ಸಿಆರ್‌ಜೆಡ್ ನಿಯಮ ಉಲ್ಲಂಘಿಸಿದ ಕಟ್ಟಡಗಳ ಮೇಲೆ ಕ್ರಮ ಏಕಿಲ್ಲ

| Published : Aug 29 2025, 01:00 AM IST

ಸಿಆರ್‌ಜೆಡ್ ನಿಯಮ ಉಲ್ಲಂಘಿಸಿದ ಕಟ್ಟಡಗಳ ಮೇಲೆ ಕ್ರಮ ಏಕಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕಡಲತೀರದಲ್ಲಿ ಈ ಹಿಂದೆ ₹50 ಲಕ್ಷ ವೆಚ್ಚದಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗಿತ್ತು.

ಕಾರವಾರ: ಹಳೆ ಮೀನು ಮಾರುಕಟ್ಟೆಗೆ ಮಾತ್ರ ಸಿಆರ್‌ಜೆಡ್ ನಿಯಮ ಅನ್ವಯವಾಗುತ್ತದೆಯೇ? ನಿಯಮ ಉಲ್ಲಂಘನೆ ಮಾಡಿದ ಸಾಕಷ್ಟು ಕಟ್ಟಡಗಳಿವೆ. ಅವುಗಳ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ನಗರಸಭೆ ಸದಸ್ಯ ಸಂದೀಪ ತಳೇಕರ ಪ್ರಶ್ನಿಸಿದರು.

ಅಧ್ಯಕ್ಷ ರವಿರಾಜ್ ಅಂಕೋಲೇಕರ್ ಅಧ್ಯಕ್ಷತೆಯಲ್ಲಿ ನಗರಸಭೆ ಕಚೇರಿಯ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಕಡಲತೀರದಲ್ಲಿ ಈ ಹಿಂದೆ ₹50 ಲಕ್ಷ ವೆಚ್ಚದಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಅದನ್ನು ಇದ್ದಕ್ಕಿದಂತೆ ತೆರವು ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ, ಸಿಆರ್‌ಜೆಡ್ ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡ ತೆರವು ಮಾಡುವಂತೆ ಕೋರ್ಟ್ ಆದೇಶ ಇದ್ದ ಕಾರಣದಿಂದ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ತೆರವು ಮಾಡಲಾಗಿದೆ ಎಂದರು.

ನಗರಸಭೆ ಅಧೀನದ ಕಟ್ಟಡಕ್ಕೆ ಮಾತ್ರ ಈ ನಿಯಮವೇ. ಸಿಆರ್‌ಜೆಡ್ ನಿಮಯ ಉಲ್ಲಂಘನೆಯಾಗಿರುವ ಸಾಕಷ್ಟು ಕಟ್ಟಡಗಳಿವೆ ಎಂದು ತಳೇಕರ್ ಪ್ರಸ್ತಾಪಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಪೌರಾಯುಕ್ತರು ಹೇಳಿದರು.

ನಗರದಲ್ಲಿರುವ ಮೀನು ಮಾರುಕಟ್ಟೆಯ ಮೇಲ್ಭಾಗದಲ್ಲಿರುವ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸಿದರೆ ನಗರಸಭೆಗೆ ಆದಾಯ ಬರಲಿದೆ ಎಂದು ಸಂದೀಪ ತಳೇಕರ್ ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಅನುದಾನವಿಲ್ಲ ಎಂದರು.

ಮಾಲಾದೇವಿ ಮೈದಾನದ ಬಳಿಯ ನಗರಸಭೆ ಕಟ್ಟಡದ ಮಳಿಗೆಯನ್ನು ಮರು ಹರಾಜು ಮಾಡಿ, ಬಾಡಿಗೆ ಪಡೆಯಲು ಕ್ರಮ ಕೈಗೊಳ್ಳುವಂತೆ ತಳೇಕರ್ ಆಗ್ರಹಿಸಿದರು. ಗ್ರಾಹಕ ವ್ಯಾಜ್ಯ ಕಚೇರಿಗೆ ನಗರಸಭೆಯ ದೊಡ್ಡ ಮಳಿಗೆಗೆ ಉಚಿತವಾಗಿ ನೀಡಿರುವುದನ್ನು ಪ್ರಸ್ತಾಪಿಸಿದ ಅವರು, ಈ ಬಗ್ಗೆ ನೋಟಿಸ್ ನೀಡಲು ಒತ್ತಾಯಿಸಿದರು.

ಪ್ರವಾಸೋದ್ಯಮ ಇಲಾಖೆ ನೀಡಿದ ಬೀಚ್ ಕ್ಲೀನಿಂಗ್ ಯಂತ್ರವನ್ನು ನಗರಸಭೆಯೇ ದುರಸ್ತಿ ಮಾಡಬೇಕೆಂಬ ನಿರ್ಧಾರಕ್ಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಬೀಚ್ ಗಳ ನಿರ್ವಹಣೆ ಮತ್ತು ಶುಲ್ಕ ವಸೂಲಿ ಪ್ರವಾಸೋದ್ಯಮ ಇಲಾಖೆಯದ್ದಾಗಿದೆ. ಅದನ್ನು ನಗರಸಭೆ ಸುಪರ್ದಿಗೆ ನೀಡಬೇಕು ಎಂದು ಈ ಹಿಂದೆ ಒತ್ತಾಯ ಮಾಡಲಾಗಿತ್ತು. ಆದರೆ ನೀಡಿಲ್ಲ. ಶುಲ್ಕ ವಸೂಲಿ ಪ್ರವಾಸೋದ್ಯಮ ಇಲಾಖೆ ಮಾಡಬೇಕು. ಆದರೆ ಸ್ವಚ್ಛತೆ ನಗರಸಭೆ ಮಾಡಬೇಕು ಎನ್ನುವುದು ಸರಿಯಲ್ಲ. ಕಡಲತೀರ ಸ್ವಚ್ಛ ಮಾಡುವ ಯಂತ್ರವನ್ನು ಅವರಿಗೇ ವಾಪಸ್ ನೀಡಬೇಕು ಎಂದು ಸದಸ್ಯ ನಿತಿನ್ ಪಿಕಳೆ ಒತ್ತಾಯಿಸಿದರು.

ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಸದಸ್ಯೆ ಮಾಲಾ ಹುಲಸ್ವಾರ್, ನಗರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.