ಕೈಗಾರಿಕಾ ಮಾಲಿನ್ಯ ನಿಯಂತ್ರಣ ಹಾಗೂ ಜನರ ಆರೋಗ್ಯ ರಕ್ಷಣೆಗೆ ಆಗ್ರಹಿಸಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮತ್ತು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ಸಮಿತಿ ಜಂಟಿಯಾಗಿ ಕರೆ ನೀಡಿದ್ದ ಕೊಪ್ಪಳ ಬಂದ್‌ಗೆ ಶನಿವಾರ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಕೊಪ್ಪಳ: ಕೈಗಾರಿಕಾ ಮಾಲಿನ್ಯ ನಿಯಂತ್ರಣ ಹಾಗೂ ಜನರ ಆರೋಗ್ಯ ರಕ್ಷಣೆಗೆ ಆಗ್ರಹಿಸಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮತ್ತು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ಸಮಿತಿ ಜಂಟಿಯಾಗಿ ಕರೆ ನೀಡಿದ್ದ ಕೊಪ್ಪಳ ಬಂದ್‌ಗೆ ಶನಿವಾರ ವ್ಯಾಪಕ ಬೆಂಬಲ ವ್ಯಕ್ತವಾಯಿತು. ನಗರದ ಅಂಗಡಿ, ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಸಾಥ್ ನೀಡಲಾಯಿತು.

ಬೆಳಗ್ಗೆಯಿಂದಲೇ ನಗರದ ಪ್ರಮುಖ ಅಂಗಡಿಗಳು ಬಂದ ಆಗಿದ್ದವು. ಖಾಸಗಿ ಸಾರಿಗೆ ಎಂದಿನಂತೆ ಸಂಚರಿಸಿದರೆ, ಸರ್ಕಾರಿ ಬಸ್‌ಗಳು ಆಗಾಗ ಸಂಚರಿಸುತ್ತಿದ್ದವು. ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನ ಅವಧಿಯಲ್ಲಿ ನಗರ ಬಹುತೇಕ ಸ್ತಬ್ಧವಾಗಿತ್ತು. ಆದರೆ, ಮೆರವಣಿಗೆ ಮುಗಿದ ಬಳಿಕ ಮಾರುಕಟ್ಟೆ ಹಾಗೂ ವಾಹನ ಸಂಚಾರ ಮತ್ತೆ ಎಂದಿನಂತೆ ಆರಂಭವಾಯಿತು.

ನಗರದ ಗವಿಮಠದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಗಡಿಯಾರ ಕಂಬದ ಮೂಲಕ ಜವಾಹರ ರಸ್ತೆಯಲ್ಲಿ ಸಾಗಿತು. ಈ ಸಂದರ್ಭದಲ್ಲಿ ಸರ್ಕಾರ ಹಾಗೂ ಕೈಗಾರಿಕೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ''ಕಾರ್ಖಾನೆ ತೊಲಗಿಸಿ, ಬದುಕಲು ಬಿಡಿ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ನಗರ ಸೇರಿದಂತೆ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳು ಕೈಗಾರಿಕಾ ಮಾಲಿನ್ಯದಿಂದ ತೀವ್ರ ಸಮಸ್ಯೆ ಎದುರಿಸುತ್ತಿವೆ. ಜನರ ಆರೋಗ್ಯ, ಕೃಷಿ, ಜಲಮೂಲ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಜನವಸತಿ ಪ್ರದೇಶಗಳ ಸಮೀಪದಲ್ಲಿರುವ ಮಾಲಿನ್ಯಕಾರಕ ಕಾರ್ಖಾನೆಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಜನರ ಜೀವದ ಜತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇಟಗಿಯ ಗುರುಶಾಂತವೀರ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಹೋರಾಟ ತೀವ್ರಗೊಳಿಸಲು ಕರೆ: ಕವಿ ಚಳ್ಳಿಕೇರಿ ಶಿವಲಿಂಗಪ್ಪ ಮಾತನಾಡಿ, ಶಾಂತಿಯುತ ಹೋರಾಟ ಸಾಕು, ಇನ್ನು ಶಾಸಕರು ಮತ್ತು ಸಂಸದರ ಮನೆಗಳ ಮುಂದೆ ಧರಣಿ ಆರಂಭಿಸಬೇಕು. ಉದ್ಯೋಗ ನೀಡುವ ನೆಪದಲ್ಲಿ ಜನರ ಜೀವಕ್ಕೆ ಕುತ್ತು ತರುವ ಕಾರ್ಖಾನೆಗಳು ನಮಗೆ ಬೇಡ. ಜನರ ಉಳಿವಿಗಾಗಿ ಹೋರಾಟ ತೀವ್ರಗೊಳಿಸೋಣ ಎಂದು ಕರೆ ನೀಡಿದರು.

ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಇದು ಕೇವಲ ಪರಿಸರ ಹೋರಾಟವಲ್ಲ, ಪ್ರಕೃತಿಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟ. ಬಾಧಿತ ಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿನ ಜನರ ನೋವು, ಸಂಕಷ್ಟ ಕಣ್ಣಾರೆ ಕಂಡಿದ್ದೇನೆ. ಶುದ್ಧ ಗಾಳಿಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡವಾಳಶಾಹಿಗಳ ಹಿಡಿತದಿಂದ ಕೊಪ್ಪಳವನ್ನು ರಕ್ಷಿಸಬೇಕಿದೆ. ಅಂಗಡಿ ಬಂದ್ ಮಾಡಿದರೆ ಸಾಲದು, ಜನರು ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳಬೇಕು. ಸರ್ಕಾರ ಜನರ ಸಂಖ್ಯಾಬಲಕ್ಕೆ ಹೆದರುತ್ತದೆ. ಕಪ್ಪತ್ತಗುಡ್ಡ ಉಳಿವಿನ ಹೋರಾಟದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಯಶಸ್ಸು ಸಿಕ್ಕಿತ್ತು. ಅದೇ ರೀತಿಯಲ್ಲಿ ಕೊಪ್ಪಳದ ಪುಣ್ಯಭೂಮಿ ಉಳಿಸಲು ಒಗ್ಗಟ್ಟಾಗಬೇಕು ಎಂದರು.

ಸಾಹಿತಿ ಡಾ. ಬಸವರಾಜ ಸಬರದ ಮಾತನಾಡಿ, ದೇಶದ ಆಡಳಿತ ವ್ಯವಸ್ಥೆಯ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಪ್ರಭಾವ ಹೆಚ್ಚಾಗಿದೆ. ಬಲ್ದೋಟಾ ಕಾರ್ಖಾನೆ ಮಾಲೀಕರ ಎದುರು ನಿಂತು ಮಾತನಾಡುವ ಧೈರ್ಯ ಶಾಸಕರು, ಸಚಿವರಿಗೆ ಇಲ್ಲದಂತಾಗಿದೆ. ಮುಖ್ಯಮಂತ್ರಿ ಉತ್ತರ ಕರ್ನಾಟಕಕ್ಕೆ ಆಗಮಿಸಿ ಜನರ ಸಂಕಷ್ಟ ಆಲಿಸಬೇಕು. ಇಲ್ಲದಿದ್ದರೆ ಜನರ ಆಕ್ರೋಶ ಎದುರಿಸಬೇಕಾಗುತ್ತದೆ. ಶಾಂತಿಯುತ ಹೋರಾಟದ ಜತೆಗೆ ಜನಪ್ರತಿನಿಧಿಗಳಿಗೆ ಘೇರಾವ್ ಹಾಕುವ ಹಂತಕ್ಕೂ ಹೋರಾಟ ಬೆಳೆಸಬೇಕು. ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಬೇಕು ಎಂದು ಎಚ್ಚರಿಸಿದರು.

