ಸ್ಥಳೀಯ ಶಾಲೆಗಳಿಗೆ ಓಣಂ ಹಬ್ಬಕ್ಕೆ ರಜೆ ನೀಡಲು ಶೀಘ್ರ ನಿರ್ಧಾರ: ಪೊನ್ನಣ್ಣ ಭರವಸೆ
KannadaprabhaNewsNetwork | Published : Oct 09 2023, 12:46 AM IST
ಸ್ಥಳೀಯ ಶಾಲೆಗಳಿಗೆ ಓಣಂ ಹಬ್ಬಕ್ಕೆ ರಜೆ ನೀಡಲು ಶೀಘ್ರ ನಿರ್ಧಾರ: ಪೊನ್ನಣ್ಣ ಭರವಸೆ
ಸಾರಾಂಶ
ಓಣಂಗೆ ಸ್ಥಳೀಯ ಶಾಲೆಗಳಿಗೆ ರಜೆ ನೀಡಲು ಚಿಂತನೆ- ಶಾಸಕ ಪೊನ್ನಣ್ಣ
ಕನ್ನಡಪ್ರಭವಾರ್ತೆ ವಿರಾಜಪೇಟೆ ಮಲಯಾಳಿ ಬಾಂಧವರು ತಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಓಣಂ ಹಬ್ಬವನ್ನು ಒಗ್ಗಟ್ಟಿನಿಂದ ಅಚರಿಸಿಕೊಂಡು ಬರುತ್ತಿದ್ದು ತಮ್ಮ ಮಕ್ಕಳಿಗೂ ಉನ್ನತ ಶಿಕ್ಷಣ ನೀಡುವಂತಾಗಬೇಕು ಎಂದು ವಿರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ಅಮ್ಮತ್ತಿ ಒಂಟಿಯಂಗಡಿಯ ಹಿಂದು ಮಲಯಾಳಿ ಸಂಘದ ವತಿಯಿಂದ ಒಂಟಿಯಂಗಡಿ ಕಣ್ಣಂಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಐದನೇ ವರ್ಷದ ಓಣಂ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವೇದಿಕೆಯಲ್ಲಿ ಓಣಂ ಹಬ್ಬ ಆಚರಣೆ ಸಮಾರಂಭಕ್ಕೆಂದು ಸ್ಥಳೀಯ ಶಾಲೆಗಳಿಗೆ ರಜೆ ಘೋಷಿಸುವಂತೆ ಶಾಸಕ ಪೊನ್ನಣ್ಣ ಅವರಿಗೆ ಹಿಂದು ಮಲಯಾಳಿ ಸಂಘದಿಂದ ಮನವಿ ಸಲ್ಲಿಸಿದರು. ಈ ವೇಳೆ ಶಾಸಕ ಪೊನ್ನಣ್ಣ ಅವರು ಮಾತನಾಡಿ ಓಣಂ ಹಬ್ಬದ ವೇಳೆ ಶಾಲೆಗೆ ರಜೆ ನೀಡುವಂತೆ ಅನೇಕ ಮಲಯಾಳಿ ಸಂಘಗಳಿಂದಲೂ ಮನವಿ ಬಂದಿದೆ. ಮುಂದಿನ ವರ್ಷದಿಂದ ಅಲ್ಲಿನ ಶಾಲೆಗೆ ರಜೆ ನೀಡುವಂತೆ ಸರ್ಕಾರದ ಆದೇಶ ಬರಲಿದೆ ಎಂದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಹಿಂದು ಮಲಯಾಳಿ ಸಮಾಜ ಬಾಂಧವರು ಹಿಂದಿನಿಂದಲೂ ಓಣಂ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ಅನೇಕತೆಯಲ್ಲಿ ಏಕತೆಯನ್ನು ಕಾಣುತ್ತಿದ್ದಾರೆ ಎಂದರು. ಅಮ್ಮತ್ತಿ ಒಂಟಿಯಂಗಡಿಯ ಹಿಂದು ಮಲಯಾಳಿ ಸಂಘದ ಅಧ್ಯಕ್ಷ ಸಿ.ಕೆ. ನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಲಯಾಳಿ ಸಮಾಜದ ಜಿಲ್ಲಾ ಅಧ್ಯಕ್ಷ ವಿ.