ಸಾರಾಂಶ
ಕಾಡುಪ್ರಾಣಿಗಳ ಉಪಟಳಕ್ಕೆ ಜನ ಹೈರಾಣು । ಆರೂಢಿ ಬಳಿ ಕಾಡು ಹಂದಿ ದಾಳಿಯಿಂದ ಬಾಳೆ ಬೆಳೆ ಹಾನಿ । ಕೈಗಾರಿಕಾ ಪ್ರದೇಶದಲ್ಲಿ ಆತಂಕ ಹೆಚ್ಚಿಸಿದ ಚಿರತೆ ಓಡಾಟ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರವರ್ಷಾಂತ್ಯದ ದಿನಗಳಲ್ಲಿ ತಾಲೂಕಿನ ವಿವಿದೆಡೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿ ಕಂಡು ಬರುತ್ತಿದ್ದು, ರೈತರು, ಕಾರ್ಮಿಕರು ಆತಂಕಕ್ಕೊಳಗಾಗಿದ್ದಾರೆ.
ಒಂದೆಡೆ ಕಾಡುಹಂದಿಗಳು ಹಳ್ಳಿಗಳಲ್ಲಿ ಹೊಲ-ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿರುವುದು ರೈತರನ್ನು ಕಂಗೆಡಿಸಿದೆ. ಮತ್ತೊಂದೆಡೆ ದೊಡ್ಡಬಳ್ಳಾಪುರ ನಗರಕ್ಕೆ ಸಮೀಪ ಇರುವ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಚಿರತೆ ಹಾವಳಿ ಕಂಡು ಬಂದಿದೆ.ಕಾಡು ಹಂದಿಗಳ ಉಪಟಳ
ತಾಲೂಕಿನ ಗಡಿ ಗ್ರಾಮಗಳಲ್ಲಿ ಕಾಡುಹಂದಿಗಳು ರೈತರ ಹೊಲ, ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿವೆ. ಆರೂಢಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮಲಗುಂಟೆ ಗ್ರಾಮದ ಹೊರವಲಯದಲ್ಲಿರುವ ಜಮೀನುಗಳಲ್ಲಿ ಅಬ್ಬರಿಸಿರುವ ಕಾಡು ಹಂದಿಗಳ ಗುಂಪು ಸುಮಾರು 300 ಬಾಳೆ ಗಿಡಗಳನ್ನು ನಾಶ ಮಾಡಿವೆ.ಆರೂಢಿ ಗ್ರಾಪಂ ಮಾಜಿ ಅಧ್ಯಕ್ಷೆ ಜಯಮ್ಮ ಪ್ರಭು ಎಂಬುವವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಬಾಳೆ ಗಿಡಗಳ ನೆಡಲಾಗಿದ್ದು, ಸೋಮವಾರ ಬೆಳಗಿನಜಾವ ದಾಳಿ ನಡೆಸಿರುವ ಹಂದಿಗಳ ಹಿಂಡು, ಬಾಳೆ ತೋಟವನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಘಟನೆಯಲ್ಲಿ ಅಪಾರ ಹಾನಿ ಸಂಭವಿಸಿದೆ.
ಮುಂದುವರೆದ ಚಿರತೆ ಆತಂಕದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಹಾವಳಿ ಕಳೆದ 3 ದಿನಗಳಿಂದ ಹೆಚ್ಚಿದೆ. ಈ ಭಾಗದ ಅರೇಹಳ್ಳಿ- ಗುಡ್ಡದಹಳ್ಳಿ ಬಳಿ ಇರುವ ಅಪೆರಲ್ ಪಾರ್ಕ್ ಬಳಿ ಭಾನುವಾರ ಚಿರತೆ ಓಡಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಸೋಮವಾರ ನಸುಕಿನಜಾವ ಸುಮಾರು 2.30ರ ವೇಳೆಯಲ್ಲಿ ಅಜಾಕ್ಸ್ ಕಂಪನಿಯ ಮುಂಭಾಗ ಹಾದು ಹೋಗಿರುವ ಚಿರತೆಯ ದೃಶ್ಯ ಕಂಪನಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ಎರಡು ದಿನದ ಹಿಂದಷ್ಟೇ ವೀರಾಪುರ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಎರಡೂ ಕಡೆ ಚಿರತೆ ಸಂಚಾರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಚಿರತೆಯ ಚಲನವಲನದಿಂದ ರಾತ್ರಿ ಪಾಳಿಯ ಕೆಲಸಗಾರರು ಸಂಚರಿಸಲು ಭಯಪಡುವಂತಾಗಿದೆ. ಜೊತೆಗೆ ಕೈಗಾರಿಕಾ ಪ್ರದೇಶದ ಅಕ್ಕಪಕ್ಕದ ಗ್ರಾಮಗಳ ಜನರಲ್ಲೂ ಆತಂಕ ಮನೆ ಮಾಡಿದೆ. ತಾಲೂಕಿನ ಹುಲುಕುಡಿ ಬೆಟ್ಟ ಸಾಲಿನ ಹಲವು ಗ್ರಾಮಗಳು, ಘಾಟಿ ಸುಬ್ರಹ್ಮಣ್ಯ, ತೂಬಗೆರೆ ಹೋಬಳಿಯ ಕೆಲ ಗ್ರಾಮಗಳಲ್ಲೂ ಚಿರತೆ ಆತಂಕವಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮಸ್ಥರು ಹಾಗೂ ವಿವಿಧ ಕಂಪನಿಗಳ ಸಿಬ್ಬಂದಿ ಒತ್ತಾಯಿಸಿದ್ದಾರೆ.ದೊಡ್ಡಬಳ್ಳಾಪುರ ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ಚಿರತೆ ಓಡಾಟ ವಿವಿಧ ಕಂಪನಿಗಳ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕಾರ್ಮಿಕರು ಆತಂಕಗೊಂಡಿದ್ದಾರೆ. ಸಾವಿರಾರು ಜನ ಮಹಿಳೆಯರೂ ಸೇರಿದಂತೆ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಪಾಳಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಓಡಾಡಲೂ ಹೆದರುವಂತಾಗಿದೆ.- ರಾಕೇಶ್‌ಕುಮಾರ್ ಕೈಗಾರಿಕಾ ಪ್ರದೇಶದ ಕಂಪನಿಯೊಂದರ ನೌಕರ.ತಾಲೂಕಿನ ಕೆಲವೆಡೆ ಕಾಡುಹಂದಿಗಳ ದಾಳಿ, ಚಿರತೆ ಓಡಾಟದ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ನೋಡಿ ಭಯವಾಗುತ್ತಿದೆ. ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು.
- ಸುಮಿತ್ರಮ್ಮ ಗೃಹಿಣಿ.