ಚನ್ನಪಟ್ಟಣ: ಕೂಡ್ಲೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ, ಜನಗಳ ಓಡಾಡಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿರುವ ಕಾರಣ, ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಅನುಮೋದನೆ ದೊರೆತಿದ್ದು, ನಾವೆಲರೂ ಚರ್ಚೆ ಮಾಡಿ ಯಾವುದೇ ಸಮಸ್ಯೆ ಆಗದಂತೆ ಪರಿಹರಿಸಿಕೊಳ್ಳಬೇಕಿದೆ ಎಂದು ಶಾಸಕ ಯೋಗೇಶ್ವರ್ ತಿಳಿಸಿದರು
ಚನ್ನಪಟ್ಟಣ: ಕೂಡ್ಲೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ, ಜನಗಳ ಓಡಾಡಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿರುವ ಕಾರಣ, ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಅನುಮೋದನೆ ದೊರೆತಿದ್ದು, ನಾವೆಲರೂ ಚರ್ಚೆ ಮಾಡಿ ಯಾವುದೇ ಸಮಸ್ಯೆ ಆಗದಂತೆ ಪರಿಹರಿಸಿಕೊಳ್ಳಬೇಕಿದೆ ಎಂದು ಶಾಸಕ ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಕೂಡ್ಲೂರು ಗ್ರಾಮದ ಮುಖ್ಯ ರಸ್ತೆಯ ಅಗಲೀಕರಣದ ಸಂಬಂಧ ಗ್ರಾಮಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಸರ್ವೆ ಹಾಗೂ ರಾಜ್ಯ ಹೆದ್ದಾರಿಯ ಮಾರ್ಗಸೂಚಿ ಅನ್ವಯ ರಸ್ತೆಯ ಎರಡೂ ಬದಿಗಳಲ್ಲಿ ತಲಾ ೧೮ ಅಡಿ ಜಾಗ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆ ಇಡಲಾಗಿತ್ತು. ಆದರೆ ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎರಡೂ ಬದಿಗಳಲ್ಲಿ ೧೫ ಅಡಿಗೆ ಇಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ರಸ್ತೆ ಅಗಲೀಕರಣದ ಭೂಸ್ವಾಧೀನವಾಗುವ ಜಾಗಕ್ಕೆ ಸರ್ಕಾರದ ನಿಯಮಾನುಸಾರ ಪರಿಹಾರ ನೀಡಲಾಗುವುದು. ಪ್ರಸ್ತುತ ದರ ಆಧಾರವಾಗಿಸಿಕೊಂಡು, ಅದರ ಮೂರು ಪಟ್ಟು ಪರಿಹಾರ ನೀಡುವ ಪ್ರಸ್ತಾವನೆ ಇದ್ದು, ಸಬ್ ರಿಜಿಸ್ಟ್ರಾರ್ ಮೌಲ್ಯಮಾಪನದ ಪ್ರಕಾರವೂ ಪರಿಹಾರ ನಿಗದಿಪಡಿಸಲಾಗುವುದು ಎಂದು ಶಾಸಕರು ವಿವರಿಸಿದರು.
ರಸ್ತೆ ಅಗಲೀಕರಣದಲ್ಲಿ ಸುಮಾರು ೧೧೬ ಜನ ಮನೆ ಕಳೆದುಕೊಳ್ಳಲಿದ್ದು, ಅವರ ಅಹವಾಲು ಸ್ವೀಕರಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಭೆ ನಡೆಸಲಾಗಿದೆ. ರಸ್ತೆ ಅಗಲೀಕರಣ ಅನಿವಾರ್ಯವಾಗಿದ್ದು, ರಾಜ್ಯ ಸರ್ಕಾರದ ಮಾನದಂಡಗಳನ್ನು ಪಾಲಿಸಬೇಕಾಗಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ಕುಟುಂಬಕ್ಕೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.ಭೂಸ್ವಾಧೀನ ಪ್ರಕ್ರಿಯೆ ಗ್ರಾಮಸ್ಥರ ಒಪ್ಪಿಗೆಯೊಂದಿಗೆ ಹಾಗೂ ಕಾನೂನುಬದ್ಧವಾಗಿ ನಡೆಯಬೇಕಾಗಿದೆ. ಗ್ರಾಮಸ್ಥರು ಸಹಕಾರ ನೀಡಿದರೆ ರಸ್ತೆ ಅಗಲೀಕರಣ ಕಾಮಗಾರಿ ಸುಗಮವಾಗಿ ಕೈಗೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ ಎಲ್ಲರೂ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಯೋಗೇಶ್ವರ್ ಮನವಿ ಮಾಡಿದರು.
ಸಭೆಯಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಭೂಸ್ವಾಧೀನಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಜಾಗದ ಮಾಲೀಕರು ಉಪಸ್ಥಿತರಿದ್ದು, ಅಹವಾಲುಗಳನ್ನು ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದರು.ಪೋಟೊ೨ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ರಸ್ತೆ ಆಗಲೀಕರಣದ ಸಂಬಂಧ ಶಾಸಕ ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಭೆ ನಡೆಯಿತು.