ನಟ ದರ್ಶನ್‌ನನ್ನು ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮಿ, ವಕೀಲರು

| Published : Sep 13 2024, 01:34 AM IST

ಸಾರಾಂಶ

ಸುಮಾರು 20 ನಿಮಿಷಗಳ ಕಾಲ ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ ಹಾಗೂ ವಕೀಲರು ಚರ್ಚಿಸಿದರು.

ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ನ್ಯಾಯಾಂಗ ಬಂಧನ ಅವಧಿ ಗುರುವಾರ ಮುಕ್ತಾಯ ಹಿನ್ನೆಲೆಯಲ್ಲಿ ನಗರದ ಕೇಂದ್ರ ಕಾರಗೃಹದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ನಟ ದರ್ಶನ್‌ ವಿಚಾರಣೆಗೆ ಹಾಜರಾದರು.

ವಿಚಾರಣೆ ಕಾರ್ಯ ಮುಗಿದ ಬಳಿಕ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಪರ ವಕೀಲ ಸುನಿಲ್ ಹಾಗೂ ಹತ್ತಿರದ ಸಂಬಂಧಿ ಸುಶಾಂತ್ ನಾಯ್ಡು ನಟ ದರ್ಶನ್‌ನನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಕುಟುಂಬ ಸದಸ್ಯರು ಹಾಗೂ ವಕೀಲ ಆಗಮನ ಹಿನ್ನೆಲೆಯಲ್ಲಿ ನಟ ದರ್ಶನ್‌ನನ್ನು ವಿಜಿಟಿಂಗ್ ರೂಂಗೆ ಕರೆತರಲಾಯಿತು. ಸುಮಾರು 20 ನಿಮಿಷಗಳ ಕಾಲ ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ ಹಾಗೂ ವಕೀಲರು ಚರ್ಚಿಸಿದರು. ಇದೇ ವೇಳೆ ಪತ್ನಿ ವಿಜಯಲಕ್ಷ್ಮಿ ತಂದಿದ್ದ ದೇವರ ಪ್ರಸಾದ, ಡ್ರೈ ಫ್ರೂಟ್ಸ್‌, ಬಟ್ಟೆ, ಬ್ಯಾಗನ್ನು ನಟ ದರ್ಶನ್‌ಗೆ ನೀಡಲಾಯಿತು.

ಬಳಿಕ ದರ್ಶನ್ ನನ್ನು ಜೈಲು ಅಧಿಕಾರಿಗಳು ಹೈ ಸೆಕ್ಯೂರಿಟಿ ಸೆಲ್‌ಗೆ ಕಳಿಸಿದರು. ಸಂಜೆ ಮತ್ತೊಮ್ಮೆ ಜೈಲಿಗೆ ವಕೀಲರು ಹಾಗೂ ಅವರ ತಂಡ ಭೇಟಿ ನೀಡಿ, ನಟ ದರ್ಶನ್ ಜೊತೆ ಚರ್ಚಿಸಿದೆ ಎಂದು ತಿಳಿದು ಬಂದಿದೆ.

ದರ್ಶನ್ ಭೇಟಿ ಬಳಿಕ ಜೈಲಿನಿಂದ ಹೊರ ಬಂದ ವಕೀಲ ಸುನೀಲ್‌ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಜೊತೆ ಚರ್ಚೆ ಮಾಡಿದ್ದೇವೆ. ಚಾರ್ಜ್‌ಶೀಟ್‌ನಲ್ಲಿ ಕೆಲವು ಡೌಟ್‌ಗಳಿದ್ದವು. ಈ ಬಗ್ಗೆ ದರ್ಶನ್‌ ಜೊತೆ ಚರ್ಚೆ ನಡೆಸಿ ಕ್ಲಿಯರ್‌ ಮಾಡಿಕೊಂಡಿದ್ದೇವೆ. ಜಾಮೀನು ಅರ್ಜಿ ಸಲ್ಲಿಸುವ ಸಂಬಂಧ ಹಿರಿಯ ವಕೀಲರ ಜೊತೆ ಚರ್ಚೆ ನಡೆಸುತ್ತೇವೆ. ಬೇರೆ ಯಾವ ವಿಷಯದ ಬಗ್ಗೆ ಚರ್ಚೆ ನಡೆಸಿಲ್ಲ. ಜೈಲು ಚೇಂಜ್‌ ಮಾಡುವ ಬಗ್ಗೆಯೂ ಚರ್ಚೆ ನಡೆಸಿಲ್ಲ. ಚಾರ್ಜ್‌ಶೀಟ್‌ನಲ್ಲಿ ಏನಿದೆಯೋ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

ಟೀಕೆಗೆ ಗುರಿಯಾದ ನಟ:

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಹೈಸೆಕ್ಯೂರಿಟಿ ಸೆಲ್‌ನಿಂದ ವಿಜಿಟರ್‌ ರೂಂಗೆ ತೆರಳುವ ವೇಳೆ ಕೈಯಲ್ಲಿನ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿರುವುದು ಟೀಕೆಗೆ ಗುರಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯಾರಿಗೆ ಈ ರೀತಿಯ ಅಸಭ್ಯವಾಗಿ ಬೆರಳು ತೋರಿಸಿದರು ಎಂಬುದು ಗೊತ್ತಾಗಿಲ್ಲ. ದರ್ಶನ್ ಜೈಲಿನಲ್ಲಿದ್ದರೂ ವರ್ತನೆ ಬದಲಾಗಿಲ್ಲ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲೂ ಕೇಳಿ ಬಂದಿವೆ.