ಹೆದ್ದಾರಿಯುದ್ದಕ್ಕೂ ಧೂಳೆಬ್ಬಿಸುತ್ತಿರುವ ಅಗಲೀಕರಣ ಕಾಮಗಾರಿ

| Published : Nov 15 2024, 12:32 AM IST

ಸಾರಾಂಶ

ಮಳೆ ನಿಂತು ವಾರ ಕಳೆದರೂ ರಸ್ತೆಯ ದುಸ್ಥಿತಿ ಸುಧಾರಿಸಿಲ್ಲ. ಧೂಳಿನ ಸಮಸ್ಯೆಯಿಂದಾಗಿ ಜನಾಕ್ರೋಶ ವ್ಯಕ್ತವಾಗುತ್ತಿರುವ ಕಾರಣಕ್ಕೆ ದಿನಕ್ಕೆ ಒಂದೆರಡು ಬಾರಿ ನೀರು ಹಾಯಿಸುವ ಕಾರ್ಯ ನಡೆಸಲಾಗುತ್ತಿದೆಯಾದರೂ ಸುಡವ ಬಿಸಿಲ ಝಳಕ್ಕೆ ನೀರು ತಕ್ಷಣವೆ ಆವಿಯಾಗಿ ಮತ್ತೆ ಧೂಳು ವ್ಯಾಪಿಸುತ್ತಿದೆ.

ಉಲುಕ್ ಉಪ್ಪಿನಂಗಡಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ನಿರಂತರ ಮಳೆಯ ಕಾರಣಕ್ಕೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ , ವಿಳಂಬವಾಗಿ ನಡೆಯುತ್ತಿದೆ. ಮಳೆ ನಿಂತ ಬಳಿಕ ಇದೀಗ ಧೂಳಿನ ಸಮಸ್ಯೆ ನಿತ್ಯ ನಿರಂತರ ಕಾಡುತ್ತಿರುವುದರಿಂದ ಎಲ್ಲೆಡೆ ಅನಾರೋಗ್ಯದ ಸಮಸ್ಯೆ ಕಾಣಿಸಿದೆ.

ಹೆದ್ದಾರಿ ಅಗಲೀಕರಣದ ಕಾರಣಕ್ಕೆ ಹಲವೆಡೆ ಮಣ್ಣು ಅಗೆಯಲಾಗಿದೆ. ಇನ್ನೂ ಕೆಲವೆಡೆ ಎತ್ತರಿಸಿದ ರಸ್ತೆ ನಿರ್ಮಾಣಕ್ಕಾಗಿ ಸರ್ವೀಸ್ ರಸ್ತೆಗಳನ್ನೂ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಸುರಿದ ಅತೀ ಮಳೆಗೆ ಅದೆಲ್ಲವೂ ಕೆಟ್ಟು ಹೋಗಿ ಜಲ್ಲಿ ಎದ್ದು ಬಂದಿದೆ. ಹದಗೆಟ್ಟ ರಸ್ತೆಗೆ ಡಾಮರ್ ಹಾಕಿ ದುರಸ್ತಿ ಕಾರ್ಯ ಮಾಡಿ ಎಂದು ಬೇಡಿಕೆ ಇಟ್ಟಾಗಲೆಲ್ಲಾ ಮಳೆ ನಿಲ್ಲಲಿ ಮತ್ತೆ ದುರಸ್ತಿ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಮಳೆ ನಿಂತು ವಾರ ಕಳೆದರೂ ರಸ್ತೆಯ ದುಸ್ಥಿತಿ ಸುಧಾರಿಸಿಲ್ಲ. ಧೂಳಿನ ಸಮಸ್ಯೆಯಿಂದಾಗಿ ಜನಾಕ್ರೋಶ ವ್ಯಕ್ತವಾಗುತ್ತಿರುವ ಕಾರಣಕ್ಕೆ ದಿನಕ್ಕೆ ಒಂದೆರಡು ಬಾರಿ ನೀರು ಹಾಯಿಸುವ ಕಾರ್ಯ ನಡೆಸಲಾಗುತ್ತಿದೆಯಾದರೂ ಸುಡವ ಬಿಸಿಲ ಝಳಕ್ಕೆ ನೀರು ತಕ್ಷಣವೆ ಆವಿಯಾಗಿ ಮತ್ತೆ ಧೂಳು ವ್ಯಾಪಿಸುತ್ತಿದೆ. ಡಾಮರ್ ಹಾಕಿ ಧೂಳಿನಿಂದ ಮುಕ್ಕಿ ನೀಡಿ: ನಾಗೇಶ್ ನಾಯಕ್

