ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಆಪ್ತನ ಗನ್ ಮ್ಯಾನ್ ನಡೆಸಿದ ಗುಂಡಿನ ದಾಳಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಾನೂನುಬಾಹಿರವಾಗಿ ಎರಡು ಬಾರಿ ನಡೆಸಲಾಗಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರವಾಗಿ ಆಪಾದಿಸಿದ್ದಾರೆ.

 ಬೆಂಗಳೂರು : ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಆಪ್ತನ ಗನ್ ಮ್ಯಾನ್ ನಡೆಸಿದ ಗುಂಡಿನ ದಾಳಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಾನೂನುಬಾಹಿರವಾಗಿ ಎರಡು ಬಾರಿ ನಡೆಸಲಾಗಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರವಾಗಿ ಆಪಾದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದೂ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸ್ವಪಕ್ಷದ ಕಾರ್ಯಕರ್ತ ರಾಜಶೇಖರ್‌ನ ಕೊಲೆ ಪ್ರಕರಣ ಮುಚ್ಚಿ ಹಾಕಲು ಕಾಂಗ್ರೆಸ್‌ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಇದು ನಾಚಿಕೆಗೇಡು. ಅದಕ್ಕಾಗಿ ಆ ನತದೃಷ್ಟ ಕಾರ್ಯಕರ್ತನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆಗೆ ಒಳಡಿಸಲಾಗಿದೆ ಎಂದು ಹರಿಹಾಯ್ದರು.

ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ಏನು ಫಲಿತಾಂಶ ಹೊರಬಂತು? ಎರಡನೇ ಮರಣೋತ್ತರ ಪರೀಕ್ಷೆಯಲ್ಲಿ ಏನು ಮಾಹಿತಿ ಇದೆ? ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು. ನನಗೆ ಬಂದಿರುವ ಮಾಹಿತಿ ಪ್ರಕಾರ ರಾಜಶೇಖರ ಅವರ ದೇಹವನ್ನು ಎರಡು ಸಲ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಅವರು ಹೇಳಿದರು.

ಪೋಸ್ಟ್‌ ಮಾರ್ಟಂಗೆ ಒತ್ತಡ ಹೇರಿದ್ದು ಯಾರು?:

ಎರಡನೇ ಬಾರಿ ಪೋಸ್ಟ್ ಮಾರ್ಟಮ್ ಯಾಕೆ ಮಾಡಿದಿರಿ? ಎರಡನೇ ಬಾರಿ ಪೋಸ್ಟ್ ಮಾರ್ಟಮ್ ಮಾಡಲಿಕ್ಕೆ ಯಾರು ಒತ್ತಡ ಹೇರಿದರು? ಮತ್ತೊಂದು ಬಾರಿ ಪರೀಕ್ಷೆಗೆ ಯಾರು ಆದೇಶ ಮಾಡಿದರು? ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ತಮಗೆ ಅನುಕೂಲಕರ ವರದಿ ಬರಲಿಲ್ಲ ಎಂದು ಅಲ್ಲಿಗೆ ‘ಸೂರ್ಯನ ಬೆಳಕು’ ಏನಾದರೂ ಬಿದ್ದಿತ್ತಾ ಎಂದು ಖಾರವಾಗಿ ಪ್ರಶ್ನಿಸಿದರು.

ನೀವು ಸತ್ಯವಂತರಲ್ಲವೇ? ದಿನನಿತ್ಯ ಜಾಹೀರಾತುಗಳಲ್ಲಿ ‘ಸತ್ಯಮೇಯ ಜಯತೇ’ ಎಂದು ಕೊಚ್ಚಿಕೊಳ್ಳುತ್ತೀರಿ. ಈಗ ಸತ್ಯ ಹೇಳಿ. ರಾಜ್ಯದ ಜನತೆಗೆ ಸತ್ಯ ಏನೆಂದು ತಿಳಿಸಬೇಕಲ್ಲವೇ? ಎರಡನೇ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ ಎಂಬುದನ್ನು ಹೇಳಿ? ಮುಖ್ಯಮಂತ್ರಿಗಳೇ ಜನತೆಗೆ ಸತ್ಯವನ್ನು ಹೇಳಿ ಎಂದು ಆಗ್ರಹಿಸಿದರು.

