ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುತಾಲೂಕಿನ ಕಾಡಂಚಿನ ಪ್ರದೇಶ ಹೆಡಿಯಾಲ ಸಮೀಪದ ಮಡುವಿನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಬುಧವಾರ ಮುಂಜಾನೆ ಪ್ರತ್ಯಕ್ಷವಾದ ಮೂರು ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ದಾಂಧಲೆ ನಡೆಸಿ ಬೆಳೆ ನಾಶಪಡಿಸಿವೆ.ಗ್ರಾಮದ ಹೊರ ವಲಯದ ರೈತನೋರ್ವರ ಜಮೀನಿನಲ್ಲಿ ಬೆಳಗ್ಗೆ 4ರ ಸಮಯದಲ್ಲಿ ಪ್ರತ್ಯಕ್ಷವಾದ ಮೂರು ಕಾಡಾನೆಗಳು ಸುತ್ತಲಿನ ಪ್ರದೇಶದಲ್ಲೆಲ್ಲ ಸಂಚರಿಸಿ, ರೈತರ ಜಮೀನಿನಲ್ಲಿ ಬೆಳೆದಿದ್ದ ಹುರುಳಿ, ಬಾಳೆ ಹಾಗೂ ತರಕಾರಿ ಬೆಳೆಗಳನ್ನು ನಾಶಪಡಿಸಿವೆ. ಇನ್ನು ರೈತರ ಜಮೀನಿಗೆ ಆನೆಗಳು ದಾಳಿ ಇಟ್ಟಿರುವ ಕುರಿತು ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ನೂರಾರು ಸಂಖ್ಯೆಯ ಜನರು ಆನೆಗಳನ್ನು ಕಾಡಿನತ್ತ ಓಡಿಸಲು ಮುಂದಾದರಾದರೂ ಸಾಧ್ಯವಾಗಲಿಲ್ಲ, ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಆನೆಗಳನ್ನು ಈರೇಗೌಡನಹುಂಡಿ ಹಾಗೂ ಗಣೇಶಪುರ ಮೂಲಕ ವಾಪಸ್ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.ಎಸಿಎಫ್ ಸತೀಶ್, ಆರ್ಎಫ್ಓ ಮುನಿರಾಜು ಇದ್ದರು. ಇನ್ನು ರೈತರ ಜಮೀನನಿನಲ್ಲಿ ಬೆಳೆದಿರುವ ಹುರುಳಿ ಬೆಳೆ ಕಟಾವಿಗೆ ಬಂದಿರುವುದರಿಂದ ಒಕ್ಕಣೆ ಮಾಡಲೆಂದು ರೈತರು ಮುಂಜಾನೆಯೇ ತಮ್ಮ ಜಮೀನಿಗೆ ತೆರಳುತ್ತಾರೆ, ಇಂತಹ ಸಮಯದಲ್ಲಿ ಆನೆಗಳ ಹಾವಳಿ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ತೊಡಕಾಗುತ್ತಿದ್ದು, ಅರಣ್ಯ ಇಲಾಖೆಯವರು ಕಾಡು ಪ್ರಾಣಿಗಳ ಉಪಟಳ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.