ಕಾಡು ಹಂದಿ ದಾಳಿ, ಮೃತ ಮಹಿಳೆ ಕುಟುಂಬಕ್ಕೆ 15ಲಕ್ಷ ಪರಿಹಾರ

| Published : Mar 09 2024, 01:32 AM IST

ಸಾರಾಂಶ

ಕಾಡುಹಂದಿ ದಾಳಿಯಿಂದ ಮೃತಪಟ್ಟಿದ್ದ ಮಹಿಳೆ ಕವಿತಾ ಅವರ ಕುಟುಂಬಕ್ಕೆ ಸಚಿವ ಈಶ್ವರ ಖಂಡ್ರೆ ಅವರು 24ಗಂಟೇಲಿ 15ಲಕ್ಷ ರು.ಗಳ ಪರಿಹಾರದ ಚೆಕ್‌ ವಿತರಿಸಿದರು

ಕನ್ನಡಪ್ರಭ ವಾರ್ತೆ ಬೀದರ್‌

ಬೀದರ್‌ ದಕ್ಷಿಣ ಕ್ಷೇತ್ರ ಹೊಕ್ರಾಣಾ (ಕೆ) ಗ್ರಾಮದ ಹೊಲದಲ್ಲಿ ಜೋಳದ ಕಟಾವಿಗೆ ಹೋದಾಗ ಕಾಡುಹಂದಿ ದಾಳಿಯಿಂದ ಮೃತಪಟ್ಟಿದ್ದ ಮಹಿಳೆ ಕವಿತಾ ಅವರ ಕುಟುಂಬಕ್ಕೆ ಅರಣ್ಯ, ಜೈವಿಕ ಮತ್ತು ಪರಿಸರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು 24ಗಂಟೇಲಿ 15ಲಕ್ಷ ರು.ಗಳ ಪರಿಹಾರದ ಚೆಕ್‌ ವಿತರಿಸಿದರು.

ಅವರು ಶುಕ್ರವಾರ ಹೊಕ್ರಾಣಾ (ಕೆ) ಗ್ರಾಮದ ಮೃತ ಕುಟುಂಬದ ಮಹಿಳೆಯ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ 15 ಲಕ್ಷ ರು.ಗಳ ಚೆಕ್‌ ವಿತರಿಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿ, ಮಹಿಳೆ ಮೃತಪಟ್ಟಿರುವುದು ವಿಷಾಧನಿಯ ಸಂಗತಿಯಾಗಿದೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.

ಭಗವಂತ ಮೃತ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಈ ಘಟನೆ ನಡೆದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಮೃತ ಕುಟುಂಬದ ಸದಸ್ಯರಿಗೆ 24 ತಾಸಿನಲ್ಲಿ ಪರಿಹಾರ ನೀಡುವ ಕೆಲಸ ಮಾಡಲಾಗಿದೆ. ಈ ಕುಟುಂಬಕ್ಕೆ ಪರಿಹಾರದ ಹೊರತಾಗಿ 5 ವರ್ಷಗಳವರೆಗೆ 4 ಸಾವಿರ ರು. ಮಾಶಾಸನ ನೀಡಲಾಗುತ್ತದೆ ಎಂದು ತಿಳಿಸಿದರು.

ನಮ್ಮ ಜಿಲ್ಲೆಯಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು ಅವುಗಳ ನಿಯಂತ್ರಣಕ್ಕಾಗಿ ಕ್ರಮ ವಹಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಮತ್ತು ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಕಲಬುರಗಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್‌ ಪನ್ವಾರ್‌, ಬೀದರ್‌ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂಎ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಾಂತಕುಮಾರ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹೇಂದ್ರ ಮೌರ್ಯ ಸೇರಿದಂತೆ ಅರಣ್ಯ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಹೊಕ್ರಾಣ ಕೆ. ಗ್ರಾಮಸ್ಥರು ಉಪಸ್ಥಿತರಿದ್ದರು.