ಎಂ. ವಿಜಯನ್ ಮಾತನಾಡಿ, ಕೂಲಿ ಕೆಲಸ ಮಾಡುವುದು ಕೀಳರಿಮೆಯಲ್ಲ, ಅದು ನಮ್ಮ ಕರ್ತವ್ಯ. ಮಲಯಾಳಿ ಬಾಂಧವರು ತಮ್ಮ ಮಕ್ಕಳಿಗೆ ಮೌಲ್ಯಾದರಿತ ಶಿಕ್ಷಣ ನೀಡುವ ಮೂಲಕ ಅವರನ್ನು ಉತ್ತಮ ಮಾರ್ಗದಲ್ಲಿ ಸಾಗುವಂತೆ ಪೋಷಕರು ಹೇಳಿಕೊಡಬೇಕು ಎಂದರು. ಜಿಲ್ಲಾ ಮಲಯಾಳಿ ಸಮಾಜದ ಉಪಾದ್ಯಕ್ಷ ಟಿ.ಕೆ. ಸುಧೀರ್ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಿನ್ನಮ್ಮ ಮಾತನಾಡಿದರು. ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀಷ್ಮಾ ರಂಜಿತ್, ಉಪಾಧ್ಯಕ್ಷರಾದ ರಜನಿ ಕುಟ್ಟಪ್ಪ, ಮಲಯಾಳಿ ಸಮಾಜದ ಗೌರವ ಅಧ್ಯಕ್ಷ ಕೆ.ಪಿ.ಪುಷ್ಕರನ್, ಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ಕೆ.ಬಾಬು, ಹಿರಿಯ ಸದಸ್ಯರಾದ ಪಿ.ಕೆ.ಭಾಸ್ಕರನ್, ಪಿ.ಎನ್.ಶಶಿ, ಎಸ್.ಎನ್.ಡಿ.ಪಿ. ಘಟಕದ ವಿ.ಕೆ.ಲೋಕೇಶ್, ಮುತ್ತಪ್ಪ ದೇವಸ್ಥಾನ ಸಮಿತಿ ಅದ್ಯಕ್ಷ ಪಿ.ಎನ್.ಅಚ್ಚುತನ್, ಕೆ.ಕೆ.ಕನ್‌ಸ್ಟ್ರಂಕ್ಷನ್ ಸಿ.ಕೆ.ಶಿಜು ಮತ್ತಿತರರು ಇದ್ದರು. ಸಂಘದ ಎಂ.ಎಂ.ಶಶಿಧರನ್ ಸ್ವಾಗತಿಸಿದರು. ಕೆ.ಕೆ. ಸನಿಲ್ ವಂದಿಸಿದರು. ಕಲಾತಂಡಗಳ ಮೆರವಣಿಗೆ ಸಭಾ ಕಾರ್ಯಕ್ರಮಕ್ಕೂ ಮೊದಲು ಚಾಮುಂಡಿ ಪೈಸಾರಿಯ ಶ್ರೀ ಅಯ್ಯಪ್ಪ ದೇವಸ್ಥಾನದಿಂದ ಚಂಡೆ ಮೇಳದೊಂದಿಗೆ ಮಹಾಬಲಿಯ [ಮಾವೇಲಿ] ಮೆರವಣಿಗೆ ಕಲಾ ತಂಡಗಳು ಶಾಲಾ ಮೈದಾನ ದವರೆಗೂ ಮೆರವಣಿಗೆ ನಡೆಯಿತು. ಮಹಿಳಾ ಘಟಕದ ಪ್ರೇಮಾ ಕೃಷ್ಣನ್ ಪೊಕಳಂ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ಟಿ.ಎನ್. ಶ್ರೀನಿವಾಸ್ ಕ್ರೀಡಾ ಸ್ಪರ್ಧೆ ಉದ್ಘಾಟಿಸಿದರು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪರಿಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮದ್ಯಾಹ್ನ ಓಣಂ ಸದ್ಯ, ಬಳಿಕ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೆಕ ಹಗ್ಗ ಜಗ್ಗಾಟ, ಮಕ್ಕಳಿಗೆ ವಿವಿದ ಕ್ರೀಡಾ ಸ್ಪರ್ದೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.