ಕಾಡಾನೆಗಳ ಹಿಂಡು ದಾಳಿ: ಕೃಷಿ ಫಸಲು ಹಾನಿ

| Published : Dec 07 2023, 01:15 AM IST

ಸಾರಾಂಶ

ಯಸಳೂರು ಸಮೀಪದ ಬಾಳೆಕೆರೆ ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆಯಲ್ಲಿ ಅಲ್ಲಿದ್ದ ಕಾಡಾನೆಗಳು ಬೆದರಿ ನಮ್ಮೂರಿನತ್ತ ಬಂದು ಹಾವಳಿ ಎಬ್ಬಿಸಿದ್ದು, ಫಸಲು ನಷ್ಟಪಡಿಸುತ್ತಿವೆ. ಕೂಡಲೆ ಅರಣ್ಯಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಅಲ್ಲದೇ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಕೃಷಿಕ ಕೃಷ್ಣಕುಮಾರ್ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕಿನ ಕೊಡ್ಲಿಪೇಟೆ ಸಮೀಪದ ಈಚಲಪುರ ಮತ್ತು ಕ್ಯಾತೆ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ಕೃಷಿ ಭೂಮಿಗೆ ದಾಳಿ ಮಾಡಿ ಫಸಲು ಹಾನಿ ಮಾಡಿದೆ.

ಗ್ರಾಮ ನಿವಾಸಿ ಕೃಷ್ಣ ಕುಮಾರ್ ಎಂಬವರ ಅಡಕೆ ತೋಟಕ್ಕೆ ಲಗ್ಗೆ ಇಟ್ಟು ಹಾನಿ ಮಾಡಿದೆ. ಪೈಪ್‌ಗಳು, ನೀರಿನ ಡ್ರಮ್, ಸೋಲಾರ್ ತಂತಿಬೇಲಿ ಇವೆಲ್ಲಾವನ್ನು ಹಾಳುಗೆಡವಿದ್ದು, ಬಾಳೆಗಿಡಗಳನ್ನು ಮುರಿದು ತಿಂದಿವೆ.

ಕ್ಯಾತೆ ಗ್ರಾಮದ ನಿಂಗಯ್ಯ, ಕೇಶವ, ಅಣ್ಣಯ್ಯ, ರಂಗಯ್ಯ ಎಂಬವರ ಭತ್ತದ ಗದ್ದೆಗೆ ನುಗ್ಗಿ, ಪೈರನ್ನು ತಿಂದು ತುಳಿದು ಹಾನಿಗೊಳಿಸಿವೆ.