ವಿಚ್ಛೇದನಕ್ಕೆ ನೀಡಲಿದ್ದ ಪತ್ನಿ ಹತ್ಯೆ, ಅತ್ತೆಗೆ ಇರಿತ

| Published : Sep 24 2025, 01:00 AM IST

ವಿಚ್ಛೇದನಕ್ಕೆ ನೀಡಲಿದ್ದ ಪತ್ನಿ ಹತ್ಯೆ, ಅತ್ತೆಗೆ ಇರಿತ
Share this Article
  • FB
  • TW
  • Linkdin
  • Email

ಸಾರಾಂಶ

ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಕೊಂದು, ಆಕೆ ರಕ್ಷಣೆಗೆ ಬಂದ ಅತ್ತೆ ಮೇಲೂ ಚಾಕುವಿನಿಂದ ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿದ ಘಟನೆ ನಗರದ ಎಂಸಿಸಿ ಬಿ ಬ್ಲಾಕ್‌ನ ಮಕ್ಕಳ ಕಲ್ಯಾಣ ಸಮಿತಿ ಕಚೇರಿ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಕೊಂದು, ಆಕೆ ರಕ್ಷಣೆಗೆ ಬಂದ ಅತ್ತೆ ಮೇಲೂ ಚಾಕುವಿನಿಂದ ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿದ ಘಟನೆ ನಗರದ ಎಂಸಿಸಿ ಬಿ ಬ್ಲಾಕ್‌ನ ಮಕ್ಕಳ ಕಲ್ಯಾಣ ಸಮಿತಿ ಕಚೇರಿ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಕಾಡಜ್ಜಿ ಗ್ರಾಮದ ಮುಸ್ಕಾನ್ ಭಾನು (26) ಹತ್ಯೆಯಾದ ಮಹಿಳೆ. ಈಕೆಯ ತಾಯಿ ಫರ್ಜಾನ್ ಭಾನು (35) ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಏನಿದು ಘಟನೆ?:

ಮೂಲತಃ ಕಾಡಜ್ಜಿ ಗ್ರಾಮದ ಖಲೀಂವುಲ್ಲಾ (35) ಜತೆಗೆ ಮುಸ್ಕಾನ್ ಭಾನು ವಿವಾಹವಾಗಿತ್ತು. ಪತಿ-ಪತ್ನಿ ಮಧ್ಯೆ ಗಲಾಟೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರೋಸಿ ಹೋಗಿದ್ದ ಮುಸ್ಕಾನ್ ಭಾನು ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಖಲೀಂವುಲ್ಲಾ ಹಾಗೂ ಮುಸ್ಕಾನ್ ಭಾನು ದಾವಣಗೆರೆ ಎಂಸಿಸಿ ಬಿ ಬ್ಲಾಕ್‌ನ ಬಾಲ ಮಂದಿರ ಆವರಣದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಮಂಗಳವಾರ ಕೌನ್ಸಿಲಿಂಗ್‌ಗೆ ಹಾಜರಾಗಿದ್ದರು.

ಕಟ್ಟಡದ 1ನೇ ಮಹಡಿಯಲ್ಲಿ ತನ್ನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದ ಪತ್ನಿ ಮುಸ್ಕಾನ್ ಭಾನು ಜತೆ ಮತ್ತೆ ಮಾತಿಗೆ ಮಾತು ಬೆಳೆಸಿದ ಪತಿ ಖಲೀಂವುಲ್ಲಾ ಏಕಾಏಕಿ ಚಾಕುವಿನಿಂದ ದಾಳಿ ಮಾಡಿ, ಹರಿತವಾಗಿ ಚಾಕುವಿನಿಂದ ಏಕಾಏಕಿ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾದ ಆಕೆ ಸ್ಥಳದಲ್ಲೇ ಅಸುನೀಗಿದ್ದಾರೆ. ಮಗಳ ರಕ್ಷಣೆಗೆ ಬಂದ ಮುಸ್ಕಾನ್‌ ತಾಯಿ ಫರ್ಜಾನ್‌ ಭಾನು ಮೇಲೂ ಖಲೀಂವುಲ್ಲಾ ಚಾಕುವಿನಿಂದ ದಾಳಿ ಮಾಡಿ ಗಾಯಗೊಳಿಸಿದ್ದಾನೆ.

ಸ್ಥಳದಲ್ಲಿದ್ದ ಸಿಬ್ಬಂದಿ ಮುಸ್ಕಾನ್ ಭಾನು, ಫರ್ಜಾನ್ ಭಾನು ರಕ್ಷಣೆಗೆ ಬಂದಿದ್ದಾರಾದರೂ, ಮುಸ್ಕಾನ್ ತೀವ್ರ ರಕ್ತಸ್ರಾವಗೊಂಡು ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡಿದ್ದ ಫರ್ಜಾನು ಭಾನುರನ್ನು ಜಿಲ್ಲಾಸ್ಪತ್ರೆಗೆ ದಾಖಲ ಮಾಡಲಾಗಿದೆ. ಆರೋಪಿ ಖಲೀಂವುಲ್ಲಾನನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಭೇಟಿ ನೀಡಿ, ಪರಿಶೀಲಿಸಿದರು.

ಕಳೆದ ಶನಿವಾರವಷ್ಟೇ ಇಲ್ಲಿನ ಬಡಾವಣೆ ಪೊಲೀಸ್ ಠಾಣೆ ಪಕ್ಕದ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಆವರಣದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಸಂಧಾನಕಾರರ ಜೊತೆಗೆ ಕುಳಿತಿದ್ದ ವೇಳೆಯೇ ಜಾಲಿನಗರದ ವಾಸಿಯಾದ ವ್ಯಕ್ತಿಯೊಬ್ಬ ವಿಚ್ಛೇದನಕ್ಕೆ ಮುಂದಾಗಿದ್ದ ತನ್ನ ಪತ್ನಿಯನ್ನೇ ಇರಿದು ಗಂಭೀರ ಗಾಯಗೊಳಿಸಿದ್ದ. ಅಂದು ಆತನ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅಂತಹದ್ದೇ ಪ್ರಕರಣದಲ್ಲಿ ಕೌನ್ಸಿಲಿಂಗ್‌ಗೆ ಬಂದಿದ್ದ ಪತ್ನಿಯನ್ನು ಆಕೆಯ ಗಂಡನೇ ಹತ್ಯೆ ಮಾಡಿ, ಅತ್ತೆ ಮೇಲೂ ದಾಳಿ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲೂ ತೀವ್ರ ಆತಂಕ ವ್ಯಕ್ತವಾಗುತ್ತಿದೆ.