ಸಾರಾಂಶ
ಮೊಬೈಲ್ ರಿಚಾರ್ಜ್ ಮಾಡಿಸದ ಕಾರಣಕ್ಕೆ ಪತಿ ಮೇಲೆ ಕೋಪಗೊಂಡು ಪತ್ನಿ ಎರಡನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊಬೈಲ್ ರಿಚಾರ್ಜ್ ಮಾಡಿಸದ ಕಾರಣಕ್ಕೆ ಪತಿ ಮೇಲೆ ಕೋಪಗೊಂಡು ಪತ್ನಿ ಎರಡನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗೇರುಪಾಳ್ಯದ ನಿವಾಸಿ ಶಿಖಾ ದೇವಿ (28) ಮೃತ ದುರ್ದೈವಿ. ಮನೆಯಲ್ಲಿ ಭಾನುವಾರ ಮೊಬೈಲ್ ವಿಚಾರವಾಗಿ ಪತಿ ಜತೆ ಜಗಳವಾದ ಬಳಿಕ ಶಿಖಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರು ವರ್ಷಗಳ ಹಿಂದೆ ಉತ್ತರಪ್ರದೇಶ ಮೂಲದ ಸಂದೀಪ್ ಕುಮಾರ್ ಹಾಗೂ ಶಿಖಾ ವಿವಾಹವಾಗಿದ್ದು, ಗೇರುಪಾಳ್ಯದಲ್ಲಿ ದಂಪತಿ ವಾಸವಾಗಿದ್ದರು. ಕೌಟುಂಬಿಕ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು ಭಾನುವಾರ ಸಂಜೆ ಮೊಬೈಲ್ ರಿಚಾರ್ಜ್ ಮಾಡಿಸದ ಕಾರಣಕ್ಕೆ ಪತಿ ಮೇಲೆ ಶಿಖಾ ಗಲಾಟೆ ಮಾಡಿದ್ದಳು. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆಕೆ, ತನ್ನ ಪತಿಯ ಮೊಬೈಲ್ ತೆಗೆದು ಎಸೆದಿದ್ದಾಳೆ. ಬಳಿಕ ಮೊದಲನೇ ಮಹಡಿಗೆ ತೆರಳಿ ಜಿಗಿದು ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಶಿಖಾಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಕುಟುಂಬ ಸದಸ್ಯರು ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತ ಸ್ರಾವದಿಂದ ಶಿಖಾ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.