ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಇಲ್ಲಿನ7ನೇ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಬದಿಯ ಕಾಫಿ ತೋಟದಿಂದ ಭಾನುವಾರ ಬೆಳ್ಳಂಬೆಳಿಗ್ಗೆ ಕಾಡಾನೆಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಮನಸೋಇಚ್ಛೆ ಸಂಚರಿಸಿ ಅಕ್ಕಪಕ್ಕದ ನಿವಾಸಿಗಳು, ವಾಹನ ಸವಾರರಲ್ಲಿ ಆತಂಕ ಹುಟ್ಟಿಸಿತು.ಭಾನುವಾರ ಬೆಳಗ್ಗೆ 6.45 ರ ಸುಮಾರಿಗೆ 7ನೇ ಹೊಸಕೋಟೆ ನಿವಾಸಿ ಜುನಾಯಿತ್ ಎಂಬವರು ಮಸೀದಿಗೆ ತೆರಳಿ ವಾಪಸ್ ಬುರುತ್ತಿದ್ದಾಗ ಏಕಾಏಕಿ ಕಾಫಿ ತೋಟದಿಂದಬಂದ ಕಾಡಾನೆ ಕಾರಿನ ಮೇಲೆ ದಾಳಿ ನಡೆಸಿದ್ದು, ಅವರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.
ಇದೇ ಸಂದರ್ಭ ಮತ್ತೊಂದು ಕಾಡಾನೆಯು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಾದಿಡ್ಡಿ ಸಂಚರಿಸಿದ್ದು, ಘೀಳಿಟ್ಟು ಪಕ್ಕದ ತೋಟದೊಳಗೆ ಹೋಗಿದೆ. ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತಿದ್ದು ಕಾಡಾನೆ ದಾಳಿ ನಡೆಸಿಲ್ಲವಾದರೂ ವಾಹನ ಸವಾರರು, ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿತ್ತು.ಶನಿವಾರವಷ್ಟೇ ಮತ್ತಿಕಾಡಿನಲ್ಲಿ ಕಾಡಾನೆಯನ್ನು ಓಡಿಸುವ ಸಂದರ್ಭ ತೋಟದಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಆನೆ ದಾಳಿಗೆ ಒಳಗಾಗಿದ್ದಾರೆ. ಆಕೆಯ ಎಡಗೈ ಸಂಪೂರ್ಣ ಜಖಂಗೊಂಡಿದ್ದು, ಶಸ್ತ್ರಚಿಕಿತ್ಸೆ ನಡೆಸಬೇಕಿದೆ.
ಮಿತಿಮೀರಿದ ಕಾಡಾನೆಗಳ ಉಪಟಳ: ಕೊಡಗರಹಳ್ಳಿ ಮತ್ತು ಉಪ್ಪುತೋಡು, 7ನೇ ಹೊಸಕೋಟೆ ಹಾಗೂ ಕಂಬಿಬಾಣೆ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮೀತಿಮಿರಿದ್ದು ಕಾಫಿ ಬೆಳೆಗಾರರು, ಕೂಲಿ, ಕೃಷಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆಗಳನ್ನು ಸ್ಥಳಾಂತರಿಸಿ ಇಲ್ಲವೇ ನಮ್ಮನ್ನೇ ಸ್ಥಳಾಂತರಿಸಿ ಎಂಬ ಕೂಗು ಕೇಳಿ ಬರುತ್ತಿದೆ.ಇತ್ತೀಚೆಗೆ ನಡೆದ ಗಜಗಣತಿಯ ಪ್ರಕಾರ ಕೊಡಗಿನಲ್ಲಿ 1103ರಷ್ಟು ಕಾಡಾನೆಗಳು ನೆಲೆಕಂಡುಕೊಂಡಿವೆ. ಆನೆ- ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರವನ್ನು ಅರಣ್ಯ ಇಲಾಖೆ ಕಂಡುಕೊಳ್ಳಬೇಕು. ಆದರೆ ಅರಣ್ಯ ಇಲಾಖೆಯು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ, ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಚರಣೆ, ಜೀವ ಹಾನಿ, ಆಸ್ತಿಪಾಸ್ತಿ ನಷ್ಟಕ್ಕೆ ಪರಿಹಾರ ನೀಡುವುದು ಇಷ್ಟಕ್ಕೇ ಸಮೀತಗೊಂಡಿದೆ. ವೈಜ್ಞಾನಿಕ ನೆಲೆಗಟ್ಟಿನ ಪರಿಹಾರ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಾಗಲಷ್ಟೇ ಮಾನವ- ಆನೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಾಣಲು ಸಾಧ್ಯ.
ಅರೆಕಾಡು ಶಾಲೆ ಸಮೀಪ ಕಾಡಾನೆಗಳು ಪ್ರತ್ಯಕ್ಷ: ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಸಿಬ್ಬಂದಿಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಮಡಿಕೇರಿ ತಾಲೂಕಿನ ಅರೆಕಾಡು ಶಾಲೆಯ ಸಮೀಪ ಶನಿವಾರ ಕಾಡಾನೆಗಳು ಪ್ರತ್ಯಕ್ಷಗೊಂಡು ಅಪಾಯದ ಮುನ್ಸೂಚನೆ ಕಂಡು ಬಂದಿತ್ತು.ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದರು. ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದರು. ನಂತರ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ವಾಹನದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಮನೆ ಮನೆಗಳಿಗೆ ತಲುಪಿಸಿದರು. ಸಕಾಲದಲ್ಲಿ ಕಾರ್ಯೋನ್ಮುಖರಾಗಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರಿದ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯವನ್ನು ಸ್ಥಳೀಯ ಗ್ರಾಮಸ್ಥರು ಶ್ಲಾಘಿಸಿದ್ದಾರೆ.