ಸಾರಾಂಶ
ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡ ರಾತ್ರಿ ನಡೆದಿದೆ.ಮಾಚೋಹಳ್ಳಿ ಬಳಿಯ ಡಿಗ್ರೂಪ್ ಲೇಔಟ್‌ನಲ್ಲಿ ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ವಿಜಯ್ ಕುಮಾರ್ (39) ಕೊಲೆಯಾದ ದುರ್ದೈವಿ.
ಮಾಗಡಿಯ ಸುಂಕದಕಟ್ಟೆಯ ನಿವಾಸಿಯಾಗಿದ್ದ ವಿಜಯ್‌ಕುಮಾರ್ 10 ವರ್ಷಗಳ ಹಿಂದೆ ಆಶಾಳನ್ನು ಮದುವೆಯಾಗಿದ್ದು ಕಾಮಾಕ್ಷಿಪಾಳ್ಯದಲ್ಲಿ ವಾಸವಾಗಿದ್ದರು.ಆ ಸಂದರ್ಭದಲ್ಲಿ ಆಶಾಗೆ ತನ್ನ ಬಾಲ್ಯ ಸ್ನೇಹಿತ ಧನಂಜಯನ ಪರಿಚಯವಾಗಿದೆ. ತನ್ನ ಪತಿ ವಿಜಯ್ ಗೂ ಆತನನ್ನು ಪರಿಚಯ ಮಾಡಿಸಿದ್ದಾಳೆ.
ತದ ನಂತರದಲ್ಲಿ ಪತ್ನಿ ಆಶಾ ಹಾಗೂ ಧನಂಜಯ ನಡುವಿನ ಅನೈತಿಕ ಸಂಬಂಧದವರೆಗೆ ಬೆಳೆದಿದೆ. ಅಲ್ಲದೇ ಇಬ್ಬರೂ ಒಟ್ಟಿಗಿರುವ ಫೋಟೋಗಳು ಸಿಕ್ಕಿಬಿದ್ದಿದ್ದರಿಂದ ಈ ವಿಷಯದ ಬಗ್ಗೆ ವಿಜಯ್ ಗಲಾಟೆಯನ್ನೂ ಮಾಡಿದ್ದ. ಈ ಕಾರಣಕ್ಕಾಗಿ ಕಾಮಾಕ್ಷಿಪಾಳ್ಯ ಬಿಟ್ಟು ಕಡಬಗೆರೆಯ ಮಾಚೋಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಿಜಯ್ ದಂಪತಿ ವಾಸವಾಗಿದ್ದರು. ಆದರೂ ಆಶಾ ಮತ್ತು ಧನಂಜಯನ ಸಂಬಂಧಕ್ಕೆ ಕಡಿವಾಣ ಬಿದ್ದಿರಲಿಲ್ಲ.ಸೋಮವಾರ ಸಂಜೆ ವಿಜಯ್ ಮನೆಯಿಂದ ಹೋಗಿದ್ದಾಗ ಮಾದನಾಯಕನಹಳ್ಳಿ ಕಡಬಗೆರೆ ಕ್ರಾಸ್ ಜನಪ್ರಿಯ ಅಪಾರ್ಟ್ ಮೆಂಟ್ ಬಳಿ ಮೂರ್ನಾಲ್ಕು ಮಂದಿ ಸೇರಿಕೊಂಡು ಪಾರ್ಟಿ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ಅವರ ಮಧ್ಯೆಯೇ ಗಲಾಟೆ ನಡೆದು ಮಚ್ಚಿನಿಂದ ವಿಜಯ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.ವಿಜಯ್ ಅವರ ಪತ್ನಿ ಆಶಾ ಮತ್ತು ಬಾಲ್ಯ ಸ್ನೇಹಿತ ಧನಂಜಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯ ಅಕ್ರಮ ಸಂಬಂಧವೇ ವಿಜಯ್ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಈ ಪ್ರಕರಣದ ಸಂಪೂರ್ಣ ತನಿಖೆಯಾದ ನಂತರವಷ್ಟೆ ಸತ್ಯ ಬಹಿರಂಗವಾಗಲಿದೆ.