ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಹಾಗೂ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವ ಉದ್ದೇಶದಿಂದ, ಗ್ರಾಮೀಣರಿಗೆ ತಮ್ಮ ಸ್ವಗ್ರಾಮದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ವಿಬಿ-ಜಿರಾಮ್‌ಜಿ ಯೋಜನೆಯಡಿ "ವಲಸೆ ಯಾಕೆ? ನಿಮ್ಮೂರಲ್ಲೇ ಕೆಲಸ " ಎಂಬ ವಿಶೇಷ ಜಾಗೃತಿ ಅಭಿಯಾನವನ್ನು ಯಾದಗಿರಿ ಜಿಲ್ಲಾ ಪಂಚಾಯಿತಿ ವತಿಯಿಂದ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ವಲಸೆ ಹೋಗುತ್ತಿರುವ ಗ್ರಾಮೀಣ ಕೂಲಿ ಕಾರ್ಮಿಕರಿಗೆಂದು ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಹಾಗೂ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವ ಉದ್ದೇಶದಿಂದ, ಗ್ರಾಮೀಣರಿಗೆ ತಮ್ಮ ಸ್ವಗ್ರಾಮದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ವಿಬಿ-ಜಿರಾಮ್‌ಜಿ ಯೋಜನೆಯಡಿ "ವಲಸೆ ಯಾಕೆ? ನಿಮ್ಮೂರಲ್ಲೇ ಕೆಲಸ " ಎಂಬ ವಿಶೇಷ ಜಾಗೃತಿ ಅಭಿಯಾನವನ್ನು ಯಾದಗಿರಿ ಜಿಲ್ಲಾ ಪಂಚಾಯಿತಿ ವತಿಯಿಂದ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ವಲಸೆ ಹೋಗುತ್ತಿರುವ ಗ್ರಾಮೀಣ ಕೂಲಿ ಕಾರ್ಮಿಕರಿಗೆಂದು ಹಮ್ಮಿಕೊಳ್ಳಲಾಯಿತು.

ಬರಗಾಲಕ್ಕೆ ಕೃಷಿ ಚಟುವಟಿಕೆಯಿಲ್ಲದೆ, ಕೆಲಸ ಸಿಗದೇ ಕಂಗಲಾದ ಕೂಲಿ ಕಾರ್ಮಿಕರು, ದುಡಿಯುವ ಕೈಗೆ ಕೆಲಸ ಸಿಗದೆ, ಬೆಂಗಳೂರು-ಮುಂಬೈನಂತಹ ಮಹಾನಗರಗಳಿಗೆ ರೈತ ಕುಟುಂಬ ಸಮೇತ ವಲಸೆ ಹೋಗುತ್ತಿದ್ದಾರೆ. ಯಾದಗಿರಿ ಜಿಲ್ಲೆಯಿಂದ ಭಾರಿ ಪ್ರಮಾಣದಲ್ಲಿ ರೈತ-ಕೂಲಿ ಕಾರ್ಮಿಕ ಕುಟುಂಬಗಳು ತಮ್ಮ ತಮ್ಮ ಮಕ್ಕಳ ಸಮೇತ ವಲಸೆ ಹೋಗುತ್ತಿರುವುದನ್ನು ತಡೆದು, ಸ್ಥಳೀಯವಾಗಿಯೇ ಉದ್ಯೋಗ ನೀಡುವ ಮೂಲಕ ಇದಕ್ಕೆ ಕಡಿವಾಣ ಹಾಕಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

ಕೂಲಿ ಕೆಲಸ ಅರಸಿ ಮಹಾನಗರಗಳಿಗೆ ಗುಳೇ ಹೋಗುತ್ತಿರುವವರಿಗೆ ವಿಬಿ-ಜಿ ರಾಮ್ -ಜಿ ಯೋಜನೆಯಡಿ, ಅವರವರ ಗ್ರಾಮಗಳಲ್ಲೇ ವಿವಿಧ ವೈಯಕ್ತಿಕ ಕಾಮಗಾರಿ ಹಾಗೂ ಇನ್ನಿತರ ಕಾಮಗಾರಿಗಳಲ್ಲಿ ಕೂಲಿ ಕೆಲಸ ಕೊಡುವ ಬಗ್ಗೆ ಜಾಗೃತಿ ಮೂಡಿಸಲು ಯಾದಗಿರಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಸವರಾಜ ಶರಭೈ ನೇತೃತ್ವದ ತಂಡ, ಯಾದಗಿರಿ ರೈಲು ನಿಲ್ದಾಣಕ್ಕೆ ತೆರಳಿದ ಪಂಚಾಯತ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ, ಮಹಾನಗರಗಳಿಗೆ ಗುಳೇ ಹೋಗಲು ಅಲ್ಲಿ ರೈಲುಗಳಿಗಾಗಿ ಕಾಯ್ದು ಕುಳಿತಿದ್ದ ನೂರಾರು ಜನ ರೈತ-ಕೂಲಿ ಕಾರ್ಮಿಕರನ್ನು ಮಾತನಾಡಿಸಿ, ಅವರಿಗೆ ಕೆಲಸದ ಭರವಸೆ ನೀಡಿ, ಮರಳಿ ಗ್ರಾಮಕ್ಕೆ ತೆರಳುವಂತೆ ಮನವಿ ಮಾಡಿದರು.

