಿ ಇರದಿದ್ದರೆ, ಮೀಸಲಾತಿ ಕೊಡಲಾಗದು ಎಂದು ಹೇಳಿ ಪರವಾಗಿಲ್ಲ. ಆದರೆ, ನಮ್ಮ ಹೋರಾಟವೇ ಸಂವಿಧಾನ ವಿರೋಧಿ, ಕಾನೂನು ಬಾಹಿರವಾಗಿದೆ ಎಂಬುದು ಸರಿಯಲ್ಲ. ಸಿಎಂ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಅವರು, ಪಂಚಮಸಾಲಿ ಸಮಾಜ ಮೀಸಲಾತಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತ ಬಂದಿದೆ. ನಮ್ಮ ಸಮಾಜದ ಹೋರಾಟ ಸಂವಿಧಾನ ವಿರೋಧಿ ಆಗಿದ್ದರೆ ನಮಗೆ ಪ್ರತಿಭಟನೆಗೆ ಅನುಮತಿಯೇಕೆ ನೀಡಿದಿರಿ ಎಂದು ಸ್ವಾಮೀಜಿ ಪ್ರಶ್ನಿಸಿದರು.

ನಾನು ಯಾರಿಂದಲೂ ಸುಪಾರಿ ಪಡೆದಿಲ್ಲ:

ನಾನು ಪಂಚಮಸಾಲಿ ಹೋರಾಟಕ್ಕಾಗಿ ಯಾರಿಂದಲೂ ಸುಪಾರಿ ಪಡೆದಿಲ್ಲ. ಸಿಎಂ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ನಾನು ಬಿಜೆಪಿಯವರಿಂದ ಸುಪಾರಿ ಪಡೆದಿದ್ದೇನೆ ಎಂಬ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌. ಶಿವರಾಮು ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರೇ ಸುಪಾರಿ ಪಡೆದುಕೊಂಡಿರಬಹುದು. ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದರೆ ಅವರ ಕೈ ಕತ್ತರಿಸುತ್ತೇವೆ ಎಂದು ಶಿವರಾಮು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಹಾಗೆ ಮಾತನಾಡುವುದೇ ಅವರ ಗುಣ. ಆದರೆ, ನಾವು ಅಹಿಂಸಾತ್ಮಕ ಹೇಳಿಕೆ ನೀಡುತ್ತೇವೆ. ಬಸವಣ್ಣನವರ ತತ್ವದಡಿ ನಾವು ಹೋರಾಡುತ್ತೇವೆ ಎಂದು ಹೇಳಿದರು.

ಪಂಚಮಸಾಲಿ ಹೋರಾಟ ಸಂವಿಧಾನ ವಿರೋಧಿಯಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಡಿ.16 ರಿಂದ ವಿಧಾನಮಂಡಲ ಅಧಿವೇಶನ ಮುಗಿಯುವವರೆಗೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಘೋಷಿಸಿದ ಸ್ವಾಮೀಜಿ, ನಮ್ಮ ಸಮಾಜದ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿರುವುದನ್ನು ಸಮರ್ಥಿಸಿಕೊಂಡ ಗೃಹ ಸಚಿವ ಜಿ.ಪರಮೇಶ್ವರ ವಿರುದ್ಧವೂ ಕಿಡಿಕಾರಿದರು.