ಜನಾರ್ದನ ರೆಡ್ಡಿ ಸಿಲುಕಿಸಲು ಷಡ್ಯಂತ್ರ:

ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ದೇಹದಲ್ಲಿ ಸಣ್ಣಪುಟ್ಟ ಚೂರು ಪತ್ತೆಯಾಯಿತು ಎಂಬ ಮಾಹಿತಿ ಇದೆ. ಎರಡನೇ ಶವ ಪರೀಕ್ಷೆ ಮಾಡಿಸುವ ಮೂಲಕ ಸ್ವತಃ ಜನಾರ್ದನ ರೆಡ್ಡಿ ಅವರೇ ಗುಂಡು ಹೊಡೆದಿದ್ದು ಎಂದು ಕಥೆ ಕಟ್ಟಿ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ್ಯ ಮಾಡಿದ್ದಾರೆ. ಆದರೆ, ಎರಡನೇ ಮರಣೋತ್ತರ ಪರೀಕ್ಷೆ ಈ ಸರ್ಕಾರಕ್ಕೆ, ಸೂರ್ಯನ ಬೆಳಕು ಬೀಳಿಸಲು ಹೋದವರಿಗೆ ಉಲ್ಟಾ ಹೊಡೆದಿದೆ ಎಂದು ಹೇಳಿದರು.

ಸರ್ಕಾರದ ತನಿಖೆ ನಿರುಪಯುಕ್ತ:

ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಹೀಗಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ನಮ್ಮ ಪಕ್ಷ ಶಾಸಕ ಭರತ್ ರೆಡ್ಡಿ ಪರ ನಿಲ್ಲುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳುತ್ತಾರೆ. ಸತೀಶ್‌ರೆಡ್ಡಿ ಗನ್ ಮ್ಯಾನ್ ಗನ್‌ನಿಂದ ಫೈಯರ್ ಆಗಿದೆ ಅಂತ ಸ್ವತಃ ಸಿಎಂ ಅವರೇ ಹೇಳಿದ್ದಾರೆ. ಆದರೆ ಗೃಹ ಸಚಿವರು ಆತನ ಬಂಧನಕ್ಕೆ ಆದೇಶ ಮಾಡದೇ ಹೇಳಿಕೆಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಹೀಗಿರುವಾಗ ಈ ಸರ್ಕಾರ ಯಾವ ರೀತಿ ತನಿಖೆ ಮಾಡುತ್ತದೆ? ಇವರ ತನಿಖೆಯಿಂದ ಸತ್ಯಾಂಶ ಹೊರಕ್ಕೆ ಬರಲು ಸಾಧ್ಯವೇ ಎಂದು ಸಚಿವರು ಪ್ರಶ್ನಿಸಿದರು.

ಹೆಚ್ಚುವರಿ ಎಸ್ಪಿ, ಐಜಿ ಅಮಾನತು ಏಕಿಲ್ಲ?:

ಕರ್ತವ್ಯ ಲೋಪ ಎಂದು ಎಸ್‌ಪಿ ಅವರನ್ನು ಅಮಾನತು ಮಾಡಿದ್ದಾರೆ. ಹಾಗಾದರೆ, ಹೆಚ್ಚುವರಿ ಎಸ್ಪಿ, ಐಜಿ ಅವರು ಕೂಡ ಕರ್ತವ್ಯ ಲೋಪ ಎಸಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣದಲ್ಲಿ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ಈಗ ಬಳ್ಳಾರಿಯಲ್ಲಿ ಕೇವಲ ಎಸ್‌ಪಿ ಮೇಲೆ ಮಾತ್ರ ಕ್ರಮ ಯಾಕೆ? ಅನೇಕ ವರ್ಷಗಳಿಂದ ಅಲ್ಲಿಯೇ ಬೇರು ಬಿಟ್ಟುಕೊಂಡಿರುವ ಅಧಿಕಾರಿಗಳ ತಪ್ಪೇ ಇಲ್ಲವೇ ಎಂದು ಸಚಿವರು ಕಿಡಿಕಾರಿದರು.