ನಟ ಚೇತನ್ ಅಹಿಂಸಾ ಮಾತನಾಡಿ, ಸಿನಿಮಾ ನಟರು ಅಥವಾ ಶ್ರೀಮಂತರಿಂದ ಮಾತ್ರ ಕೊಪ್ಪಳ ಉಳಿಯುವುದಿಲ್ಲ. ತಳಮಟ್ಟದಿಂದ ರೂಪುಗೊಳ್ಳುವ ಜನಪರ ಹೋರಾಟದಿಂದ ಮಾತ್ರ ಬದಲಾವಣೆ ಸಾಧ್ಯ. ಎಡ, ಬಲ ಎಂಬ ಭೇದ ಮರೆತು ಸತ್ಯದ ಪರವಾಗಿ ಎಲ್ಲರೂ ಒಂದಾಗಬೇಕು. ಜನರನ್ನು ದಿಕ್ಕು ತಪ್ಪಿಸುವ ಹೋರಾಟಗಳ ನಡುವೆ ಈ ಹೋರಾಟ ಜನರ ಬದುಕು ಮತ್ತು ಪರಿಸರದ ಉಳಿವಿಗಾಗಿ ನಡೆಯುತ್ತಿದೆ. ಅಧಿಕಾರಿಗಳು ಹಾಗೂ ಆಡಳಿತಗಾರರು ಜನರ ಮನವಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಜನರ ರಾಜಕೀಯ ಶಕ್ತಿ ಗಟ್ಟಿಯಾಗಬೇಕು ಎಂದರು.

ಕೆಆರ್‌ಎಸ್ ಪಕ್ಷದ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರವಿಕೃಷ್ಣಾರಡ್ಡಿ ಮಾತನಾಡಿ, ವರ್ಷದಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದರೆ ಜನರ ಒತ್ತಡ ಹೆಚ್ಚಬೇಕು. ಗವಿಮಠದ ಶ್ರೀಗಳು ಈ ಹೋರಾಟದ ನೇತೃತ್ವ ವಹಿಸಿ ಜನರಿಗೆ ಶಕ್ತಿ ತುಂಬಬೇಕು. ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಹಂಕಾರ ಬಿಟ್ಟು ಕೊಪ್ಪಳಕ್ಕೆ ಬಂದು ಜನರ ಸಂಕಷ್ಟ ಆಲಿಸಬೇಕು ಎಂದರು.

ಮೈನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಕಾರ್ಖಾನೆಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಕೇವಲ 22 ಗ್ರಾಮಗಳಲ್ಲ, ಇನ್ನೂ ಅನೇಕ ಗ್ರಾಮಗಳು ಮಾಲಿನ್ಯದ ಪರಿಣಾಮ ಎದುರಿಸುತ್ತಿವೆ. ಕಾರ್ಖಾನೆಗಳಿಗೆ ನೀಡುವ ನೀರನ್ನು ರೈತರಿಗೆ ನೀಡಿದರೆ ಕೃಷಿಗೆ ಅನುಕೂಲವಾಗಲಿದೆ. ಹೋರಾಟಕ್ಕೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.

ಸಿದ್ದಬಸವ ಕಬೀರ ಮಹಾಸ್ವಾಮೀಜಿ ಮಾತನಾಡಿ, ಬಂದ್ ಮಾಡಿ ಮನೆಯಲ್ಲಿ ಕುಳಿತುಕೊಳ್ಳುವುದರಿಂದ ಪ್ರಯೋಜನವಿಲ್ಲ. ಜನರು ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳಬೇಕು. ರೈತರ ಶ್ರಮದಿಂದ ನಾವೆಲ್ಲರೂ ಬದುಕುತ್ತಿದ್ದೇವೆ. ಆದರೆ ಬಾಧಿತ ಗ್ರಾಮಗಳ ಜನರ ಬದುಕು ಶೋಚನೀಯವಾಗಿದೆ. ಗಿಡಮರಗಳೂ ಮಾಲಿನ್ಯದ ಪರಿಣಾಮದಿಂದ ನಾಶವಾಗುತ್ತಿವೆ ಎಂದರು.