ಬೇರೆ ಊರುಗಳಿಗೆ ಹೋಗಿ ಸಂಕಷ್ಟ ಪಡುವ ಬದಲು ಸ್ವಂತ ಗ್ರಾಮದಲ್ಲೆ ಕೆರೆ ಹೂಳೆತ್ತುವುದು, ಗೋಕಟ್ಟೆ ನಿರ್ಮಾಣ, ನಾಲಾ ಹೂಳೆತ್ತುವುದು, ರಸ್ತೆ ನಿರ್ಮಾಣ ಕಾಮಗಾರಿ ಸೇರಿ ಇತರೆ ವೈಯಕ್ತಿಕ ಕೆಲಸಗಳನ್ನು ಮಾಡಬಹುದು. ಒಂದು ಕುಟುಂಬಕ್ಕೆ ವರ್ಷದಲ್ಲಿ 125 ದಿನ ಕೂಲಿ ಕೆಲಸ, ಜತೆಗೆ ದಿನಕ್ಕೆ ₹382 ಕೂಲಿ ಪಾವತಿಸಿಲಾಗುತ್ತದೆ. ಒಂದು ಕುಟುಂಬ ನಿರಂತರ 125 ದಿನ ಕೆಲಸ ಮಾಡಿದರೆ 47,750 ರು. ಕೂಲಿ ಹಣ ಗಳಿಸಬಹುದು ಎಂದು ತಿಳಿಸಿದ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಸವರಾಜ್‌ ಶರಬೈ ತಿಳಿಸಿದರು.

ಉದ್ಯೋಗಕ್ಕಾಗಿ ಕುಟುಂಬ ಸಮೇತ ದೂರದ ಪ್ರದೇಶಗಳಿಗೆ ವಲಸೆ ಹೋಗುವುದರಿಂದ ಮಕ್ಕಳ ಶಿಕ್ಷಣ, ಕುಟುಂಬದ ಸಾಮಾಜಿಕ ಜೀವನ ಹಾಗೂ ಜೀವನೋಪಾಯದ ಮೇಲೆ ಉಂಟಾಗುವ ಪರಿಣಾಮಗಳನ್ನು ತಪ್ಪಿಸಲು ಸ್ಥಳೀಯ ಕೂಲಿ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಶರಬೈ ಹಾಗೂ ಅಧಿಕಾರಿಗಳ ತಂಡ ಅನೇಕರಲ್ಲಿ ಮನವೊಲೈಸುವ ಪ್ರಯತ್ನ ನಡೆಸಿದರು.

ಯಾದಗಿರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಪಾಟೀಲ, ಸುರಪುರದ ಬಸವರಾಜ ಸಜ್ಜನ್ ಹಾಗೂ ವಡಗೇರಾದ ಶಶಿಧರ ಹಿರೇಮಠ, ಹುಣಸಗಿಯ ಹಾಗೂ ಯಾದಗಿರಿ ತಾ.ಪಂ. ವ್ಯವಸ್ಥಾಪಕ ಶಿವರಾಯ, ವಿಷಯ ನಿರ್ವಾಹಕ ಅನ್ಸರ ಪಟೇಲ್, ಯಾದಗಿರಿ ಜಿಲ್ಲಾ ಪಂಚಾಯಿತಿ ಹಾಗೂ ಯಾದಗಿರಿ ತಾಲೂಕು ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಯಾದಗಿರಿ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲೆಯ ವಿಬಿ-ಜಿರಾಮಜಿ ಯೋಜನೆಯ ಸಿಬ್ಬಂದಿ ಇದ್ದರು.

ಪ್ರತಿ ತಾಲೂಕಿನಲ್ಲಿ ಬಸ್ ಸ್ಟಾಂಡ್‌ನಲ್ಲಿ, ಸಂತೆಗಳಲ್ಲಿ, ಹೆಚ್ಚು ಜನ ಸಂದಣಿ ಇರತಕ್ಕಂತಹ ಸ್ಥಳಗಳಲ್ಲಿ ಈ ಯೋಜನೆಯ ಬಗ್ಗೆ ಜಾಗೃತಿಯನ್ನು ನಮ್ಮ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಮೂಡಿಸುತ್ತಿದ್ದಾರೆ ಎಂದು ಜಿ.ಪಂ ಯೋಜನಾ ನಿರ್ದೇಶಕ ಬಸವರಾಜ್‌ ಶರಭೈ ಹೇಳಿದರು.

ಬರಗಾಲದ ಹೊಡೆತ ಬಿದ್ದಿದ್ದು, ಜಮೀನು ಕೆಲಸ ಮಾಡಲು ಆಗುತ್ತಿಲ್ಲ. ಕುಟುಂಬ ನಿರ್ವಹಣೆಗೆ ಬೇರೆ ಕಡೆ ದುಡಿಯಲು ಹೋಗಬೇಕು. ಅದಕ್ಕೆ ಅದೆಲ್ಲ ಬಿಟ್ಟು ಬಿಟ್ಟು ಬೆಂಗಳೂರಿಗೆ ಹೋಗುತ್ತಿದ್ದೇವೆ. ಸಾಲ ತುಂಬಬೇಕಾದರೆ ಬೆಂಗಳೂರಿಗೆ ಹೋಗಿ ದುಡಿದು ಕಟ್ಟುತ್ತಾ ಇದ್ದೀವಿ ಎಂದು ಗುಳೇ ಹೊರಟ ಮಹಿಳೆಯೊಬ್ಬರು ತಿಳಿಸಿದರು.