ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ವ್ಯಾಪ್ತಿಯ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರಿದ ಕಾರಣ ಕಾವೇರಿ ನದಿ ಹರಿವಿನ ಪ್ರಮಾಣ ತೀವ್ರ ಹೆಚ್ಚಳವಾಗಿದೆ. ನಾಪೋಕ್ಲು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ನದಿ ,ತೊರೆ, ಗದ್ದೆ ,ತೋಟಗಳು ಜಲವೃತಗೊಂಡಿದೆ. ಕೆಲವು ಕಡೆ ರಸ್ತೆಯ ಮೇಲೆ ಪ್ರವಾಹ ಹರಿಯುತ್ತಿದ್ದು ಶುಕ್ರವಾರವೂ ರಸ್ತೆ ಸಂಪರ್ಕ ಕಡಿತಗೊಂಡಿದೆ.ನಾಪೋಕ್ಲು - ಮೂರ್ನಾಡು ಸಂಪರ್ಕ ರಸ್ತೆಯಲ್ಲಿ ಕಳೆದೆರಡು ದಿನಗಳಿಂದ ಕಾವೇರಿ ಪ್ರವಾಹದಿಂದಾಗಿ 5-6 ಅಡಿ ನೀರಿದ್ದು ಕೊಟ್ಟಮುಡಿ ಜಂಕ್ಷನ್ ನಿಂದಲೇ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದೆ. ಈ ಕಾರಣದಿಂದಾಗಿ ಪರ್ಯಾಯ ಸಂಪರ್ಕ ರಸ್ತೆಯನ್ನು ಸಾರ್ವಜನಿಕರ ಬಳಸುತ್ತಿದ್ದಾರೆ. ನಾಪೋಕ್ಲು ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ವಾಹನಗಳು ಸಂಚರಿಸುತ್ತಿವೆ. ನಾಪೋಕ್ಲು - ಬೆಟಗೇರಿ, ಮಡಿಕೇರಿ ಸಂಪರ್ಕಿಸುವ ರಸ್ತೆಯ ಕೊಟ್ಟಮುಡಿಯಲ್ಲಿ ಕಾವೇರಿ ಪ್ರವಾಹದಿಂದ ರಸ್ತೆ ಮುಳುಗಡೆಯಾಗುವ ಅಪಾಯ ಮಟ್ಟದಲ್ಲಿದೆ.
ಅಪಾಯ ಮಟ್ಟ ಮೀರಿ ಪ್ರವಾಹ ಹರಿಯುತ್ತಿರುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಮೊನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.ಕೊಟ್ಟಮುಡಿ ಜಂಕ್ಷನ್ ಸಮೀಪದಲ್ಲಿ ಬಾಡಿಗೆ ಮನೆಗಳನ್ನು ಕಾವೇರಿ ನದಿ ಪ್ರವಾಹ ಆವರಿಸಿದ್ದು ಶುಕ್ರವಾರ ಮನೆ ಮಂದಿ ಹಾಗೂ ಮನೆಯ ವಸ್ತುಗಳನ್ನು ಬೇರೆಕಡೆ ಸ್ಥಳಾಂತರಿಸಿ ಮನೆ ಖಾಲಿ ಮಾಡುತ್ತಿರುವುದು ಕಂಡು ಬಂತು.
ಮನೆ ತೆರವಿಗೆ ನೋಟಿಸ್:ನಾಪೋಕ್ಲು - ಕಲ್ಲುಮೊಟ್ಟೆ ರಸ್ತೆಯ ಚೆರಿಯಪರಂಬುವಿನಲ್ಲಿ ಕಾವೇರಿ ಪ್ರವಾಹದ ನೀರು ಹರಿಯುತ್ತಿದ್ದು ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಕಾವೇರಿ ನದಿ ದಡದಲ್ಲಿ ವಾಸಿಸುವ ಜನರಿಗೆ ಕಂದಾಯ ಇಲಾಖೆ ಮನೆ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿತ್ತು. ಇದೀಗ ಪ್ರವಾಹದ ಭೀತಿ ಎದುರಾಗಿದೆ.
ಈಗಾಗಲೇ ಹಲವರು ಸ್ಥಳಾಂತರಗೊಂಡಿದ್ದು ಶುಕ್ರವಾರ ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಮಾಚೇಟಿರ ಕುಸು ಕುಶಾಲಪ್ಪ, ಗ್ರಾಮ ಲೆಕ್ಕಿಗ ಜನಾರ್ದನ್, ಪಂಚಾಯಿತಿ ಸಿಬ್ಬಂದಿ ಬೊಪ್ಪಂಡ ವೇಣು, ತಿಮ್ಮಣ್ಣ ಸ್ಥಳಕ್ಕೆ ತೆರಳಿ ಇಲ್ಲಿಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಮಾರ್ಗದರ್ಶನ ಹಾಗೂ ಮುಂಜಾಗ್ರತಾ ಕ್ರಮ ಕೈಗೊಂಡರು.ಎಮ್ಮೆಮಾಡು ಪ್ರವಾಹ:ಎಮ್ಮೆಮಾಡು ವಿನಲ್ಲಿ ಕಾವೇರಿ ನದಿ ಪ್ರವಾಹದಿಂದ ನೂರಾರು ಎಕರೆ ಬತ್ತದ ಗದ್ದೆಗಳು ಪ್ರವಾಹದಲ್ಲಿ ಮುಳುಗಿದ್ದು ಬತ್ತ ನಾಟಿ ಮಾಡಲು ಮುಂದಾಗಿದ್ದ ರೈತರ ಬಿತ್ತನೆ ನಾಶ ಸಾಧ್ಯತೆ ಹೆಚ್ಚಾಗಿದೆ. ಪ್ರವಾಹ ಅಪಾಯ ಮಟ್ಟ ತಲುಪಿದ್ದು ಗ್ರಾಮಸ್ತರಲ್ಲಿ ಆತಂಕ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿಯ ಟಾಸ್ಕ್ ಫೋರ್ಸ್ ತಂಡ ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಸಿದ್ಧವಾಗಿದೆ.ಬೆಟ್ಟಗೇರಿ ಗ್ರಾಮ ಪಂಚಾಯತಿಯ ಬಕ್ಕದಲ್ಲಿರುವ ಕಡ್ಲೇರ ಕುಟುಂಬದ ಐನ್ ಮನೆಯ ಮಾಳಿಗೆ ಹಾಗೂ ಗೋಡೆಗಳು ಭಾರೀ ಮಳೆಯಿಂದ ಬಿದ್ದು ಬಾರಿ ನಷ್ಟ ಸಂಭವಿಸಿದೆ. ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಳಿಯಂಡ ಕಮಲ ಉತ್ತಯ್ಯ, ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉದಯ, ಪಂಚಾಯತ್ ಸದಸ್ಯ ಅಯ್ಯೆಗಡ ಮುತ್ತಪ್ಪ ಅವರು ಭೇಟಿನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ವಿದ್ಯುತ್ ವ್ಯತ್ಯಯ:
ಅಲ್ಲಲ್ಲಿ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಕಾರಣ ನೆಲಜಿ, ಬಲ್ಲಮಾವಟಿ, ಎಮ್ಮೆಮಾಡು, ಕಕ್ಕಬೆ ಸೇರಿದಂತೆ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದ್ದು, ಚೆಸ್ಕಾಂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅವಿರತ ಶ್ರಮ ವಹಿಸುತಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಗದ್ದೆ ತೋಟಗಳು ನೀರಿನಲ್ಲಿ ಮುಳುಗಡೆಯಾಗಿವೆ.