ಯೂಸ್‌ ಲೆಸ್‌ ಗೃಹ ಸಚಿವ:

ಯೂಸ್ ಲೆಸ್ ಗೃಹ ಸಚಿವರು ರಾಜ್ಯದಲ್ಲಿ ಕೆಲಸ ಮಾಡ್ತಿದ್ದಾರೆ. ಅವರಿಂದ ಏನೂ ಆಗುವುದಿಲ್ಲ. ಗೃಹ ಇಲಾಖೆ ಸತ್ತಿದೆಯೋ ಬದುಕಿದೆಯೋ ಎಂಬುದು ಗೊತ್ತಿಲ್ಲ. ಬಳ್ಳಾರಿಗೆ ಅಷ್ಟು ಗನ್ ಗಳು ಎಲ್ಲಿಂದ, ಹೇಗೆ ಬಂದವು? ಅವೇನು ಪಾಕಿಸ್ತಾನದಿಂದ ಬಂದವಾ? ಇದಕ್ಕೆ ಡಿ.ಕೆ.ಶಿವಕುಮಾರ್‌ ಉತ್ತರ ಕೊಡಲಿ. ಕೊಲೆಗಡುಕರಿಗೆ ಸರ್ಕಾರ ರಕ್ಷಣೆ ಕೊಡುತ್ತಿದೆ. ಇದು ಕೊಲೆಗಡುಕರಿಗಾಗಿ ಇರುವ ಸರ್ಕಾರ ಎಂದು ಇದೇ ವೇಳೆ ಕುಮಾರಸ್ವಾಮಿ ಕಿಡಿಕಾರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬುತ್ತಿದೆ. ಜನರೇ ನಿಮ್ಮನ್ನು ಸರ್ವನಾಶ ಮಾಡುತ್ತಾರೆ. ಈ ದುರ್ಘಟನೆಗೆ ಕಾರಣನಾದ ಶಾಸಕನ ಆಪ್ತ ಸತೀಶ್ ರೆಡ್ಡಿಯನ್ನು ಈವರೆಗೂ ಯಾಕೆ ಬಂಧಿಸಿಲ್ಲ? ಅದರ ಬದಲು ರಾಜಾತಿಥ್ಯ ನೀಡಿ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೀರಾ ಎಂದು ಕೇಳಿದರು.

ಐಟಿ ಇಲಾಖೆ ಏನು ಮಾಡ್ತಿದೆ?

ಮೃತ ಕಾರ್ಯಕರ್ತನ ಕುಟುಂಬಕ್ಕೆ ಚೀಲದಲ್ಲಿ ತುಂಬಿಕೊಂಡು ಪರಿಹಾರ ಕೊಟ್ಟಿದ್ದೀರಲ್ಲ. ಆ ಹಣ ಯಾರದು ಎಂದು ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಯಾವ ಖಾತೆಯಿಂದ ಆ ಹಣವನ್ನು ನೀಡಿದ್ದೀರಿ? ಅದಕ್ಕೆ ಆದಾಯ ತೆರಿಗೆ ಲೆಕ್ಕ ಇದೆಯೇ? ಅದು ಎಲ್ಲಿಂದ ಬಂತು? 25 ಲಕ್ಷ ರು. ಸರ್ಕಾರದ ಹಣವೇ, ಇಲ್ಲವೇ ಖಾಸಗಿ ಹಣವೇ ಎಂಬುದು ಗೊತ್ತಾಗಬೇಕಲ್ಲವೇ? ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ ಎಂದರು.