ಹಿರಿಯ ನ್ಯಾಯವಾದಿ ಸಂಧ್ಯಾ ಮಾದಿನೂರು ಮಾತನಾಡಿ, ನಿರೀಕ್ಷಿತ ಮಟ್ಟದಲ್ಲಿ ಹೋರಾಟ ನಡೆಯುತ್ತಿಲ್ಲ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕಾರ್ಖಾನೆಗಳ ಉತ್ಪಾದನೆ ಆರಂಭವಾಗುತ್ತಿರುವುದು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನದ ಭಾಗವಾಗಿರಬಹುದು. ಜನರ ಸಮಸ್ಯೆಗಳನ್ನು ಆಳುವವರೇ ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಬಿ. ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಅಲ್ಲಮಪ್ರಭು ಬೆಟ್ಟದೂರು, ಅಮರೇಗೌಡ ಪಾಟೀಲ, ಪ್ರಕಾಶ ಆನಂದಳ್ಳಿ, ಕಾವ್ಯ ಗಡಾದ, ಸಾವಿತ್ರಿ ಮುಜುಂದಾರ, ರಾಜು ಬಾಕಳೆ, ಅಲ್ಲಮಪ್ರಭು ಬೆಟ್ಟದೂರು, ಎ.ವಿ. ಕಣವಿ, ಈರಪ್ಪ ಕಂಬಳಿ, ಗಾಳೆಪ್ಪ ಕಡೇನಿ, ಡಿ.ಎಂ. ಬಡಿಗೇರ, ರಮೇಶ ಹ್ಯಾಟಿ, ಬಸವರಾಜ ಬಳ್ಳೊಳ್ಳಿ, ಭೀಮಸೇನ ಕಲಿಕೇರಿ ಪಾಲ್ಗೊಂಡಿದ್ದರು.

ಎದ್ದು ಹೋದ ಹೇಮಲತಾ ನಾಯಕ: ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆಯ ಮೇಲಿದ್ದ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರಿಗೆ ಭಾಷಣ ಮಾಡಲು ಅವಕಾಶ ನೀಡದೇ ಇರುವುದರಿಂದ ಆಕ್ರೋಶಗೊಂಡು ಹೊರಹೋದರು.ಜನಪ್ರತಿನಿಧಿಗಳನ್ನು ನಾವು ಆಹ್ವಾನಿಸಿಲ್ಲ. ಇದು ಜನರ ಹೋರಾಟವಾಗಿದ್ದು, ಇಲ್ಲಿ ಜನಪ್ರತಿನಿಧಿಗಳು ಯಾರಿಗೂ ನಾವು ಅವಕಾಶ ನೀಡುವುದಿಲ್ಲ ಎಂದು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಮಂಜನಾಥ ಗೊಂಡಬಾಳ ಹೇಳಿದ್ದರಿಂದ ಹೇಮಲತಾ ನಾಯಕ ಎದ್ದು ಹೋದರು.ಅವರು ವೇದಿಕೆಯಿಂದ ಎದ್ದು ಹೋಗುತ್ತಿದ್ದಂತೆ ಬಿಜೆಪಿ ಮುಖಂಡರಾದ ರಾಜು ಬಾಕಳೆ ಮತ್ತು ಎ.ವಿ. ಕಣವಿ ಅವರು ಸಂಘಟಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಪರಿಷತ್‌ನಲ್ಲಿ ಹೆಚ್ಚು ಬಾರಿ ಕಾರ್ಖಾನೆಗಳ ಕುರಿತು ಮಾತನಾಡಿದ ಅವರನ್ನೇ ಅಪಮಾನ ಮಾಡಲಾಗಿದೆ. ಇದು ಸರಿಯಲ್ಲ ಎಂದು ಕಿಡಿಕಾರಿದರು.

ಹೋರಾಟದಲ್ಲಿ ಪಾಲ್ಗೊಳ್ಳಲಿ: ಕೊಪ್ಪಳ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಈ ಹೋರಾಟದ ನೇತೃತ್ವ ವಹಿಸಬೇಕು. ಅವರು ಮೈಸೂರು ದಸರಾದಲ್ಲಿ ಈ ವಿಷಯ ಪ್ರಸ್ತಾಪಿಸಬೇಕಾಗಿತ್ತು. ಅವರಿಗೆ ದೊಡ್ಡ ಶಕ್ತಿ ಇದ್ದು, ಅವರೇ ಪ್ರಾರಂಭಿಸಿರುವ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅವರ ವಿರುದ್ಧವೇ ನಾವು ಹೋರಾಟ ಮಾಡುತ್ತೇವೆ ಎಂದು ಸಾಹಿತಿ ಡಾ. ಬಸವರಾಜ ಸಬರದ ಹೇಳಿದರು. ಸ್ವಾಮೀಜಿ ನೇತೃತ್ವ ವಹಿಸಲಿ: ಗದಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳು ಗದಗನಲ್ಲಿ ಕಂಪನಿಯ ವಿರುದ್ಧ ಹೋರಾಟ ಮಾಡಿದಂತೆ ಕೊಪ್ಪಳದ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು. ಅವರಿಗೆ ಅಗಾಧ ಶಕ್ತಿ ಇದ್ದು, ಅವರು ಇಂಥ ಹೋರಾಟದ ನೇತೃತ್ವ ವಹಿಸಿ, ಇಲ್ಲಿಯ ಜನರಿಗೆ ಎದುರಾಗಿರುವ ಸಮಸ್ಯೆಯನ್ನು ನೀಗಿಸಬೇಕು ಎಂದು ಕೆಆರ್‌ಎಸ್ ಪಕ್ಷದ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರವಿ ಕೃಷ್ಣಾರಡ್ಡಿ ಹೇಳಿದರು.

