ಕನ್ನಡಪ್ರಭ ವಾರ್ತೆ, ತಿಪಟೂರು/ತುರುವೇಕೆರೆ

ಗಂಗಾಧರ ಅಜ್ಜನ ಹೆಸರಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದ ಡಿ.ಕೆ.ಶಿವಕುಮಾರ್‌, ಶನಿವಾರ ಅದೇ ಅಜ್ಜನ ಸನ್ನಿಧಿಗೆ ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದರು. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ನೇರವಾಗಿ ಗವಿ ಬಳಿ ತೆರಳಿ, ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳ ಸಮ್ಮುಖದಲ್ಲಿ ಅಜ್ಜಯ್ಯನಿಗೆ 20 ನಿಮಿಷ ವಿಶೇಷ ಪೂಜೆ ಸಲ್ಲಿಸಿದರು. ನಂತರ, ದೇವಸ್ಥಾನದ ಆವರಣದಲ್ಲಿ ಈಡುಗಾಯಿ ಒಡೆದು, ಬಳಿಕ ಆನೆ ಲಕ್ಷ್ಮೀಯಿಂದ ಆಶೀರ್ವಾದ ಪಡೆದು, ಕೆಲಕಾಲ ಮಠದ ಆವರಣದಲ್ಲಿ ಓಡಾಡಿ, ಬಂದ ಅಭಿಮಾನಿಗಳತ್ತ ಕೈಬೀಸಿದರು.

ಈ ವೇಳೆ ಮಾತನಾಡಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ನಾನು ಹೊಸಬನಲ್ಲ. ಕಳೆದ 25 ವರ್ಷಗಳಿಂದ ನಾನು ಈ ಮಠಕ್ಕೆ ಬರುತ್ತಿದ್ದೇನೆ. ಇದುವರೆಗೂ ಎಷ್ಟು ಬಾರಿ ಈ ಮಠಕ್ಕೆ ಬಂದಿದ್ದೇನೊ ಲೆಕ್ಕವಿಲ್ಲ. ನನ್ನ ಜೀವನದ ಪ್ರತಿ ಹಂತದಲ್ಲೂ ನಾನು ಇಲ್ಲಿಗೆ ಬಂದು ಸೇವೆ ಮಾಡಿ, ಪ್ರಾರ್ಥಿಸಿ, ಮಾರ್ಗದರ್ಶನ ಪಡೆದಿದ್ದೇನೆ. ಚುನಾವಣೆಗೂ ಮುನ್ನ, ಚುನಾವಣೆ ನಂತರ, ಅಧಿಕಾರ ಸ್ವೀಕಾರದ ನಂತರ ಎಲ್ಲ ಸಂದರ್ಭದಲ್ಲಿ ಬಂದಿದ್ದೇನೆ. ನಾನು ಇಲ್ಲಿಗೆ ಸಿಎಂ ಆಗಿಯಲ್ಲ, ಒಬ್ಬ ಭಕ್ತನಾಗಿ ಬಂದಿರುವೆ. ಇಲ್ಲಿ ಭಕ್ತ ಹಾಗೂ ಭಗವಂತನ ಸಂಬಂಧವಿದೆ. ಪ್ರಾರ್ಥನೆ ಮಾಡಲು ಇಲ್ಲಿಗೆ ಬಂದಿರುವೆ ಎಂದು ತಿಳಿಸಿದರು.

ಮಲ್ಲಾಘಟ್ಟ ಕೆರೆಗೆ ಭೇಟಿ;

ಇದಕ್ಕೂ ಮೊದಲು, ಅವರು ತುಮಕೂರಿನ ಮಲ್ಲಾಘಟ್ಟ ಕೆರೆ ಬಳಿಯಲ್ಲಿರುವ ಗಂಗಾಧರೇಶ್ವರ ದೇಗುಲಕ್ಕೆ ಭೇಟಿ ಕೊಟ್ಟು, ಗಂಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀಗಳಾದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಮಲ್ಲಾಘಟ್ಟ ಕೆರೆಯ ದಡದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದಲೇ ಗಂಗಾಪೂಜೆ ಮಾಡಿಸಿದರು.


ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಆದ ನಂತರ ಮೊದಲ ಬಾರಿಗೆ ಈ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಒಳ್ಳೆಯ ಪ್ರಶಾಂತವಾದ ಮತ್ತು ಪವಿತ್ರವಾದ ಸ್ಥಳ ಇದಾಗಿದೆ. ಯಾವಾಗಲೂ ಈ ಭಾಗದ ಕೆರೆ ತುಂಬಿ ತುಳುಕಲಿ. ಈ ಕೆರೆ ದೇವಾನು ದೇವತೆಗಳ ವಿಗ್ರಹಗಳು, ಮೂರ್ತಿಗೆ ಸ್ನಾನ ಮಾಡಿಸುವ ಪವಿತ್ರ ಸ್ಥಳವಾಗಿದೆ. ನಮ್ಮ ಮನೆಯ ನೂತನ ಗೃಹಪ್ರವೇಶದಲ್ಲಿ 5 ಪುಣ್ಯ ಕ್ಷೇತ್ರಗಳ ನೀರನ್ನು ಪೂರ್ಣಕುಂಭದಲ್ಲಿ ಇಟ್ಟಿದ್ದೆ. ಅದರಲ್ಲಿ ಈ ಮಲ್ಲಾಘಟ್ಟ ಕೆರೆಯ ನೀರೂ ಸಹ ಒಂದು ಎಂದರು.

ಪ್ರಮಾಣವಚನವನ್ನು ಹಿಂದೂ ಶಾಸ್ತ್ರದ ಪ್ರಕಾರ ಸ್ವೀಕಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ರಾಜಕಾರಣ ಮುಖ್ಯ ಅಲ್ಲ. ಭಕ್ತನಿಗೂ, ಭಗವಂತನಿಗೂ ವ್ಯವಹಾರ ಮಾಡೋವಂತದ್ದು ದೇವಾಲಯ ಮತ್ತು ದೇವರು. ಪ್ರಮಾಣವಚನಕ್ಕೆ ಎಲ್ಲಾ ಧರ್ಮದ ಧಾರ್ಮಿಕ ಮುಖ್ಯಸ್ಥರನ್ನು ಆಹ್ವಾನಿಸಿದ್ದೆ. ಏನೇ ಆದರೂ, ನಮ್ಮ ಧರ್ಮವನ್ನು ಬಿಡೋಕೆ ಆಗುತ್ತಾ ಎಂದರು.

ಮಲ್ಲಘಟ್ಟದ ಗಂಗಾಧರೇಶ್ವರನಿಗೆ ಹರಕೆ ಹೊತ್ತಿದ್ದೀರಾ ಎಂಬ ಪ್ರಶ್ನೆಗೆ, ಹರಕೆ ಏನಿಲ್ಲ, ಇದು ನನ್ನ ಭಾವನೆ, ನನ್ನ ಭಕ್ತಿ. ಜನರಿಗೆ ಒಳ್ಳೆದಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದರು.

ಡಿಕೆಶಿಗೆ ಅದ್ಧೂರಿ ಸ್ವಾಗತ:

ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ಗೆ ಎಲ್ಲೆಡೆ ಭವ್ಯ ಸ್ವಾಗತ ಕೋರಲಾಯಿತು. ಭೇಟಿ ವೇಳೆ, ಡಿಕೆ ಅಭಿಮಾನಿಗಳು, ‘ಡಿಕೆ, ಡಿಕೆ’ ಎಂಬ ಜಯಘೋಷದೊಂದಿಗೆ ಪಟಾಕಿ ಸಿಡಿಸಿ, ಹೂವಿನ ಮತ್ತು ಹಣ್ಣಿನ ಹಾರ ಹಾಕಿ ಅಭಿನಂದಿಸಿದರು. ಕೆಲವೆಡೆ ಬೃಹತ್‌ ಕ್ರೇನ್ ಬಳಸಿ ಹೂವು, ಹಣ್ಣಿನ ಹಾರ ಹಾಕಲಾಯಿತು. ಈ ವೇಳೆ, ದೂರದಿಂದಲೇ ಹಾರವನ್ನು ಸ್ವೀಕಾರ ಮಾಡಿದ ಡಿಕೆ, ಸಾರ್ವಜನಿಕರತ್ತ ಕೈಬೀಸಿ ಅಭಿನಂದಿಸಿದರು.

ರಸ್ತೆಯ ಇಕ್ಕೆಲಗಳಲ್ಲಿ ಜಮಾವಣೆಗೊಂಡಿದ್ದ ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನ ಹತೋಟಿಗೆ ತರುವಲ್ಲಿ ಪೊಲೀಸರು ಹರಸಹಸ ಪಡಬೇಕಾಯಿತು.