ತಾನು ಮುಖ್ಯಮಂತ್ರಿ ಆಗುವಾಗ ಒಂದು ಮತ ಕೈ ತಪ್ಪಬಾರದು ಎಂಬ ಕಾರಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶಾಸಕ ನಾರಾ ಭರತ್ ರೆಡ್ಡಿ ಪರ ಬ್ಯಾಟ್ ಬೀಸುತ್ತಿದ್ದಾರೆ.

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ.ಎರಡೆರಡು ಬಾರಿ ಮೃತನ ಪೋಸ್ಟ್ ಮಾರ್ಟಮ್?:

ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದ ಬ್ಯಾನರ್‌ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಅವರ ಮೃತದೇಹದ ಪರೀಕ್ಷೆಯನ್ನು ಎರಡೆರಡು ಬಾರಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಜನವರಿ 2, ಶುಕ್ರವಾರ ಬೆಳಗ್ಗೆ 6 ಗಂಟೆಗೆ ಮೃತದೇಹದ ಪೋಸ್ಟ್ ಮಾರ್ಟಮ್ ಮಾಡಲಾಗಿತ್ತು. ಬುಲೆಟ್ ಬಿದ್ದ ಸ್ಥಳ ಮಾರ್ಕ್ ಮಾಡಿ, ಒಂದಷ್ಟು ಕಾಟ್ರೇಜ್ ಹೊರ ತೆಗೆಯಲಾಗಿತ್ತು. ಯಾವಾಗ ಪ್ರಕರಣ ಗಂಭೀರ ಸ್ವರೂಪ ಪಡೆಯಿತೋ ಆಗ ಮತ್ತೊಮ್ಮೆ 10 ಗಂಟೆಗೆ ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಆಗ ಬುಲೆಟ್‌ನ ತುಂಡು, ತುಂಡುಗಳನ್ನು ತೆಗೆದು, ಅವುಗಳನ್ನು ಎಫ್‌ಎಸ್‌ಎಲ್‌ ವರದಿಗೆ ಕಳುಹಿಸಲಾಗಿದೆ ಎಂಬ ಸಂಗತಿ ಬಯಲಾಗಿದೆ. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಮತ್ತೆ 2 ಗುಂಡಿನ ಶೆಲ್‌ ಪತ್ತೆ : ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಳ್ಳಾರಿಗೆ ಭೇಟಿ ನೀಡಿದ ಹುಬ್ಬಳ್ಳಿಯ ಎಫ್‌ಎಸ್‌ಎಲ್‌, ಬಾಂಬ್‌ ನಿಷ್ಕ್ರಿಯ ದಳ ನಗರದ ಸಿರುಗುಪ್ಪ ರಸ್ತೆಯಲ್ಲಿನ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸ ಹಾಗೂ ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ಎರಡು ಜೀವಂತ ಗುಂಡಿನ ಶೆಲ್‌ಗಳು ಪತ್ತೆಯಾಗಿವೆ.