ದಸರಾ ಉದ್ಘಾಟನೆ ತಿರಸ್ಕರಿಸಿದ್ದರೆ ಗವಿಮಠದ ಶ್ರೀಗಳು ಗಾಂಧಿ, ಅಂಬೇಡ್ಕರ್ ಸಾಲಿನಲ್ಲಿ ನಿಲ್ಲುತ್ತಿದ್ದರು

ಮೈಸೂರು ದಸರಾ ಉತ್ಸವದ ಉದ್ಘಾಟನೆಯ ಆಹ್ವಾನವನ್ನು ಗವಿಮಠದ ಶ್ರೀಗಳು ತಿರಸ್ಕರಿಸಿದ್ದರೆ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಲಿನಲ್ಲಿ ನಿಲ್ಲುತ್ತಿದ್ದರು ಎಂದು ಜೇವರ್ಗಿಯ ಸಿದ್ದಬಸವ ಕಬೀರ ಸ್ವಾಮೀಜಿ ಅಭಿಪ್ರಾಯಪಟ್ಟರು.ಶನಿವಾರ ಇಲ್ಲಿ ಕಾರ್ಖಾನೆಗಳ ವಿರುದ್ಧ ನಡೆದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಲ್ದೋಟಾ ಕಾರ್ಖಾನೆ ವಿರುದ್ಧದ ಹೋರಾಟವನ್ನು ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳೇ ಆರಂಭಿಸಿದ್ದರು. ಆದರೆ, ಹೋರಾಟ ಇನ್ನೂ ಕಾರ್ಯಗತವಾಗದ ಹಿನ್ನೆಲೆಯಲ್ಲಿ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ತೆರಳಬಾರದಿತ್ತು ಎಂಬುದು ತಮ್ಮ ಅಭಿಪ್ರಾಯ ಎಂದರು.ಈ ಕುರಿತು ಶ್ರೀಗಳು ದಸರಾ ಉದ್ಘಾಟನೆಗೆ ತೆರಳುವುದಿಲ್ಲ ಎಂಬ ಸುದ್ದಿ ಹರಡಿದಾಗ ತಮಗೆ ಅತ್ಯಂತ ಸಂತೋಷವಾಗಿತ್ತು. ಆದರೆ, ಆ ಸುದ್ದಿ ಸುಳ್ಳು ಎಂಬುದು ತಿಳಿದಾಗ ಬೇಸರವಾಯಿತು. ಈ ಸಂದರ್ಭದಲ್ಲಿ ದಸರಾ ಉದ್ಘಾಟನೆಯ ಆಹ್ವಾನ ತಿರಸ್ಕರಿಸುವಂತಹ ನಿರ್ಧಾರ ಕೈಗೊಂಡಿದ್ದರೆ, ಗವಿಮಠದ ಶ್ರೀಗಳು ಗಾಂಧೀಜಿ ಮತ್ತು ಅಂಬೇಡ್ಕರ್ ಅವರಂತೆ ಸಾಮಾಜಿಕ ಹೋರಾಟದ ಇತಿಹಾಸದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ದೇಶದಲ್ಲಿಯೇ ಶ್ರೇಷ್ಠ ಸ್ಥಾನ ಪಡೆಯುವ ಅವಕಾಶವಿತ್ತು ಎಂದು ವಿಷಾದಿಸಿದರು.