ಸಾರಾಂಶ
ಹುಬ್ಬಳ್ಳಿ:
ತರಾತುರಿಯಲ್ಲಿ ಆರು ಜನ ನಕ್ಸಲರನ್ನು ಶರಣಾಗತಿ ಮಾಡಿಸಲಾಗಿದೆ. ಶರಣಾಗತಿಯಾದ ನಕ್ಸಲರು ಎಷ್ಟು ಶಸ್ತ್ರಾಸ್ತ್ರಗಳು ಒಪ್ಪಿಸಿದ್ದಾರೆ? ಅವರು ನೀಡಿರುವ ಮಾಹಿತಿ ಏನು? ಎಂದು ಪ್ರಶ್ನಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಈ ಬಗ್ಗೆ ಸಿಎಂ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ನಕ್ಸಲರಿಗೆ ವಿದೇಶಿದಿಂದ ಹಣಕಾಸಿನ ಸಹಾಯವಾಗುತ್ತದೆ. ಇದರಲ್ಲಿ ನಮ್ಮ ರಾಜ್ಯದ ಯುವಕರೂ ಸಿಲುಕಿದ್ದಾರೆ. ಬೇರೆ ಬೇರೆ ಭಾಗಗಳಲ್ಲಿ ಶರಣಾಗತಿ ಆದ ನಕ್ಸಲರು ತಮ್ಮ ಬಳಿ ಇದ್ದ ಎಲ್ಲ ಶಸ್ತಾಸ್ತ್ರಗಳನ್ನು ಒಪ್ಪಿಸಿದ್ದಾರೆ. ಆದರೆ, ರಾಜ್ಯದಲ್ಲಿ ನಡೆದ ನಕ್ಸಲರ ಶರಣಾಗತಿಯಲ್ಲಿ ಅದು ಆಗದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದರು.
ನಕ್ಸಲರ ಶರಣಾಗತಿಗೆ ನಾನು ವಿರೋಧ ಮಾಡುತ್ತಿಲ್ಲ. ನಕ್ಸಲರಿಗೆ ಪ್ಯಾಕೇಜ್ ವ್ಯವಸ್ಥೆ ಎಲ್ಲ ಸರ್ಕಾರದಲ್ಲಿದೆ. ನಕ್ಸಲ ಚಳವಳಿಯನ್ನು ಬೇರು ಸಮೇತ ಕಿತ್ತು ಹಾಕುವ ಚಿಂತನೆ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದ ಅವರು, ನಕ್ಸಲ ಚಟುವಟಿಕೆಯಲ್ಲಿ ರಾಜ್ಯದ ಯುವಕರು ಸಿಲುಕಿದ್ದಾರೆ. ನಕ್ಸಲ್ ಪ್ಯಾಕೇಜ್ ಇತರೇ ನಕ್ಸಲರಿಗೆ ಸಲುಗೆಯಾಗದಿರಲಿ. ಆರು ಜನ ನಕ್ಸಲ್ ಶರಣಾದರೆ, ರಾಜ್ಯದಲ್ಲಿ ನಕ್ಸಲ ಚಳವಳಿ ಮುಗಿಯಿತು ಎಂದು ಬಿಂಬಿಸಲಾಗುತ್ತಿದೆ. ಆ್ಯಂಟಿ ನಕ್ಸಲ ತಂಡದ ಕಾರ್ಯಾಚರಣೆ ನಿಲ್ಲಿಸುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಜೋಶಿ ಪ್ರಶ್ನಿಸಿದರು.ಪಕ್ಷದ ಸಭೆ ಅಷ್ಟೇ:
ವಿಜಯೇಂದ್ರ ಯಾವುದೇ ಡಿನ್ನರ್ ಪಾರ್ಟಿ ಎಂದು ಕರೆದಿಲ್ಲ. ಪಕ್ಷದ ಸಭೆ ಕರೆದಿದ್ದರು. ನನಗೂ ಕರೆದಿದ್ದರು ನಾನೂ ಹೋಗಿದ್ದೆ ಎಂದು ಪ್ರಶ್ನೆಯೊಂದಕ್ಕೆ ಜೋಶಿ ಉತ್ತರಿಸಿದರು. ಕಾಂಗ್ರೆಸ್‌ನ ಒಳಜಗಳದಿಂದ ಭ್ರಷ್ಟಾಚಾರ, ಅನೇಕ ರೀತಿಯ ಹಗರಣದಿಂದ ಸರ್ಕಾರ ನಿಯಂತ್ರಣ ತಪ್ಪಿದೆ. ಕೆಎಸ್‌ಆರ್‌ಟಿಸಿ ಮತ್ತು ಎಲ್ಲ ಅಂಗ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ ಎಂದರು.ದಲಿತರ ಪರ ಅಲ್ಲ:
ಇತ್ತೀಚಿಗೆ ಗೃಹ ಸಚಿವ ಡಾ.ಪರಮೇಶ್ವರ ದಲಿತ ಶಾಸಕರು, ಸಚಿವರ ಸಭೆ ಕರೆದಿದ್ದು ಅದು ದಿಢೀರನೆ ಮುಂದೂಡಲ್ಪಟ್ಟಿತು. ದಲಿತರ ಸಭೆಗೆ ಬ್ರೇಕ್ ಹಾಕಿದ್ಯಾರು, ದಲಿತರ ಕಾರ್ಯಕ್ರಮವನ್ನು ಯಾರು ಸಹಿಸಿಲ್ಲ ಎಂದು ಗೃಹ ಸಚಿವ ಪರಮೇಶ್ವರ ಬಹಿರಂಗಪಡಿಸಲಿ. ಕಾಂಗ್ರೆಸ್ ಯಾವತ್ತೂ ದಲಿತರ ಪರವಾಗಿಲ್ಲ ಎಂದರು.ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ. ಅವರಿಗೆ ಗೌರವ ಕೊಟ್ಟಿಲ್ಲ. ಈಗಿನ ದಲಿತ ನಾಯಕರಿಗೆ ಗೌರವ ನೀಡುತ್ತೆ ಎಂದು ಕೆಲವರು ಭ್ರಮೆಯಲ್ಲಿದ್ದಾರೆ. ದಲಿತರನ್ನು ತಪ್ಪು ದಾರಿಗೆಳೆಯುವ, ಕತ್ತಲಲ್ಲಿ ಇಡುವ ಕಾರ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ದಲಿತ ನಾಯಕರು ಎಚ್ಚರಿಕೆಯಿಂದ ಇರಬೇಕು ಎಂದು ಜೋಶಿ ಕಿವಿಮಾತು ಹೇಳಿದರು.
ಇಂಡಿಯಿಂದ ಕಾಂಗ್ರೆಸ್ ಔಟ್:ಇಂಡಿ ಘಟಬಂಧನದಿಂದ ಕಾಂಗ್ರೆಸ್‌ನ್ನೇ ಹೊರಹಾಕಲಾಗಿದೆ. ಕಾಂಗ್ರೆಸ್‌ಗೆ ಎಲ್ಲಿಯೂ ನೆಲೆ ಇಲ್ಲದಂತಾಗಿದೆ. ಅವರಲ್ಲಿನ ಒಳ ಜಗಳದ ಪರಿಣಾಮ ಈ ರೀತಿಯಲ್ಲಿ ಆಗುತ್ತಿದೆ. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ. ಅದು ರಾಷ್ಟ್ರೀಯ ಪಕ್ಷದಿಂದ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದು ಲೇವಡಿ ಮಾಡಿದರು.