ಟಿಯರ್‌ ಗ್ಯಾಸ್‌ ಬಿದ್ದ ಸ್ಥಳ, ಸೋಡಾ ಬಾಟಲ್‌ ಪತ್ತೆಯಾದ ಸ್ಥಳವನ್ನು ಈ ತಂಡ ಮಾರ್ಕ್‌ ಮಾಡಿತು. ಇದೇ ವೇಳೆ ರೆಡ್ಡಿ ಅವರ ಗ್ಲಾಸ್‌ ಹೌಸ್‌ನ ಕಚೇರಿ ಹೊರ ಭಾಗದಲ್ಲಿ ಅಳವಡಿಸಿರುವ ಗಾಜು ಒಡೆದಿರುವುದನ್ನು ಎಫ್‌ಎಸ್‌ಎಲ್ ಹಾಗೂ ಬಾಂಬ್ ನಿಷ್ಕ್ರಿಯ ತಂಡ ಪರಿಶೀಲಿಸಿತು. ಜೊತೆಗೆ, ಜನಾರ್ದನ ರೆಡ್ಡಿ ನಿವಾಸದ ಬಳಿ ಹಾಗೂ ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿತು. ಶೋಧ ಕಾರ್ಯ ವೇಳೆ ಪತ್ತೆಯಾದ ಗುಂಡು, ಬ್ಯಾನರ್ ಗಲಾಟೆ ವೇಳೆ ರಸ್ತೆ ಬದಿಯಲ್ಲಿ ಶಾಸಕ ಭರತ್‌ ರೆಡ್ಡಿ ವಾಸ್ತವ್ಯ ಹೂಡಿದ್ದ ಸ್ಥಳದಲ್ಲಿ ಪತ್ತೆಯಾಗಿದೆ ಎನ್ನಲಾಗಿದ್ದು, ಇದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇದು ಪರಸ್ಪರ ಗುಂಡಿನ ದಾಳಿ ನಡೆದಿರಬಹುದೇ ಎಂಬ ಗುಮಾನಿ ಮೂಡಿಸಿದ್ದು, ತನಿಖೆಯಿಂದ ಸತ್ಯಾಂಶ ಗೊತ್ತಾಗಲಿದೆ. 

ಇದೇ ವೇಳೆ, ಬ್ಯಾನರ್‌ ಗಲಾಟೆ ವೇಳೆ ನಡೆದ ಗುಂಪು ಘರ್ಷಣೆಯಲ್ಲಿ ಸ್ಫೋಟಕ ಬಳಕೆಯಾದ ಬಗ್ಗೆ, ಫೈರಿಂಗ್‌ಗೆ ಸಂಬಂಧಿಸಿದಂತೆ ಬುಲೆಟ್‌ ಪತ್ತೆ ಹಚ್ಚಲು ಎನ್‌ಎಲ್‌ಜೆಡಿ ಮತ್ತು ಡಿಎಸ್‌ಎಂಡಿ ಮಷಿನ್‌ಗಳ ಮೂಲಕ ಶೋಧ ನಡೆಸಲಾಯಿತು. ವೀಡಿಯೋ ನೀಡಲು ಮನವಿ:ಶಾಸಕ ಜನಾರ್ದನ ರೆಡ್ಡಿ ಮನೆಯ ಮುಂದೆ ಜ.1ರಂದು ಬ್ಯಾನರ್‌ ಹರಿದ ವಿಚಾರವಾಗಿ ನಡೆದ ಗಲಾಟೆಯ ಕುರಿತು ರೆಕಾರ್ಡ್‌ ಮಾಡಿದ ದೃಶ್ಯಾವಳಿಗಳು ಇದ್ದಲ್ಲಿ ಸಾರ್ವಜನಿಕರು ಹೆಚ್ಚಿನ ತನಿಖೆಗಾಗಿ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ತಮ್ಮ ಮೊಬೈಲ್‌ ಹಾಗೂ ಇತರ ಎಲೆಕ್ಟಾನಿಕ್‌ ಸಾಧನಗಳಲ್ಲಿ ರೆಕಾರ್ಡಿಂಗ್‌ ಮಾಡಿದ್ದ ದೃಶ್ಯಾವಳಿಗಳು ಇದ್ದರೆ ಹೆಚ್ಚಿನ ತನಿಖೆಗಾಗಿ ವಾಟ್ಸ್‌ಆ್ಯಪ್‌ ಸಂಖ್ಯೆ 9480803045 ನಂಬರ್‌ಗೆ ಅಥವಾ ಖುದ್ದಾಗಿ ಠಾಣೆಗೆ ಹಾಜರಾಗಿ ಮಾಹಿತಿ ನೀಡಬಹುದು ಎಂದು ಪೊಲೀಸರು ಕೋರಿದ್ದಾರೆ.