ದಿನದಲ್ಲಿ ಒಂದೆರಡು ಬಾರಿ ನೀರು ಹಾಕಿದಾಕ್ಷಣ ಧೂಳು ನಿವಾರಣೆಯಾಗದು. ಉಪ್ಪಿನಂಗಡಿ ಪೇಟೆಯ ಪರಿಸರದಲ್ಲಿ ಧೂಳು ಅಪಾಯಕಾರಿ ಮಟ್ಟದಲ್ಲಿದೆ. ಆಸ್ಪತ್ರೆಗೆ ಬರುವ ಮಕ್ಕಳು, ಶಾಲೆಯಲ್ಲಿನ ಮಕ್ಕಳು ಧೂಳಿನ ಸಮಸ್ಯೆಗೆ ಸಿಲುಕಿದ್ದಾರೆ. ಅವರ ಹಿತಕ್ಕಾಗಿಯಾದರೂ ದೂಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲೆಲ್ಲಿ ಡಾಮರ್ ಕಿತ್ತು ಹೋಗಿದೆಯೋ ಅಲ್ಲಲ್ಲಿ ದೂಳು ಏಳುತ್ತಿದೆ. ತೆಳುವಾಗಿಯಾದರೂ ಡಾಮರ್ ಹಾಕಿ ರಸ್ತೆಯನ್ನು ಧೂಳಿನಿಂದ ಮುಕ್ತಗೊಳಿಸಲಿ ಎಂದು ಯುವ ಉದ್ಯಮಿ ನಾಗೇಶ್ ನಾಯಕ್ ಅಗ್ರಹಿಸಿದ್ದಾರೆ. ನೀರು ಹಾಕಲು ಸೂಚಿಸಲಾಗಿದೆ: ಗ್ರಾ.ಪಂ. ಉಪಾಧ್ಯಕ್ಷೆ

ಧೂಲಿನ ಸಮಸ್ಯೆಯ ಬಗ್ಗೆ ನಾಗರಿಕರಿಂದ ವ್ಯಾಪಕ ದೂರುಗಳು ಬರುತ್ತಿದೆ. ದೂಳಿನಿಂದಾಗಿ ಹಲವಾರು ಮಂದಿ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಪರ್ಯಾಯ ಕ್ರಮ ಜರುಗಿಸುವ ವರೆಗೆ ಧೂಳು ಪ್ರಸಹರಿಸದಂತೆ ನಿರಂತರ ನೀರು ಹಾಯಿಸಲು ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ತಿಳಿಸಿದ್ದಾರೆ.

ಅಧಿಕಾರಿಗಳು ದೂಳಿನ ಸಮಸ್ಯೆಯನ್ನು ಅರಿಯಿರಿ: ಫಾರೂಕ್ ಜಿಂದಗಿ

ಅಭಿವೃದ್ಧಿ ಕಾರ್ಯಕ್ಕೆ ನಮ್ಮ ಬೆಂಬಲವಿದೆ. ಆದರೆ ಕಾಮಗಾರಿಯಲ್ಲಿನ ಲೋಪದಿಂದಾಗಿ ವಾಹನಗಳ ಸಂಚಾರದಿಂದ ಉಂಟಾಗುತ್ತಿರುವ ಧೂಳಿನ ಸಮಸ್ಯೆ ತೀವ್ರವಾಗಿದೆ. ಮಕ್ಕಳು ಧೂಳಿನಿಂದ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಅಧಿಕಾರಿಗಳು ಒಂದರ್ಧ ಗಂಟೆ ಉಪ್ಪಿನಂಗಡಿ ಪೇಟೆಯಲ್ಲಿದ್ದು ಧೂಳಿನ ಗಂಭೀರತೆಯನ್ನು ಅರಿಯಲಿ ಎಂದು ಉಪ್ಪಿನಂಗಡಿ ಮಾದರಿ ಶಾಲಾ ಎಸ್‌ಡಿಎಂಸಿ ಸದಸ್ಯ ಫಾರೂಕ್ ಜಿಂದಗಿ ಹೇಳುತ್ತಾರೆ.