ಕನ್ನಡಪ್ರಭವಾರ್ತೆ ಸೋಮವಾರಪೇಟೆ

ದೇವರ ಪ್ರಸಾದವೆಂದು ನಂಬಿಸಿ ಸೈನೆಡ್ ನೀಡಿ ಪತಿಯನ್ನು ಹತ್ಯೆ ಮಾಡಿದ ಪತ್ನಿ ಮತ್ತು ಪ್ರಿಯಕರನಿಗೆ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಮಹತ್ವದ ತೀರ್ಪು ನೀಡಿದೆ. ಸೋಮವಾರಪೇಟೆ ನಿವಾಸಿ ಬಿ.ಡಿ.ಮುರುಳಿ ಮತ್ತು ಆತನ ಪ್ರಿಯತಮೆ ತಣ್ಣೀರುಹಳ್ಳ ಗ್ರಾಮದ ರಾಧ ಶಿಕ್ಷೆಗೆ ಒಳಗಾದವರು. ಸೋಮವಾರಪೇಟೆ ನಿವಾಸಿ ಬಿ.ಡಿ.ಮುರಳಿ ಹಾಗೂ ತಣ್ಣೀರುಹಳ್ಳ ಗ್ರಾಮದ ರಾಧ ನಡುವೆ ಅನೈತಿಕ ಸಂಬಂಧ ಇತ್ತು. ಈ ಸಂಬಂಧಕ್ಕೆ ರಾಧಳ ಪತಿ ಸುರೇಶ್ ಅಡ್ಡಿಯಾಗಿದ್ದರಿಂದ ಆತನನ್ನು ಕೊಲೆ ಮಾಡಲು ಇಬ್ಬರೂ ಸಂಚು ರೂಪಿಸಿದ್ದರು. ಮುರಳಿ ಮಂಗಳೂರಿನಲ್ಲಿ ಮೆಡಿಕಲ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಪೋಟ್ಯಾಸಿಯಂ ಸೈನೆಡ್ ಅನ್ನು ಕೊರಿಯರ್ ಮೂಲಕ ಪಡೆದುಕೊಂಡಿದ್ದ. ನಂತರ ಸೈನೆಡ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ ದೇವರ ಪ್ರಸಾದವೆಂದು ಪತ್ರ ಬರೆದು, ಹೂ, ಕುಂಕುಮದೊಂದಿಗೆ ಪ್ಯಾಕ್ ಮಾಡಿ ಸುರೇಶ್ ಕೆಲಸ ಮಾಡುತ್ತಿದ್ದ ಸೋಮವಾರಪೇಟೆ ಪಟ್ಟಣದ ಹೋಟೆಲ್‌ಗೆ ಕಳುಹಿಸಿದ್ದ. 2019 ಆ. 4 ರಂದು ಸಂಜೆ ರಾಧ ತನ್ನ ಮನೆಯಲ್ಲೇ ದೇವರ ಪ್ರಸಾದವೆಂದು ಒತ್ತಾಯಪೂರ್ವಕವಾಗಿ ಸೈನೆಡ್ ಮಿಶ್ರಿತ ನೀರನ್ನು ಸುರೇಶ್‌ಗೆ ಕುಡಿಸಿದ್ದು, ಪರಿಣಾಮ ಆತ ಸಾವನ್ನಪ್ಪಿದ್ದಾನೆ. ನಂತರ ಸಾಕ್ಷ್ಯ ನಾಶಪಡಿಸಲು ಉಳಿದ ಸೈನೆಡ್ ಹಾಗೂ ಪ್ಲಾಸ್ಟಿಕ್ ಡಬ್ಬವನ್ನು ಸುಟ್ಟು ಹಾಕಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಸೋಮವಾರಪೇಟೆ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಹೊಸಮನಿ ಪುಂಡಲಿಕ್ ಅವರು ಇಬ್ಬರು ಆರೋಪಿತರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಕೆ.ಜಿ. ಅಶ್ವಿನಿ ಯಶಸ್ವಿಯಾಗಿ ವಾದ ಮಂಡಿಸಿದ್ದರು.